ಧರ್ಮಸ್ಥಳ : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಧರ್ಮಸ್ಥಳದ ಮಂಜುನಾಥನ ದೇವಸ್ಥಾನ ಜೂನ್ 1ರಿಂದ ಆರಂಭಗೊಳ್ಳಲಿದ್ದು, ಭಕ್ತರಿಗೆ ದೇವರ ದರ್ಶನ ಹಾಗೂ ಸೇವಾ ಕೈಂಕರ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.


ಜೂನ್ 1ರಿಂದಲೇ ಧರ್ಮಸ್ಥಳದಲ್ಲಿ ಭಕ್ತರು ದೇವರ ದರ್ಶನವನ್ನು ಪಡೆಯಬಹುದಾಗಿದೆ. ಬರುವ ಭಕ್ತರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿಯೂ ಕ್ರಮಕೈಗೊಳ್ಳಲಾಗುತ್ತಿದ್ದು, ಭಕ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗೋಪಾಯಗಳನ್ನು ಅನುರಿಸಲಾಗುತ್ತಿದೆ.

ರಾಜ್ಯ ಸರಕಾರದ ಮಾರ್ಗಸೂಚಿಯನ್ನು ದೇವಸ್ಥಾನದಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡುವುದರ ಜೊತೆಗೆ ದೇವಸ್ಥಾನದ ಆಡಳಿತ ಮಂಡಳಿಯಿಂದಲೂ ಹಲವು ನಿಯಮಾವಳಿಗಳನ್ನು ಜಾರಿಗೊಳಿಸಲಾಗುತ್ತದೆ. ಕೊರೊನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ವಸತಿ ಗೃಹಗಳು ಬಂದ್ ಆಗಿರಲಿವೆ ಎಂದು ತಿಳಿಸಿದೆ.