Rob Greenfield : ಆಧುನಿಕ ಗಾಂಧಿ ರೋಬ್ ಗ್ರೀನ್‌ಫೀಲ್ಡ್

ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಗಾರ, ಸರಳ ಸಜ್ಜನಿಕೆಯ ವಿರಳ ಜೀವನ ಸಾಗಿಸಿದ ಮಹಾನ್ ನಾಯಕ, ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು (Mahatma Gandhiji) ವಿಶ್ವಕ್ಕೆ ಆದರ್ಶ ವ್ಯಕ್ತಿ. ಇಂತಹ ಮಹಾನ್ ವ್ಯಕ್ತಿಯನ್ನು ಮಾದರಿಯಾಗಿಸಿಕೊಂಡು, ಅವರ ಜೀವನದ ಚರಿತ್ರೆಯಿಂದ ಪ್ರೇರಣೆಗೊಂಡು, ನಮ್ಮಿಂದ ಪರಿಸರದ ಮೇಲಾಗುವ ದೌರ್ಜನ್ಯಕ್ಕೆ ಮರುಗಿದ ಆಧುನಿಕ ಸ್ವಾವಲಂಬಿ, ಸ್ವಾಭಿಮಾನಿ ಅಮೇರಿಕಾದ ‘ರೋಬ್ ಗ್ರೀನ್‌ಫೀಲ್ಡ್’ (Rob Greenfield).

ಈತ ಒಬ್ಬ ಅದ್ಭುತ ಜ್ಞಾನೋದಯಗೊಂಡ ಯೋಗಿ ಅಂದರೆ ಅತಿಶಯೋಕ್ತಿಯಲ್ಲ. ಸಾಮಾಜಿಕ ಕಾರ್ಯಕರ್ತ, ಸ್ವಯಂ ಸೇವಕ. ಸುಸ್ಥಿರ ಮಾನವೀಯತೆ, ನ್ಯಾಯ ಮತ್ತು ಸಮಾನ ಸರಳ ಜೀವನಕ್ಕೆ ಮಾದರಿಯಾಗಿ ಆ ಮೌಲ್ಯಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಹೃದಯ ಶ್ರೀಮಂತ ಈ ರೋಬ್ ಗ್ರೀನ್‌ಫೀಲ್ಡ್. ಗಂಟೆಗಟ್ಟಲೆ ಭಾಷಣ ಮಾಡಿ ವೇದಿಕೆಯಿಂದ ಇಳಿದಾಗ ಅದನ್ನೇ ಮರೆಯುವ ಮತ್ತು ನಮ್ಮಿಂದ ಆಗದಿದ್ದರೂ ಇತರರು ಹಾಗಿರಬೇಕು, ಹೀಗಿರಬೇಕು ಎಂದು ಬಯಸುವ ಮತ್ತು ಅದೆಲ್ಲಾ ಸಿನಿಮಾದಲ್ಲಿ ಮಾತ್ರ ಚೆಂದ ಎಂದು ಮೂದಲಿಸುವ ನಾನಾ ಬಗೆಯ ಜನರ ಮಧ್ಯೆ ಗಾಂಧಿ ತತ್ವದ ಜೊತೆ ತಾನೆ ಆ ಮೌಲ್ಯಗಳ ಮಾದರಿಯಾಗಿ ತೋರಿಸಿದ ಶ್ರೇಷ್ಠ ವ್ಯಕ್ತಿತ್ವ ‘ರೋಬ್’ ಅವರದ್ದು.

ಯಾರು ಈ ರೋಬ್ ಗ್ರೀನ್ ಫೀಲ್ಡ್ ?
ರೋಬ್ ಗ್ರೀನ್‌ಫೀಲ್ಡ್ ಆಗಸ್ಟ್ 28, 1986 ರಲ್ಲಿ ಜನಿಸಿದ ಒಬ್ಬ ಅಮೇರಿಕನ್ ಸಾಹಸಿ, ಪರಿಸರ ಕಾರ್ಯಕರ್ತ, ವಿಶ್ವ ಪ್ರವಾಸಿ, ಗ್ರೀನ್‌ಫೀಲ್ಡ್ ಗ್ರೂಪ್‌ನ ಸ್ಥಾಪಕ. ಗ್ರೀನ್‌ಫೀಲ್ಡ್ ಹುಟ್ಟಿ ಬೆಳೆದದ್ದು ವಿಸ್ಕಾನ್ಸಿನ್‌ನ ಆಶ್‌ಲ್ಯಾಂಡ್‌ನಲ್ಲಿ. ತನ್ನ 18 ನೇ ವಯಸ್ಸಿನಲ್ಲಿ ಬಾಯ್ಸ್ ಸ್ಕೌಟ್‌ಸ್‌ನಲ್ಲಿ ಅತ್ಯುನ್ನತ ಸ್ಥಾನವಾದ ‘ಈಗಲ್ ಸ್ಕೌಟ್’ ರ‍್ಯಾಂಕ್ ಪಡೆದ ಸಾಹಸಿ.ಶ್ರೀಮಂತ ಜೀವನದ ಬಗ್ಗೆ ಅನಾಸಕ್ತಿ ತೋರಿದ ವ್ಯಕ್ತಿತ್ವ ಇವರದ್ದು. ಅದೆಷ್ಟೋ ಕೋಟ್ಯಾನು ಕೋಟಿ ಜೀವ ಸಂಕುಲಕ್ಕೆ ಆಶ್ರಯ, ಆಸರೆಯಾದ ಈ ಭೂಮಿ ಮತ್ತು ಈ ಪ್ರಕೃತಿಗೆ ನಮ್ಮಿಂದ ಆಗುತ್ತಿರುವ ಅತ್ಯಾಚಾರಗಳಿಂದ ನೊಂದು ಅವರೊಳಗಿನ ಮನೋ ಶ್ರೀಮಂತಿಕೆ ಜಾಗೃತವಾಗುತ್ತದೆ. ಅದಕ್ಕೆ ಪೂರಕ ಎಂಬಂತೆ ನಮ್ಮ ರಾಷ್ಟ್ರಪಿತ ಗಾಂಧೀಜಿಯ ಜೀವನ ಮೌಲ್ಯಗಳಿಂದ ಪ್ರೇರಣೆಯಾಗಿ ರೋಬ್ ಅವರ ಕಣ್ಣು ತೆರೆಯುವಂತೆ ಮಾಡುತ್ತವೆ. ಗಾಂಧೀಜಿಯವರ “ನೀನು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯನ್ನು ಮೊದಲು ನೀನು ಆಗಿ ತೋರಿಸು” ಎಂಬ ಒಂದು ತತ್ವದಿಂದ ಪ್ರೇರೇಪಿತರಾಗುತ್ತಾರೆ.

ಅಲ್ಲಿಂದ ಅವರು ಪ್ಲಾಸ್ಟಿಕ್ ಸಮಸ್ಯೆ, ಐಷಾರಾಮಿ ಜೀವನದಿಂದ ಉಂಟಾಗುವ ತೊಂದರೆಗಳು, ರಾಸಾಯನಿಕ ಆಹಾರ ಪದಾರ್ಥಗಳಂತಹ ಪ್ರಮುಖ ಜಾಗತಿಕ ಸಮಸ್ಯೆಗಳತ್ತ ಗಮನ ಸೆಳೆಯಲು ಮತ್ತು ಸಕಾರಾತ್ಮಕ ಪ್ರೇರಣೆ ನೀಡಲು ಇವರು ತೀವ್ರ ಯೋಜನೆಗಳನ್ನು ಕೈಗೊಳ್ಳುತ್ತಾರೆ. ಇವರ ಈ ಕಾರ್ಯಗಳನ್ನು ‘ನ್ಯಾಷನಲ್ ಜೀಯೋಗ್ರಫಿಕ್’ (National Geographic) ಸೇರಿದಂತೆ ಹಲವು ಮಾಧ್ಯಮಗಳು ಪ್ರಸಾರ ಮಾಡಿವೆ. ಫ್ರಾಸ್ಸ್ ೨ ದೂರ ದರ್ಶನವು ‘ರೋಬ್’ ಅವರನ್ನು ‘ದಿ ರಾಬಿನ್ ಹುಡ್ ಆಫ್ ಮಾಡರ್ನ್ ಟೈಮ್ಸ್’ (The Robinhood of Modern Times) ಎಂದು ಬಿರುದು ನೀಡಿ ಗೌರವಿಸಿದೆ. ವಿಶೇಷವೆಂದರೆ, ತಮ್ಮ ಮಾಧ್ಯಮ ಗಳಿಕೆಯ ಪೂರ್ತಿ ಸಂಪಾದನೆಯನ್ನು ಬಡವರಿಗೆ ದಾನ ಮಾಡುತ್ತಾರೆ. ಅವರೆ ಹೇಳುವಂತೆ ನಾನು ಒಬ್ಬ ಸರಳ, ಸ್ವಾಭಿಮಾನಿ ಮತ್ತು ಜವಾಬ್ದಾರಿಯುತವಾಗಿ ಬದುಕಲು ಬದ್ಧನಾಗಿರುವೆ ಎನ್ನುತ್ತಾರೆ. ಜೊತೆಗೆ ಭಾರತದ ‘ವಸುಧೈವ ಕುಟುಂಬಕಂ’ ಅಂದರೆ ಈ ಜಗತ್ತೇ ನನ್ನ ಕುಟುಂಬ ಎಂಬಂತೆ, ಇಲ್ಲಿರುವವರೆಲ್ಲಾ ನಮ್ಮವರು ಎಂಬ ಭಾವದ ಜೊತೆಗೆ, ನಮ್ಮ ಸುತ್ತ – ಮುತ್ತಲಿನ ಪ್ರಪಂಚವನ್ನೂ ಸುಧಾರಿಸುವ ಶಕ್ತಿಯನ್ನು ನಾವು ಹೊಂದಿದ್ದೇವೆ ಎಂದು ನಂಬಿದ್ದಾರೆ.

ರಾಬ್ ನ ಸಾಧನೆ ಏನು?
ಈ ಆಧುನಿಕ ಯುಗದಲ್ಲಿ ಇವರು ಮಾಡಿದ ಸಾಧನೆಯೇ ಒಂದು ತಪಸ್ಸು. ಅವರು ಆಹಾರದ ವಿಷಯದಲ್ಲಿ ಸಾಧಿಸಿದ ಸ್ವಾವಲಂಬನೆ ಮತ್ತು ಸಾತ್ವಿಕತೆ ಮೆಚ್ಚತಕ್ಕದ್ದು. ಕಿರಾಣಿ ಅಂಗಡಿಗಳು ಬೇಕಿಲ್ಲ, ರೆಸ್ಟೋರೆಂಟ್, ವಿನಾಯಿತಿ ಇವುಗಳ ಹಂಗಿಲ್ಲ. ಪ್ರಕೃತಿ, ಉಧ್ಯಾನವನ, ಔಷದಿ ಗಿಡಗಳ ತೋಟಗಳೆ ಇವರ ಜೀವನ. ಜೈವಿಕ ತ್ಯಾಜ್ಯಗಳನ್ನು ಗ್ಯಾಸ್‌ನಲ್ಲಿ ಬೇಯಿಸಿ ಗೊಬ್ಬರವಾಗಿ ಬಳಸಿ ಮಾಡುವ ಇವರ ಕೃಷಿ ಅದ್ಭುತ ಮತ್ತು ವಿಸ್ಮಯ. ಅಭಿವೃದ್ಧಿ ಹೊಂದಿದ ದೊಡ್ಡಣ್ಣ ಎಂಬ ಕಿರೀಟ ಹೊಂದಿದ ಹಲವರ ಕನಸಿನ ಲೋಕ ಅಮೇರಿಕಾದಲ್ಲಿ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಈ ಪ್ಲಾಸ್ಟಿಕ್ ಎಂಬ ಮಹಾ ಸಮಸ್ಯೆಗಳನ್ನು ಹತ್ತಿರದವರು, ಪಾಲಿಕೆ ಸದಸ್ಯರು, ಪಂಚಾಯತ್ ಕೆಲಸದವರು ಮುಂತಾದವರನ್ನು ದೂರಿ ಪಾರಾಗುವ ಈ ಕಾಲದಲ್ಲಿ ಪ್ಲಾಸ್ಟಿಕ್ ಮುಕ್ತ ಜೀವನ ಅಂದರೆ ಕಲ್ಪನೆಯೇ ಸರಿ. ಇದನ್ನು ನಿಜ ಮಾಡಿದವರೇ ರೋಬ್. ಒಮ್ಮೆ ಕಸ ತೊಟ್ಟಿ ಸೇರಿದರೆ, ಅದು ದೃಷ್ಟಿಯಿಂದ ದೂರವಾದರೆ, ನಮ್ಮದಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜನರ ಮಧ್ಯೆ, ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಮೂವತ್ತು ದಿನಗಳ ಕಾಲ ಎಲ್ಲರಂತೆ ಬದುಕಿ ಅವರ ಬಳಕೆಯಲ್ಲಿ ದೊರೆತ ಪ್ಲಾಸ್ಟಿಕ್‌ಗಳನ್ನು ವಸ್ತುವಾಗಿ ಧರಿಸಿ ಪ್ರತಿಭಟಿಸಿದ್ದರು. ಉಳಿದವರು ನಾಚುವಂತೆ ನೈತಿಕ ಜಾಗೃತಿ ಮೂಡಿಸಿದವರು.

ಕರಿಯ-ಬಿಳಿಯ, ಬಡವ-ಸಿರಿವಂತ ಎಂಬ ಬೇಧಗಳ ನಡುವೆ, ಅಸಮಾನತೆಗಳ ಬಗ್ಗೆ ಪುಂಖಾನು ಪುಂಖವಾಗಿ ಭಾಷಣ ಮಾಡುವವರ ಮಧ್ಯೆ, ಅಸಮಾನತೆಯ ಅಮಲೇರಿದ ಜ್ಞಾನಾಂಧರು ನಾಚುವಂತೆ ಬದುಕುವ ಇವರ ಬದ್ಧತೆ ಅದ್ಭುತವಾಗಿದೆ. ಯೇಸುಕ್ರಿಸ್ತ ಹೇಳಿದ ಹಾಗೆ, ಅಂದಂದಿಗೆ ಬೇಕಾದಷ್ಟು ಮಾತ್ರ ಸಂಪಾದಿಸಿ ಉಳಿದದ್ದನ್ನು ಇಲ್ಲದವರಿಗೆ ದಾನ ಮಾಡಿ ಎಂಬ ಮಾತನ್ನು ರೂಢಿಸಿಕೊಂಡವರು ‘ರೋಬ್’. ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಮಾಸಿಕ ಬಿಲ್ಲ್, ವಿಮೆ ಮತ್ತು ಸಾಲವಿಲ್ಲದೆ ಬದುಕುತ್ತಿದ್ದಾರೆ. ಕಸದಿಂದ ರಸ ಎಂಬುದು ಕೇವಲ ಪ್ರದರ್ಶನಕ್ಕೆ ಮತ್ತು ಸ್ಪರ್ಧೆಯ ವಿಷಯವಾಗಿ ಮಾತ್ರ ಉಳಿದ ಈ ಕಾಲದಲ್ಲಿ ಇವರು ಬಳಸಿದ ಉತ್ತಮ ಸ್ಥಿತಿಯಲ್ಲಿದ್ದ ವಸ್ತುಗಳನ್ನು ಮರು ಬಳಕೆ ಮಾಡಿ ೧೦೦ ಚದರ ಅಡಿ ವಿಸ್ತೀರ್ಣದ ಸರಳ ಮತ್ತು ವಿಭಿನ್ನ ಮನೆ ನಿರ್ಮಿಸಿಕೊಂಡು ಅದರಲ್ಲಿ ವಾಸಿಸುತ್ತಿರುವುದು ನಿಜಕ್ಕೂ ಮಾದರಿ. ಈ ಸ್ಮಾರ್ಟ್ ಯುಗದಲ್ಲೂ ಸ್ಮಾರ್ಟ್ ಫೋನ್ ಇಲ್ಲದೆ, ಕಾಲಿಗೆ ಚಪ್ಪಲಿಯೂ ಇಲ್ಲದೆ, ಇದ್ದ ಕಾರನ್ನೂ ಮಾರಿ ಬದುಕುತ್ತಿರುವ ಆದರ್ಶ ವ್ಯಕ್ತಿ.

ವಿಶ್ವದ ದೊಡ್ಡ ಸಮಸ್ಯೆ ಆಹಾರ ಕೊರತೆ ಮತ್ತು ಅಪೌಷ್ಠಿಕತೆ. ದೇಶದ ಅರ್ಧದಷ್ಟು ಸೇವನೆಗೆ ಯೋಗ್ಯವಾದ ಆಹಾರಗಳು ವ್ಯರ್ಥವಾಗುತ್ತಿದೆ. ಅಮೇರಿಕಾದ ಪ್ರತೀ ಏಳು ಮಂದಿ ಯಲ್ಲಿ ಒಬ್ಬನ ಆಹಾರ ವ್ಯರ್ಥವಾಗುತ್ತದೆ. ಸುಮಾರು ಒಂದು ಬಿಲಿಯನ್ ಈ ಭೂಮಿಯ ನಾಗರಿಕರು ಆಹಾರದ ಅಭದ್ರತೆ ಮತ್ತು ಅಲಭ್ಯತೆಗಳಿಂದ ಒದ್ದಾಡುತ್ತಿದ್ದಾರೆ. ಇದ್ದೂ ವ್ಯರ್ಥ ಮಾಡುವವರನ್ನು ಅಣಕಿಸುವಂತೆ ರೋಬ್ ಬದುಕುತ್ತಿದ್ದಾರೆ. ಇವರು ಅಮೇರಿಕಾದ ಸುಮಾರು ನೂರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಹೆಚ್ಚಾಗಿ ಬಿಡುವ ಆಹಾರಗಳಿಂದ ದಿನದ ಊಟ ಮುಗಿಸುತ್ತಾರೆ. ಅಷ್ಟೇ ಅಲ್ಲದೆ ಕೇವಲ ಸಿನಿಮಾ, ಕಥೆಗಳಿಗೆ ಮೀಸಲಾದ ಆದರ್ಶವನ್ನು ನಿಜ ಜೀವನದಲ್ಲಿ ಪ್ರಯೋಗಿಸಿ ಸಾವಿರಕ್ಕೂ ಹೆಚ್ಚು ಬಡವರಿಗೆ ಈ ಆಹಾರ ಒದಗಿಸುವುದಲ್ಲದೆ, ವ್ಯರ್ಥವಾಗುವುದನ್ನು ತಡೆಯುತ್ತಾರೆ. ಸುಮಾರು ೨೦೦೦೦ಕ್ಕೂ ಅಧಿಕ ಜನ ಸೇರಿದ ವೇಧಿಕೆಯಲ್ಲಿ ೧೫೦ಕ್ಕೂ ಹೆಚ್ಚು ಭಾಷಣ ನೀಡಿದ್ದಾರೆ. ಕೃತಿಗೂ ಮಾತಿಗೂ ಅಂತರವಿಲ್ಲದಂತೆ ನೋಡಿಕೊಂಡಿದ್ದಾರೆ. ಇವರು ಈ ನವ ಯುಗದ ಆದರ್ಶ ವ್ಯಕ್ತಿ ಎಂದರೆ ತಪ್ಪಿಲ್ಲ. ಮಹಾತ್ಮರಾಗೋದು ಹುದ್ದೆ, ಬಣ್ಣ, ಸಂಪತ್ತು, ಅಧಿಕಾರದಿಂದಲ್ಲ, ಸರಳ – ಸಜ್ಜನಿಕೆಯ ನೈಜ ಜೀವನ ಕ್ರಮದಿಂದ ಎನ್ನುವುದನ್ನು ರೋಬ್ ಸಾಭಿತು ಪಡಿಸಿದ್ದಾರೆ.

ಇದನ್ನೂ ಓದಿ: Badger Animal : ಕುತೂಹಲ ಕೇರಳಿಸುವ ಬ್ಯಾಡ್ಜೆರ್ ಪ್ರಾಣಿಯ  ಸಂಗತಿಗಳು!!

ಇದನ್ನೂ ಓದಿ: Broadcasting Rights : ಅಬ್ಬಬ್ಬಾ… ಐಪಿಎಲ್ ಮುಂದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ದಾಖಲೆಯೂ ಉಡೀಸ್

Rob Greenfield: Modern Gandhi and Environmental Activist in America


Comments are closed.