ಬೆಂಗಳೂರು : ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಾರೆಂಬ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆ ಯಡಿಯೂರಪ್ಪ ಅವರನ್ನೇ ಸಿಎಂ ಹುದ್ದೆಯಲ್ಲಿ ಮುಂದುವರಿಸುವಂತೆ ಒತ್ತಡವೂ ಹೆಚ್ಚುತ್ತಿದೆ. ಈ ನಡುವಲ್ಲೇ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ನಡುವೆ ನಡೆದಿರುವ ರಹಸ್ಯ ಮಾತುಕತೆ ಇದೀಗ ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಹೌದು, ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ 4 ಬಾರಿ ಮುಖ್ಯಮಂತ್ರಿಯಾಗಿ ದಾಖಲೆಯನ್ನು ಬರೆದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ರಾಜ್ಯದಲ್ಲಿ ಕಮಲ ಪಾಳಯಕ್ಕೆ ಅಸ್ತಿತ್ವವನ್ನೂ ಕೊಟ್ಟವರೂ ಕೂಡ ಇದೇ ಯಡಿಯೂರಪ್ಪ. ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಸಲು ಆರಂಭದಿಂದಲೂ ಪಯತ್ನಗಳು ನಡೆಯುತ್ತಲೇ ಇದೆ. ಈ ನಡುವಲ್ಲೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸಿಎಂ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಿದೆ. ಹೈಕಮಾಂಡ್ ಆದೇಶಕ್ಕೆ ಸಹಮತ ಸೂಚಿಸಿರುವ ಯಡಿಯೂರಪ್ಪ ತನ್ನ 6 ಬೇಡಿಕೆಗಳನ್ನ ಈಡೇರಿಸಿದ್ರೆ ಮಾತ್ರ ಹುದ್ದೆಯಿಂದ ಕೆಳಗಿಯುವುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರದ ರಾಜ್ಯಪಾಲರಾಗಿ ಯಡಿಯೂರಪ್ಪ !

ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಹೊತ್ತಲ್ಲೇ ಯಡಿಯೂರಪ್ಪ ಮಹಾರಾಷ್ಟ್ರದ ರಾಜ್ಯಪಾಲರಾಗ್ತಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಇದೀಗ ಹೈಕಮಾಂಡ್ ಒತ್ತಡಕ್ಕೆ ಮಣಿದು ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸೋದಕ್ಕೆ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಕೇರಳ, ರಾಜಸ್ತಾನದ ರಾಜ್ಯಪಾಲರ ಹುದ್ದೆಯನ್ನು ನೀಡುವಂತಿಲ್ಲ. ಬದಲಾಗಿ ಮಹಾರಾಷ್ಟ್ರ ಅಥವಾ ಮಧ್ಯಪ್ರದೇಶದ ರಾಜ್ಯಪಾಲರ ಹುದ್ದೆಯನ್ನೇ ನೀಡಬೇಕು.
ಆ ಒಕ್ಕಲಿಗ ನಾಯಕನಿಗೆ ಸಿಎಂ ಪಟ್ಟ !

ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಲೇ ಒಕ್ಕಲಿಗ ನಾಯಕರು ಕಾಂಗ್ರೆಸ್ ಪರ ಒಲವು ತೋರಿಸಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಕೂಡ ಒಕ್ಕಲಿಗರ ಮತಗಳನ್ನೇ ನೆಚ್ಚಿಕೊಂಡಿದೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಪಾತ್ರವಹಿಸಲಿರುವ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿರುವ ರಾಷ್ಟ್ರೀಯ ಬಿಜೆಪಿ ರಾಜ್ಯದಲ್ಲಿಯೂ ಒಕ್ಕಲಿಗ ನಾಯಕನಿಗೆ ಸಿಎಂ ಪಟ್ಟ ಕಟ್ಟಲು ಮುಂದಾಗಿದೆ. ಯಡಿಯೂರಪ್ಪ ಹೈಕಮಾಂಡ್ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ತಾನು ಸೂಚಿಸುವ ಒಕ್ಕಲಿಗ ನಾಯಕನೇ ಸಿಎಂ ಆಗಬೇಕು ಎಂದ ಯಡಿಯೂರಪ್ಪ, ತಮಗೆ ಆಪ್ತರಾಗಿರುವ ಹಿರಿಯ ಸಚಿವ ಆರ್.ಅಶೋಕ್ ಅವರನ್ನೇ ಸಿಎಂ ಆಗಿ ನೇಮಕ ಮಾಡಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದಾರೆ.
ಬಿ.ವೈ.ವಿಜಯೇಂದ್ರ ಅವರಿಗೆ ಡಿಸಿಎಂ ಪಟ್ಟ

ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕೊನೆಗೂ ರಾಜ್ಯದ ಸಚಿವ ಸಂಪುಟ ಸೇರುವ ಕಾಲ ಸನ್ನಿಹಿತವಾಗಿದೆ. ಹೈಕಮಾಂಡ್ ಆಶಯದಂತೆ ಯಡಿಯೂರಪ್ಪ ಸಕ್ರೀಯ ರಾಜಕಾರಣದಿಂದ ದೂರವಾದ್ರೆ ಬಿಎಸ್ ವೈ ಎರಡನೇ ಪುತ್ರ ವಿಜಯೇಂದ್ರ ಸಚಿವರಾಗೋದು ಗ್ಯಾರಂಟಿ. ಬಿಎಸ್ವೈ ಈಗಾಗಲೇ ತಮ್ಮ ಕಿರಿಯ ಪುತ್ರ ವಿಜಯೇಂದ್ರ ಅವರನ್ನೇ ಡಿಸಿಎಂ ಆಗಿ ನೇಮಕ ಮಾಡಬೇಕೆಂಬ ಒತ್ತಡ ಹೇರಿದ್ದಾರೆ. ರಾಜ್ಯದಲ್ಲಿ ಇಬ್ಬರಿಗೆ ಮಾತ್ರ ಡಿಸಿಎಂ ಹುದ್ದೆಯನ್ನು ನೀಡಬೇಕು. ಒಂದು ಹುದ್ದೆಯನ್ನು ವಿಜಯೇಂದ್ರ ಅವರಿಗೆ ಹಾಗೂ ಇನ್ನೊಂದು ಹುದ್ದೆಗೆ ಅರವಿಂದ ಕಾರಜೋಳ ಅವರನ್ನೇ ನೇಮಿಸಬೇಕೆಂದು ಡಿಮ್ಯಾಂಡ್ ಇಟ್ಟಿದ್ದಾರೆ.
ಶಿಕಾರಿಪುರದಿಂದಲೇ ವಿಜಯೇಂದ್ರಗೆ ಟಿಕೇಟ್

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರಾಗಿ ಆಯ್ಕೆಯಾಗುತ್ತಲೇ ತೆರವಾಗುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಬಿ.ವೈ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕು. ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆ ಆಗಬೇಕೆಂಬ ಡಿಮ್ಯಾಂಡ್ ಅನ್ನು ಜೆ.ಪಿ.ನಡ್ಡಾ ಅವರ ಮುಂದೆ ಇಟ್ಟಿದ್ದಾರೆ.

ಡಿಸೆಂಬರ್ ವರೆಗೆ ನಾನೇ ಸಿಎಂ

ರಾಜ್ಯದ ಮುಖ್ಯಮಂತ್ರಿ ಹುದ್ದೆಯಿಂದ ಆತುರಾತುರವಾಗಿ ತಾನು ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ. ಬದಲಾಗಿ ಡಿಸೆಂಬರ್ ವರೆಗೂ ತನ್ನನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯ ಕುರಿತು ಮಾತನಾಡುವಂತಿಲ್ಲ ಅಂತಾ ಬಿಎಸ್ವೈ ಅವರು ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆನ್ನಲಾಗುತ್ತಿದೆ.

ಸಿಎಂ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಅವರ ನಡುವಿನ ಮಾತುಕತೆ ಇದೀಗ ತೀವ್ರ ಕುತೂಹಲವನ್ನೇ ಮೂಡಿಸಿದೆ. ಬಿಎಸ್ ವೈ ಡಿಮ್ಯಾಂಡ್ ಗೆ ಹೈಕಮಾಂಡ್ ಮಣಿಯುವ ಸಾಧ್ಯತೆ ಹೆಚ್ಚಿದೆ. ಯಡಿಯೂರಪ್ಪ ಅವರ ದ್ವೇಷಕಟ್ಟಿಕೊಂಡು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಯಡಿಯೂರಪ್ಪ ಅವರನ್ನೇ ಬಿಜೆಪಿಯಲ್ಲಿಯೇ ಉಳಿಸಿಕೊಂಡು ಮುನ್ನಡೆಯಲು ಬಿಜೆಪಿ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಮುಂದಿನ 5 ತಿಂಗಳಲ್ಲಿ ರಾಜಾಹುಲಿ ಸಿಎಂ ಆಗಿ ಮುಂದುವರಿಯುವುದು ಖಚಿತ.