ಯಾವ ರೀತಿ ನಿಂತು ಹೋದ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತದೆಯೋ ಅದೇ ರೀತಿ ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯ ಗುರುತಿಸುವಂತ ವಿಶೇಷ ಗುಣ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಸೊಶಿಯಲ್ ಮೀಡಿಯಾ ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಬಹಳಷ್ಟು ಪ್ರತಿಭೆಗೂ ಇದು ಮೊದಲ ವೇದಿಕೆಯಾಗಿದೆ. ಕೆಲವರು ಅಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ, ಇನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಅದೆಷ್ಟೋ ಜನ ಇಲ್ಲಿ ಜನಜನಿತರಾಗಿದ್ದೂ ಇದೆ, ಇನ್ನೂ ಕೆಲವರು ಛಲದಿಂದ ಆ ದಿನಕ್ಕಾಗಿ ಕಾದು ಕುಳಿತು ಖ್ಯಾತಿ ಹೊಂದಿದವರೂ ಇದ್ದಾರೆ. ಅಂತಹವರಲ್ಲಿ ಕಾಬಿ ಅಂತಾನೇ ಹೆಸರುವಾಸಿಯಾಗಿರುವ ಕಬಾನಿ ಲಾಮಿ ಕೂಡಾ (Khaby Lame) ಒಬ್ಬರು.
ಇಪ್ಪತ್ತು ವರ್ಷದ ಹಿಂದೆ ಕಾಬಿ ತನ್ನ ಕುಟುಂಬದೊಂದಿಗೆ ಸೆನೆಗಲ್ ನಿಂದ ಇಟಲಿಗೆ (Italy) ಕೆಲಸಕ್ಕಾಗಿ ವಲಸೆ ಬಂದರು. ಆದರೆ ಜೀವನ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕೈಯಲ್ಲಿ ಹಣವಿರಲಿಲ್ಲ. ಸಾಕಷ್ಟು ಕಡೆ ತಿರಸ್ಕಾರಗಳನ್ನು ಅನುಭವಿಸಿ, ಕೊನೆಗೆ ಒಂದು ಹೊಟೇಲಿನಲ್ಲಿ ವೈಟರ್ ಆಗಿ ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡಿ, ತಿಂಗಳಿಗೆ ೧೦೦೦ ಡಾಲರ್ ಸಂಪಾದಿಸುತ್ತಿದ್ದವನು. ಈತನ ಜೀವನದಲ್ಲಿ ತಿರುವು ಕಂಡಿದ್ದು ಕೊರೋನಾ ಸೋಂಕಿನ ಸಂದರ್ಭದಲ್ಲಿ. ಹೌದು, ತಾನು ಮಾಡುತ್ತಿದ್ದ ಕೆಲಸ ಕಳೆದು ಕೊಂಡ ಅವನು ಯಾವುದೇ ಪ್ರತಿಫಲವನ್ನು ಬಯಸದೇ ಜನರನ್ನು ನಗಿಸುವ ನಿರ್ಧಾರ ಮಾಡಿದನು. ಆ ಸಂದರ್ಭದಲ್ಲಿ ಪ್ರವೃತ್ತಿಯಲ್ಲಿದ್ದ ಸಾಮಾಜಿಕ ಜಾಲತಾಣ ಟಿಕ್ ಟಾಕ್. ಇದನ್ನು ಬಳಸಿಕೊಂಡು ಜನರನ್ನು ನಗಿಸಲು ಮುಂದಾದನು.
ಕಾಬಿಗೆ ಮಾಡುವ ವೀಡಿಯೋಗಳು ಸಣ್ಣ, ಸೃಜನಶೀಲ ಹಾಗೂ ಮನೋರಂಜನೀಯವಾಗಿದ್ದವು. ಅವನು ಜಟಿಲವಾದ ಲೈಫ್ ಹ್ಯಾಕ್ ಗಳನ್ನು ವಸ್ತುವಾಗಿಟ್ಟುಕೊಂಡು ಅದರ ಸರಳ ರೀತಿಯನ್ನು ತೋರಿಸಿ ಕೊಡುವ ಮೂಲಕ ಜನರನ್ನು ನಗಿಸುತ್ತಿದ್ದ. ಹೀಗೆ ಮಾಡುತ್ತಿದ್ದ ಈತನ ಮೊದಲ ವೀಡಿಯೋದ ವೀಕ್ಷಕರು ಕೇವಲ ಇಬ್ಬರು ಆತನ ತಂದೆ ಹಾಗೂ ನೆರೆ ಮನೆಯವರು. ಒಂದು ತಿಂಗಳ ನಂತರ ಆ ವೀಡಿಯೋಗೆ ೯ ವೀಕ್ಷಣೆ ಹಾಗೂ ೨ ಚಂದಾದಾರರಿದ್ದರು. ಆದರೂ ಹಿಂಜರಿಯದೇ ಕೈಗೆತ್ತಿಕೊಂಡ ಕಾರ್ಯ ಮುಂದುವರೆಸಿದನು. ಕಾಲಾನಂತರ ಆತನ ವೀಡಿಯೋಗಳು ಹೆಚ್ಚು ಜನ ವೀಕ್ಷಿಸಲು ಆರಂಭಿಸಿದರು. ಅಲ್ಲದೇ ಇತರರಿಗೂ ಕಳುಹಿಸುವ ಮೂಲಕ ಇನ್ನೂ ಹೆಚ್ಚು ಜನ ವೀಕ್ಷಿಸುವಂತಾಗುತ್ತಿತ್ತು. ಹೀಗೆ ಕಾಲಕ್ರಮೇಣ ಚಂದಾದಾರರ ಸಂಖ್ಯೇಯೂ ಹೆಚ್ಚಿ, ಅದರ ಮೂಲಕ ಪ್ರಖ್ಯಾತಿಯಾದನು. ಈಗ ೨೦೦ ಮಿಲಿಯನ್ ಚಂದಾದಾರರನ್ನು ಇವನ ಚಾನೆಲ್ ಗಳಿಸಿದೆ ಜೊತೆಗೆ ಇದೇ ವೀಡಿಯೋಗಳ ಮೂಲಕ ಹಣವನ್ನೂ ಗಳಿಸುತ್ತಿದ್ದಾನೆ.
೨೨ ವರ್ಷದ ಕಾಬಿ ಕೇವಲ ೨ ವರ್ಷಗಳಲ್ಲಿ ಒಬ್ಬ ಫೇಮಸ್ ಮೀಡಿಯಾ ಪರ್ಸನಾಲಿಟಿಯಾಗಿದ್ದಾನೆ. ಯಾವುದೇ ಕಾರ್ಯವಾಗಲಿ ನೀವು ಮಾಡಬೇಕು ಅಂದುಕೊಂಡಿದ್ದನು ಯಾವುದೆ ಹಿಂಜರಿಕೆಯಿಲ್ಲದೇ ಮುಂದುವರೆಸಿ ಜೊತೆಗೆ ಪ್ರಯತ್ನಿಸದೇ ನಿಮ್ಮನ್ನು ನೀವು ಅಳೆದುಕೊಳ್ಳಬೇಡಿ, ಹೀಗಾದಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂಬುದು ಕಾಬಿ ಯುವ ಪೀಳಿಗೆಗೆ ಕೊಡುವ ಸಂದೇಶ. ಏನೇ ಆಗಲಿ ಜೀವನ ಇಂದಿನಂತೆ ನಾಳೆ ಇರುವುದಿಲ್ಲ ಎಂಬುದಕ್ಕೆ ಈತನೇ ಉದಾಹರಣೆ.
ಇದನ್ನೂ ಓದಿ: Rob Greenfield: ಆಧುನಿಕ ಗಾಂಧಿ ರೋಬ್ ಗ್ರೀನ್‌ಫೀಲ್ಡ್
Khaby Lame: World’s Most Followed Tik Toker