- ಸುಶ್ಮಿತಾ ಸುಬ್ರಹ್ಮಣ್ಯ
ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳಲಿ ಪ್ರಮುಖವಾದ ದೇವಾಲಯ ಕಟೀಲು ದುರ್ಗಾಪರಮೇಶ್ವರಿ ದೇವಾಲಯ. ಇಲ್ಲಿಯ ಮಹಿಮೆ ಅರಿತಿಲ್ಲಾ ಅನ್ನುವವರಿಲ್ಲಾ, ಕೈಮುಗಿಯ ದವರಿಲ್ಲ, ದೇವರ ಪ್ರಸಾದವನ್ನು ಕಣ್ಣು ಮುಚ್ಚಿ ಸ್ವಿಕರಿಸದವರಿಲ್ಲ. ಮಲ್ಲಿಗೆಯ ದೇವಿ ಅಂತಾನೇ ಈ ತಾಯಿನ ಕರಿತಾರೆ ಭಕ್ತರು.

ಈ ದೇವಿಯನ್ನು ನಂಬಿದ ಭಕ್ತರನ್ನು ತಾಯಿ ಯಾವತ್ತು ಕೈ ಬಿಡುವುದಿಲ್ಲ ಅನ್ನೊ ಭಕ್ತೀ ಇಲ್ಲಿಯ ಜನರದ್ದು. ಅರುಣಾಸುರ ಎಂಬ ರಾಕ್ಷಸ ಬ್ರಹ್ಮನಿಂದ 2 ಕಾಲು ಹಾಗೂ 4 ಕಾಲುಗಳಿರುವ ಯಾವ ಜೀವಿಗಳಿಂದಲೂ ತನಗೆ ಸಾವು ಬರಬಾರದೆಂಬ ವರವನ್ನು ಪಡೆದಿದ್ದನು. ಇದೇ ಕಾರಣದಿಂದಲೇ ಮೂರು ಲೋಕಗಳು ಅರುಣಾಸರನ ಕೈವಶವಾದವು.

ತ್ರಿಮೂರ್ತಿಗಳು ಸೇರಿ ದೇವಿಯ ಮೊರೆ ಹೋಗುತ್ತಾರೆ. ನಂತರ ದೇವಿ 6 ಕಾಲಿನ ದುಂಭಿಯ ರೂಪತಾಳಿ ಈ ಆರುಣಾಸುರನನ್ನು ಸಂಹರಿಸುತ್ತಾಳೆ. ಬಳಿಕ ಅಲ್ಲೇ ನಂದಿನಿ ನದಿಯ ಮಧ್ಯದಲ್ಲಿ ನೆಲೆಸುತ್ತಾಳೆ. ಈ ಸ್ಥಳವೇ ಮುಂದೆ ಕಟೀಲು ಎಂದು ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಅಲ್ಲದೇ ನದಿಯ ಮಧ್ಯದಲ್ಲಿರುವ ದೇವಸ್ಥಾನವೇ ಇಲ್ಲನ ವಿಶೇಷ.

ಇನ್ನು ಕಟಿ ಎಂದರೇ ಸೊಂಟ ಇಲಾ ಎಂದರೇ ಭೂಮಿ. ದೇವಿಯು ಭೂಮಿಯಿಂದ ತನ್ನ ದೇಹವನ್ನು ಸೊಂಟದ ಮೇಲೆ ಲಿಂಗ ರೂಪದಲ್ಲಿ ಕಾಣಿಸುತ್ತಾಳೆ. ಇದರಿಂದ ಇಲ್ಲಿಗೆ ಕಟೀಲಾ ಎಂದು ಹೆಸರು ಬಂತು ಎನ್ನಲಾಗುತ್ತದೆ. ಸಮಯ ಕಳೆದಂತೆ ಇದೇ ಸ್ಥಳ ಕಟೀಲು ಆಯಿತು.

ಕಟೀಲು ದೇವಸ್ಥಾನದ ಹತ್ತಿರವೇ ಆದಿ ಕಟೀಲು ದೇವಾಲಯವಿದೆ. ದೇವಿ ಅರುಣಾಸುರ ರಾಕ್ಷಸ ಸಂಹಾರ ಮಾಡಿದ್ದು ಇದೇ ಜಾಗದಲ್ಲಿ. ರಾಕ್ಷಸ ಸಂಹಾರವಾದ್ದರಿಂದ ಈ ಸ್ಥಳ ಅಪವಿತ್ರ ಎಂದು ಭಾವಿಸಿ ದೇವಿ ನದಿಯ ಮಧ್ಯದಲ್ಲಿ ನೆಲೆ ನಿಲ್ಲುತ್ತಾಳೆ. ಆದ್ದರಿಂದ ಈ ಆದಿ ಕಟೀಲು ದೇವಾಲಯದ ಬಗ್ಗೆ ಹಲವರಿಗೆ ತಿಳಿದಿಲ್ಲ.ಈ ದೇವಸ್ಥಾನದಲ್ಲಿರುವ ಇನ್ನೊಂದು ವಿಶೇಷತೆ ಎಂದರೆ ಇಲ್ಲಿನ ಚಿನ್ನದ ರಥ. ತಿರುಮಲದ ಚಿನ್ನದ ರಥವನ್ನು ಬಿಟ್ಟರೆ ಇದೇ ಪ್ರಪಂಚದ 2ನೇ ಅತೀ ದೊಡ್ಡ ಚಿನ್ನದ ರಥ ಇರುವುದು ಕಟೀಲು ದುರ್ಗಾಪರಮೇಶ್ವರಿಯ ಸನ್ನಧಿಯಲ್ಲಿ. ಇಲ್ಲಿ ವಾರ್ಷಿಕ ಹಬ್ಬವೇ ಪ್ರಮುಖವಾದ ಹಬ್ಬ. ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಮಲ್ಲಿಗೆ ಎಂದರೇ ಬಲು ಇಷ್ಟ.

ಪ್ರತೀ ಶುಕ್ರವಾರವೂ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತಿದ್ದು, ಈ ವೇಳೆಯಲ್ಲಿ ದೇವಿಗೆ 5000ಕ್ಕೂ ಹೆಚ್ಚು ತೆಂಗಿನ ಕಾಯಿಯನ್ನು ಸಮರ್ಪಿಸಲಾಗುತ್ತದೆ. ಆದರೆ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಸಂಪಿಗೆ ಹೂವನ್ನು ಅರ್ಫಿಸುವಂತಿಲ್ಲ. ರಂಗ ಪೂಜೆ ಇಲ್ಲಿನ ವಿಶೇಷ ಪೂಜೆಗಳಲ್ಲಿ ಒಂದು. ನಿತ್ಯವೂ ಅನ್ನದಾನ ಸೇವೆ ನೆರವೇರುತ್ತಿದ್ದು, ವರ್ಷಂಪ್ರತಿ 10 ಲಕ್ಷಕ್ಕೂ ಅಧಿಕ ಮಂದಿ ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಿಗೆ ಆಗಮಿಸಿ, ಅನ್ನ ಪ್ರಸಾದವನ್ನು ಪ್ರಸಾದವನ್ನು ಸ್ವಿಕರಿಸುತ್ತಾರೆ.

ಧಾರ್ಮಿಕ ಕ್ಷೇತ್ರವಾಗಿಯಷ್ಟೇ ಅಲ್ಲಾ ಶೈಕ್ಷಣಿಕವಾಗಿ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ವಿದ್ಯಾದಾನವನ್ನೂ ಮಾಡಿಕೊಂಡು ಬಂದಿದೆ. ದೇವಸ್ಥಾನದ ವತಿಯಿಂದ ಒಟ್ಟು 4 ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು, ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಕಟೀಲು ತಾಯಿಯ ಸನ್ನಿಧಿಯಲ್ಲಿ ಗೋ ಸೇವೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.