ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರವಹಿಸಿಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಘಟಕಕ್ಕೆ ನೂತನ ಅಧ್ಯಕ್ಷರ ಆಯ್ಕೆಗೆ ಮುಂದಾಗಿದ್ದಾರೆ. ಡಿಕೆಶಿ ಪರಮಾಯ್ತ ಮಿಥುನ್ ರೈ ಹಾಗೂ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಯವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ಬಸನಗೌಡ ಬಾದರ್ಲಿ ಅವರ ಅವಧಿ ಮಾರ್ಚ್ 31ಕ್ಕೆ ಮುಗಿಯಲಿದೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರ ಅನುಮತಿಯನ್ನು ಪಡೆಯದೇ ಬಾದರ್ಲಿ ಅವರನ್ನು ಉಸ್ತುವಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಡಿ.ಕೆ.ಶಿವಕುಮಾರ್ ಯುವ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆ ನಡೆಯುವುದಿಲ್ಲ. ಬದಲಾಗಿ ಪಕ್ಷ ವರಿಷ್ಠರು ಯುವ ಘಟಕದ ಅಧ್ಯಕ್ಷರ ಆಯ್ಕೆಯ ಹೊಣೆಯನ್ನು ಡಿ.ಕೆ.ಶಿವಕುಮಾರ್ ಹೆಗಲಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಯುವ ಘಟಕಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ.

ಯುವ ಘಟಕಕ್ಕೆ ನೂತನ ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆಯೇ ರಾಜ್ಯದಾದ್ಯಂತ ಯುವ ಕಾಂಗ್ರೆಸ್ ಘಟಕಗಳಲ್ಲಿನ ಪದಾಧಿಕಾರಿಗಳನ್ನು ಬದಲಾವಣೆ ಮಾಡಲು ಡಿ.ಕೆ.ಶಿವಕುಮಾರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಯುವಕನ್ನು ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಯುವ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ.