ಬೆಂಗಳೂರು : ಸದ್ಯ ಪಕ್ಷವನ್ನು ಸಂಘಟಿಸುವ ಹಾಗೂ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರೋ ಕನಸಿನಲ್ಲಿರೋ ಕಾಂಗ್ರೆಸ್ ಗೆ ಅದ್ಯಾಕೋ ಮುಸ್ಲಿಂ ಸಮುದಾಯವೇ ಕಂಟಕ ವಾಗಿ ಪರಿಣಮಿಸೋ ಸಾಧ್ಯತೆ ದಟ್ಟವಾಗಿದೆ. ಹೌದು ಈಗಾಗಲೇ ಕಾಂಗ್ರೆಸ್ ನಿಂದ ಅಸಮಧಾನಗೊಂಡಿರುವ ಮುಸ್ಲಿಂ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಪಕ್ಷ ತೊರೆದಿದ್ದರೇ ಇನ್ನೋರ್ವ ನಾಯಕ ಜಮೀರ್ ಅಹ್ಮದ್ ಖಾನ್ (Zameer Ahmed) ಕೂಡ ತಮ್ಮ ಅಸಮಧಾನವನ್ನು ಮುಂದುವರೆಸಿದ್ದು, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಹೌದು, ಕಳೆದ ಒಂದು ತಿಂಗಳಿನಿಂದ ಚಾಮರಾಜಪೇಟೆ ಶಾಸಕ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್’ ಬಗ್ಗೆ ಅಸಮಧಾನಗೊಂಡಿರುವ ಜಮೀರ್ ಅಹ್ಮದ್ ಖಾನ್ ಕೆಪಿಸಿಸಿ ಕಚೇರಿಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ಸಭೆ ಹಾಗೂ ಸುದ್ದಿಗೋಷ್ಠಿಗಳಿಗೂ ಗೈರಾಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿರುವ ಜಮೀರ್, ರಾಜ್ಯ ಪ್ರವಾಸದಲ್ಲರೋ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಖಾಸಗಿ ಹೋಟೆಲ್’ನಲ್ಲಿ ಭೇಟಿ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಪಕ್ಷ ಹಾಗೂ ಪಕ್ಷದ ರಾಜ್ಯ ನಾಯಕರ ವಿರುದ್ಧ ತಮಗಿರುವ ಅಸಮಧಾನವನ್ನು ಹೊರಹಾಕಿದ್ದಾರಂತೆ.
ಮುಖ್ಯವಾಗಿ ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಅಸಮಧಾನ ತೋಡಿಕೊಂಡಿದ್ದಾರೆ. ಮುಸ್ಲಿಂ ಸಮುದಾಯ ಕಾಂಗ್ರೆಸ ಜೊತೆ ನಿಂತಿದೆ. ಆದರೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಹಿಜಾಬ್, ಹಲಾಲ್ ಸೇರಿದಂತೆ ಹಲವು ವಿವಾದ ಸೃಷ್ಟಿಯಾಗಿದೆ. ಆದರೆ ಈ ವಿಚಾರದಲ್ಲಿ ಸ್ಪಷ್ಟವಾದ ನಿಲುವು ಹಾಗೂ ಹೋರಾಟಕ್ಕೆ ನಿಲ್ಲುವಲ್ಲಿ ಕಾಂಗ್ರೆಸ್ ಯಾವುದೇ ಆಸಕ್ತಿ ತೋರುತ್ತಿಲ್ಲ.
ಈ ವಿಚಾರಗಳನ್ನು ಎದುರಿಸುವಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜಮೀರ್ ಸುರ್ಜೇವಾಲ್ ಎದುರು ಕಾಂಗ್ರೆಸ್ ಧೋರಣೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾ ರಂತೆ. ಮಾತ್ರವಲ್ಲ ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಿದ್ದಕ್ಕೆ ಸಿದ್ಧರಾಮಯ್ಯನವರ ಬೆಂಬಲಕ್ಕೂ ಯಾರು ಬಂದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಡಿಕೆಶಿ ವಿರುದ್ಧ ದೂರು ನೀಡಿದ್ದಾರಂತೆ. ಒಟ್ಟಿನಲ್ಲಿ ಸದ್ಯ ಕಾಂಗ್ರೆಸ್ ಪಾಲಿಗೆ ಉಳಿದಿರುವ ಕೆಲವೇ ಕೆಲವು ಮುಸ್ಲಿಂ ನಾಯಕರಲ್ಲಿ ಜಮೀರ್ ಅಹ್ಮದ್ ಖಾನ್ ಒಬ್ಬರಾಗಿದ್ದು ಕೈಪಾಳಯದ ಮೇಲೆ ಜಮೀರ್ ಗೆ ಹುಟ್ಟಿರೋ ಬೇಸರ ಯಾವ ಸ್ವರೂಪ ಪಡೆದುಕೊಳ್ಳುತ್ತೆ. ಚುನಾವಣೆ ಹೊತ್ತಿನಲ್ಲಿ ಇದೇ ವಿಚಾರ ಕಾಂಗ್ರೆಸ್ ಗೆ ಮುಳುವಾಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : KS Eshwarappa : ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್ ಬಿಗಿಪಟ್ಟು:ನಾಳೆ ಅಹೋರಾತ್ರಿ ಧರಣಿ
ಇದನ್ನೂ ಓದಿ : ಈಶ್ವರಪ್ಪ ಬಚಾವ್ ಮಾಡಲು ಸಿಎಂ ಮಾಸ್ಟರ್ ಪ್ಲ್ಯಾನ್ : ಸಿಐಡಿ ತನಿಖೆಗೆ ಸಂತೋಷ್ ಕೇಸ್
Zameer Ahmed complains to Randeep Surjewala of neglect of Muslims at State Congress