- ವಂದನಾ ಕೊಮ್ಮುಂಜೆ
ರಜಸ್ವಲೆ ಅಥವಾ ಮುಟ್ಟಾಗೋದು ಇದು ಹೆಣ್ಣಿನ ಬಾಳಿನ ಪ್ರಮುಖ ಘಟ್ಟ. ಇದು ಪ್ರಕೃತಿ ಹೆಣ್ಣಿಗೆ ಕೊಟ್ಟ ಹೆಣ್ತನದ ಶಕ್ತಿ. ಇದೇ ಮುಂದಿನ ಮಾನವ ಸಂತಾನಕ್ಕೆ ದಾರಿ ಕೂಡಾ . ಇದು ಸರಿಯಾಗಿಲ್ಲಅಂದ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಇದಕ್ಕಾಗಿ ಹೆಣ್ಣು ಮಕ್ಕಳು ಹಲವು ಆಸ್ಪತ್ರೆ ಅಲೆಯುತ್ತಾರೆ. ಆದ್ರೆ ಈ ದೇವಾಲಯಕ್ಕೆ (Kamakhya Temple) ಬಂದ್ರೆ ಹೆಣ್ಣಿನ ಪ್ರತಿ ಸಮಸ್ಯೆಗೂ ಪರಿಹಾರ ಸಿಗುತ್ತೆ. ಯಾಕಂದ್ರೆ ಇಲ್ಲಿ ಆ ಜಗನ್ಮಾತೆಯೇ ಹೆಣ್ತನದ ಪ್ರತಿರೂಪವಾಗಿ ನಿಂತಿದ್ದಾಳೆ.

ಹೌದ, ಇದು ಜಗತ್ತಿನ ವಿಶೇಷದಲ್ಲಿ ವಿಶೇಷವಾದ ದೇವಾಲಯ. ಇದು ಎಲ್ಲ ದೇವಾಲಯಗಳಂತಲ್ಲ. ಈ ದೇವಾಲಯದ ರೂಪ ಆಚರಣೆ ಎಲ್ಲಾ ಭಿನ್ನ. ಇಲ್ಲಿ ಜಗನ್ಮಾತೆ ವಿಶೇಷ ರೂಪದಲ್ಲಿ ನೆಲೆ ನಿಂತಿದ್ದಾಳೆ. ಉಳಿದ ದೇವಾಲಯಗಳಂತೆ ಇಲ್ಲಿ ದೇವಿಯ ಮೂರ್ತಿಯನ್ನು ಆರಾಧಿಸಲಾಗುವುದಿಲ್ಲ. ಬದಲಾಗಿ ಆಕೆಯ ದೇಹದ ಒಂದು ಭಾಗವನ್ನು ಇಲ್ಲಿ ಪೂಜಿಸಲಾಗುತ್ತೆ. ಅದ್ಯಾವ ಭಾಗ ಅಂದ್ರೆ ಯೋನಿ (ಗುಪ್ತಾಂಗ).

ಇದು ಪ್ರಕೃತಿಯ ಸೃಷ್ಟಿಯ ಪ್ರತೀಕವಾಗಿ ನಿಂತಿರುವ ದೇವಾಲಯ ಅಂದ್ರೆ ತಪ್ಪಾಗಲ್ಲ. ಇದನ್ನು ದೇವಿಯ ಯೋನಿ ಪೀಠ ಅಂತಾನೆ ಕರೆಯಲಾಗುತ್ತೆ. ದೇಹವು ಜೀವ ಅನ್ನೋದನ್ನು ಪಡೆಯೋದೆ ಇಲ್ಲಿಂದ ಅನ್ನೋ ತತ್ವವನ್ನು ಈ ಪೀಠ ಸಾರುತ್ತೆ. ಹೀಗಾಗಿ ದೇಹದ ಯಾವುದೇ ಸಮಸ್ಯೆಗೂ ಈ ತಾಯಿ ಪರಿಹಾರ ನೀಡ್ತಾಳೆ. ಹೆಣ್ಣು ಮಕ್ಕಳ ಏನೇ ಸಮಸ್ಯೆ ಇದ್ರು ಇಲ್ಲಿ ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಭಕ್ತರದು.

ಈ ದೇವಾಲಯದ ಸ್ಥಳ ಪುರಾಣ ಶಿವ ಸತಿಯರಿಗೆ ಪ್ರೇಮದ ಸಂಕೇತವನ್ನು ಸಾರುತ್ತೆ. ಶಿವನ ಮೊದಲ ಪತ್ನಿ ಸತಿ. ಆಕೆಯ ತಂದೆ ಪ್ರಜಾಪತಿ ದಕ್ಷನಿಗೆ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಶಿವನಿಗೆ ಅವಮಾನ ಮಾಡಲೆಂದು ದಕ್ಷ, ಯಜ್ಞವೊಂದನ್ನು ಆಯೋಜಿಸುತ್ತಾನೆ. ಆದರೆ ಶಿವನಿಗೆ ಆಹ್ವಾನ ನೀಡಿರೋದಿಲ್ಲ. ಆದರೆ ಸತಿ ಮಾತ್ರ ಪತಿ ತಡೆದರೂ ಹಟಮಾಡಿ ಯಜ್ಞಕ್ಕೆ ಹೋಗುತ್ತಾಳೆ. ಆದರೆ ಅಲ್ಲಿ ದಕ್ಷನಿಂದ ಅವಮಾನಿತಳಾದ ಆಕೆ ಯಜ್ಞಕುಂಡಕ್ಕೆ ಬೀಳುತ್ತಾಳೆ.

ಇದರಿಂದ ಕುಪಿತನಾದ ಶಿವ ದಕ್ಷನ್ನು ಸಂಹರಿಸಿ ಸತಿಯ ದೇಹವನ್ನು ಹಿಡಿದು ಬ್ರಂಹಾಂಡವನ್ನು ಸುತ್ತುತ್ತಿರುತ್ತಾನೆ. ಶಿವನನ್ನು ಶಾಂತನಾಗಿಸಲು ವಿಷ್ಣುವು ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಕತ್ತರಿಸುತ್ತಾನೆ. ಸತಿಯ ದೇಹ 51 ತುಂಡುಗಳಾಗಿ ಭೂಮಿಗೆ ಬೀಳುತ್ತೆ. ಆಗ ಯೋನಿ ಬಿದ್ದ ಜಾಗ ಯೋನಿ ಪೀಠವಾಯಿತು ಅನ್ನೋ ನಂಬಿಕೆ ಇಲ್ಲಿದೆ . ಹೀಗಾಗಿ ಇಲ್ಲಿ ಯೋನಿಯನ್ನೇ ದೇವಿಯ ರೂಪದಲ್ಲಿ ಆರಾಧಿಸಲಾಗುತ್ತೆ.

ರಜಸ್ವಲೆ ಆಗುತ್ತಾಳೆ ಜಗನ್ಮಾತೆ : ಇಲ್ಲಿ ವರ್ಷಕ್ಕೆ ಒಂದು ಬಾರಿ ತಾಯಿ ಮುಟ್ಟಾಗುತ್ತಾಳೆ. ಅದರ ಸಂಕೇತವಾಗಿ ಇಲ್ಲಿ ಯೋನಿಯಿಂದ ಕೆಂಪನೆ ನೀರು ಹರಿಯುತ್ತಂತೆ. ಜೊತೆ ಹತ್ತಿರದ ಬ್ರಹ್ಮಪುತ್ರ ನದಿ ಕೂಡಾ ಕೆಂಪು ಬಣ್ಣಕ್ಕೆ ತಿರುಗುತ್ತಂತೆ. ಜೂನ್ ತಿಂಗಳಲ್ಲಿ ನಡೆಯೋ ಈ ವಿಸ್ಮಯ ನೋಡೋಕೆ ಅಂತಾನೆ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಇದೇ ಸಮಯದಲ್ಲಿ ಇಲ್ಲಿ 4 ದಿನಗಳ ಕಾಲ ಉತ್ಸವನ್ನು ಆಯೋಜಿಸಲಾಗುತ್ತೆ. ಇದನ್ನು ಅಂಬೂಬಾಚಿ ಮೇಳ ಅಂತ ಕರೆಯುತ್ತಾರೆ.

ಆದ್ರೆ ದೇವಾಯದಲ್ಲಿ ಉತ್ಸವ ನಡೆದ್ರೂ. ಮೊದಲ ಮೂರು ದಿನ ಈ ದೇವಾಲಯದ ಗರ್ಭಗುಡಿಯಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ನಡೆಯೋದಿಲ್ಲ. ಬದಲಾಗಿ ಗರ್ಭಗುಡಿ ಯನ್ನು ಮುಚ್ಚಲಾಗುತ್ತೆ. ಯಾರಿಗೂ ಗರ್ಭಗುಡಿಗೆ ಪ್ರವೇಶವಿಲ್ಲ. ಈ ಸಮಯದಲ್ಲಿ ತಾಯಿ ವಿಶ್ರಾಂತಿಯಲ್ಲಿರುತ್ತಾಳೆ ಎನ್ನೋ ನಂಬಿಕೆ ಭಕ್ತರದು. 4ನೇ ದಿನ ಮುಂಜಾನೆ ಗರ್ಭಗುಡಿ ಯನ್ನು ತೆರೆದು ತಾಯಿಗೆ ಸ್ನಾನ ಮಾಡಿಸಿ ಶುಚಿ ಮಾಡಲಾಗುತ್ತೆ.ಇನ್ನುಈ ಸಮಯದಲ್ಲಿ ತಾಯಿ ಹೆಚ್ಚು ಜಾಗೃತಳಾಗಿರುತ್ತಾಳೆ ಅನ್ನೋ ನಂಬಿಕೆ ಭಕ್ತರದು. ಈ ಮೂರು ದಿನ ಭಕ್ತಿಯಿಂದ ತಾಯಿಯನ್ನು ನೆನೆದರೆ ಇಷ್ಟಾರ್ಥ ಈಡೇರುತ್ತೆ ಅಂತಾರೆ ಭಕ್ತರು.

ಇಲ್ಲಿನ ಮತ್ತೊಂದು ವಿಶೇಷವೆಂದರೆ ಇಲ್ಲಿ ಕೊಡೋ ಪ್ರಸಾದ .ಇಲ್ಲಿ ಎರಡು ರೀತಿ ಪ್ರಸಾದ ಕಾಣಬಹುದು. ಒಂದು ತಾಯಿ ರಜಸ್ವಲೆ ಆದಾಗ ಅಲ್ಲಿಂದ ಹರಿದ ಕೆಂಬಣ್ಣದ ನೀರನ್ನು ತೀರ್ಥವಾಗಿ ನೀಡಲಾಗುತ್ತೆ. ಮತ್ತೊಂದು ತಾಯಿ ರಜಸ್ವಲೆ ಆದಾಗ ಯೋನಿಯ ಭಾಗಕ್ಕೆ ಬಿಳಿ ಬಟ್ಟೆಯನ್ನು ಹಾಕಲಾಗುತ್ತೆ. ಅದನ್ನೇ ಪ್ರಸಾದ ರೂಪದಲ್ಲಿ ಹಂಚಲಾಗುತ್ತೆ. ಇದನ್ನು ಪಡೆದ ಭಕ್ತರು ಕೃತಾರ್ಥರಾಗುತ್ತಾರೆ. ಇಲ್ಲಿಯ ದೇವಾಲಯದ ರಚನೆಯೂ ಉಳಿದ ದೇವಾಲಯಕ್ಕಿಂತ ಭಿನ್ನ. ಇಲ್ಲಿನ ಗರ್ಭಗುಡಿಯ ಗೋಪುರವು ಜೇನು ಗೂಡಿನ ರೀತಿಯಲ್ಲಿದೆ. ಈ ದೇವಾಲಯವನ್ನು ದೇವಶಿಲ್ಪಿ ವಿಶ್ವಕರ್ಮ ಕಟ್ಟಿಸಿದ ಅನ್ನೋ ನಂಬಿಕೆ ಇದೆ. ದೇವಾಲಯಕ್ಕೆ ನಾಲ್ಕು ದ್ವಾರಗಳಿದ್ದು ಸಂಪತ್ತು, ರಾಜಯೋಗ, ಮೋಕ್ಷ, ಸಾವನ್ನು ಪ್ರತಿನಿಧಿಸುತ್ತೆ. ದ್ವಾರಗಳಿಂದ ದೇವಾಲಯಕ್ಕೆ ಪ್ರವೇಶಿಸಿದ್ರೆ ಜೀವನ ಚಕ್ರದಿಂದ ಮುಕ್ತರಾಗಿ ಮೋಕ್ಷ ಪಡೆಯುತ್ತಾರೆ ಅನ್ನೋ ನಂಬಿಕೆ ಇದೆ.

ಅಂದ ಹಾಗೆ ಈ ವಿಸ್ಮಯಕಾರಿ ದೇವಾಲಯವಿರೋದು ಭಾರತದ ಈಶಾನ್ಯ ರಾಜ್ಯವಾದ ಅಸ್ಸಾಂ ನ ಗೌಹಾಟಿಯಲ್ಲಿ. ಇಲ್ಲಿನ ನಿಲಾಚಲ್ ಬೆಟ್ಟದಲ್ಲಿ ಸತಿದೇವಿಯು ಕಾಮಾಕ್ಯ ದೇವಿಯಾಗಿ ನೆಲೆಸಿದ್ದಾಳೆ. ಬ್ರಹ್ಮಪುತ್ರ ನದಿಯ ನದಿಯ ದಡದಲ್ಲಿ ಇರೋ ಕಾಮಾಕ್ಯ ದೇವಾಲಯ ದೇವಿಯ ಶಕ್ತಿ ಪೀಠಗಳಲ್ಲೊಂದು. ಇದು ಅಸ್ಸಾಂನ ಪ್ರಮುಖ ಯಾತ್ರಾ ಸ್ಥಳಗಳೊಂದು ಕೂಡಾ. ಅಸ್ಸಾಂ ರೈಲ್ವೇ ನಿಲ್ಧಾಣದಿಂದ 8 ಕಿಲೋ ಮೀಟರ್ ದೂರದಲ್ಲಿರೋ ದೇವಾಲಯಕ್ಕೆ ತೆರಳೋಕೆ ವಾಹನ ಸೌಲಭ್ಯವಿದೆ. ಸಾಧ್ಯವಾದರೆ ಜೀವನದಲ್ಲಿ ಒಂದು ಬಾರಿ ಈ ಅದ್ಬುತ ದೇವಾಲಯಕ್ಕೆ ಭೇಟಿ ನೀಡಿ.
ಇದನ್ನೂ ಓದಿ : ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರನ ವೈಭವದ ಬಗ್ಗೆ ಇಲ್ಲಿದೆ ಮಾಹಿತಿ
ಇದನ್ನೂ ಓದಿ : ಶಯೋಮಿ ಹೊಸ ಸ್ಮಾರ್ಟ್‌ಫೋನ್; 5ಜಿ, ವೇಗದ ಚಾರ್ಜಿಂಗ್ ಸೌಲಭ್ಯದ ಭರವಸೆ
(Kamakhya Temple there is a Solution to the problem of daughters )