ಭಾರತ ಎಲ್ಲಾ ವಿಚಾರಗಳಲ್ಲೂ ಸ್ವಂತಿಕೆಯನ್ನು ಕಾಪಾಡಿಕೊಂಡು ಬಂದಿರುವ ದೇಶ. ಅದು ತನ್ನದೇ ಆದ ಸಂಪನ್ಮೂಲ ಮತ್ತು ಇಲ್ಲಿನ ಸಾಂಪ್ರದಾಯಿಕ ಕರ–ಕುಶಲ ಕಲೆಗಳಿಂದ ಹೆಸರಾಗಿದೆ. ಇಂತಹ ಕುಶಲ ಕಲೆಗಳಲ್ಲಿ ಮರದ ಆಟಿಕೆಗಳು ದೇಶ ವಿದೇಶಗಳಲ್ಲೂ ಅದರ ವಿನ್ಯಾಸ, ನವೀನತೆ ಮತ್ತು ಕಲೆಗೆ ಪ್ರಸಿದ್ಧಿ ಪಡೆದಿವೆ. ಜಾಗತಿಕವಾಗಿ ಭಾರತವನ್ನು ಮಕ್ಕಳ ಆಟಿಕೆಗಳ ಕೇಂದ್ರವಾಗಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಆಕಾಶವಾಣಿಯ ‘ಮನ್- ಕೀ- ಬಾತ್’ನಲ್ಲಿ ಪ್ರಸ್ತಾಪಿಸಿದ್ದರು. ಇಲ್ಲಿ ಉತ್ಪಾದನೆಯಾಗುವ ಆಟಿಕೆಗಳು ಇತ್ತೀಚೆಗೆ ದೇಶಿಯ ಮಾರಾಟ ಮತ್ತು ಬಳಕೆಗೆ ಮಾತ್ರ ಸೀಮಿತವಾಗಿವೆ, ಆದರೆ ವಿದೇಶಗಳಿಗೆ ರಪ್ತಾಗುವ ಯೋಚನೆ ಈ ಕರ-ಕುಶಲ ಕರ್ಮಿಗಳಿಗೆ ಮತ್ತಷ್ಟು ಉತ್ತೇಜನ ನೀಡಿವೆ.
ದೇಶೀಯವಾಗಿ ದೊರೆಯುವ ಮರ, ಪಾಲಿಮರ್ ಬಟ್ಟೆ, ಫೈಬರ್, ರಬ್ಬರ್, ಲೋಹ, ಕಾರ್ಡ್ಬೋರ್ಡ್ ಸಾಮಗ್ರಿಗಳಿಂದ ನಾನಾ ಬಗೆಯ ವೈವಿಧ್ಯಮಯ ಆಟಿಕೆಗಳು ಭಾರತದಲ್ಲಿ ತಯಾರಾಗುತ್ತಿವೆ. ಅಂತಹ ಕೆಲವು ಪ್ರಸಿದ್ಧ ಸಾಂಪ್ರದಾಯಿಕ ಆಟಿಕೆಗಳ ಉದ್ಯಮಗಳೆಂದರೆ ಕರ್ನಾಟಕದ ಚೆನ್ನಪಟ್ಟಣದ ಮರದ ಆಟಿಕೆಗಳು, ಉತ್ತರ ಪ್ರದೇಶದ ಚಿತ್ರಕೂಟದ ಆಟಿಕೆಗಳು, ಮಧ್ಯ ಪ್ರದೇಶದ ಬುಧ್ನಿ-ರೇವಾ ಆಟಿಕೆಗಳು ಮತ್ತು ಆಂಧ್ರ ಪ್ರದೇಶದ ಕೊಂಡಪ್ಪಲ್ಲಿಯ ಆಟಿಕೆಗಳು ವಿಶೇಷವಾದವು.
ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಕೊಂಡಪ್ಪಲ್ಲಿಯಲ್ಲಿರುವ ಸಾಂಪ್ರದಾಯಿಕ ಕರ–ಕುಶಲ ಆಟಿಕೆಗಳ ತಯಾರಿ ಗಮನಾರ್ಹವಾದದ್ದು. ಈ ಕೊಂಡಪ್ಪಲ್ಲಿಯನ್ನು ‘ಆಟಿಕೆಗಳ ತಾಣ’ (Land of Toys) ಎಂದು ಕರೆಯಲಾಗುತ್ತದೆ. ೨೦೨೦ರ ಆಗಸ್ಟ್ ೩೦ರಂದು ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಪ್ರಧಾನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಆಟಿಕೆಗಳ ಉದ್ಯಮ ಏಳು ಲಕ್ಷ ಕೋಟಿ ರೂಪಾಯಿಗಳಿಗಿಂತ ಅಧಿಕವಾಗಿದ್ದರೂ ಇದರಲ್ಲಿ ದೇಶೀಯ ಕೊಡುಗೆ ಬಹಳ ಕಡಿಮೆ ಎಂದರು. ಜೊತೆಗೆ ಆಂಧ್ರ ಪ್ರದೇಶದ ಮರದ ಆಟಿಕೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಇಲ್ಲಿನ ಆಟಿಕೆಗಳು ಸಂಪೂರ್ಣ ದುಂಡಗಿದ್ದು, ಯಾವುದೇ ಕೋನ ಅಥವಾ ಚೂಪಾದ ಅಂಚುಗಳನ್ನು ಹೊಂದಿಲ್ಲ ಹಾಗಾಗಿ ಮಕ್ಕಳಿಗೆ ಪೆಟ್ಟಾಗುವ ಸಮಸ್ಯೆ ಇರುವುದಿಲ್ಲ; ಈ ಆಟಿಕೆಗಳು ಮಕ್ಕಳ ಸೃಜನ ಶೀಲತೆಗೆ ಅವಕಾಶ ನೀಡುವಂತಿವೆ ಎಂದು ಅಭಿಪ್ರಾಯಪಟ್ಟಿದ್ದರು. ಇದು ಕೊಂಡಪ್ಪಲ್ಲಿಯ ಆಟಿಕೆಗಳ ಸೃಜನಶೀಲ ಕುಶಲ-ಕರ್ಮಿಗಳ ಕೌಶಲ್ಯ ಮತ್ತು ಶ್ರಮಕ್ಕೆ ಸಿಕ್ಕ ಫಲ ಎಂದರೆ ತಪ್ಪಾಗಲಾರದು. ಇಲ್ಲಿಯ ಪ್ರತೀ ಆಟಿಕೆಗಳ ಸಮೂಹವು ಪೌರಾಣಿಕ, ಸಹಜ ಜೀವನಕ್ರಮ ಮತ್ತು ವೈಚಾರಿಕ ವಿಚಾರಧಾರೆಗಳ ಕಥೆಗಳನ್ನು ಬಿಂಬಿಸುತ್ತವೆ. ಪ್ರತಿಯೊಂದು ಆಟಿಕೆಯು ಅದರದ್ದೇ ಆದ ವಿಶೇಷತೆ ಮತ್ತು ನೈಪುಣ್ಯತೆಗಳಿಂದ ಕೂಡಿವೆ.
ಪ್ರಸಕ್ತ ಸ್ಮಾರ್ಟ್ ಫೋನ್ ಯುಗದಲ್ಲಿ ಕಂಪ್ಯೂಟರ್ ಸಾಪ್ಟ್ವೇರ್‌ಗಳು ಮತ್ತು ಗೇಮ್ಸ್ಗಳು ಮಾನಸಿಕ ಸ್ಥಿತಿ ಮತ್ತು ಸೃಜನಶೀಲತೆಗಳನ್ನು ಆಕ್ರಮಿಸುತ್ತಿರುವ ಈ ಕಾಲಘಟ್ಟದಲ್ಲಿ ಆಂಧ್ರದ ಕೊಂಡಪ್ಪಲ್ಲಿಯ ಈ ಆಟಿಕೆಗಳು ಮಕ್ಕಳ ಕ್ರಿಯಾಶೀಲತೆಗೆ, ಕಲ್ಪನೆಗಳಿಗೆ ಮತ್ತು ಮಾನಸಿಕ ಸ್ಥಿತಿ ಉತ್ತಮಗೊಳಿಸಬಲ್ಲ ಅದ್ಭುತ ಪಾತ್ರ ವಹಿಸುತ್ತದೆ ಮತ್ತು ಇವು ಸ್ವದೇಶಿ ಎನ್ನುವುದು ನಮ್ಮೆಲ್ಲರ ಹೆಮ್ಮೆಯ ವಿಷಯ.
ಆಂಧ್ರ ಪ್ರದೇಶದಲ್ಲಿನ ಈ ಮರದ ಆಟಿಕೆಯ ಪ್ರಭಾವ ಎಷ್ಟಿದೆ ಎಂದರೆ ಅಲ್ಲಿನ ಬೊಮ್ಮಲ ಕಾಲೋನಿ ಆಟಿಕೆಗಳ ಕಾಲೋನಿಯಾಗಿ ಬದಲಾಗಿದೆ ಮತ್ತು ಆಟಿಕೆಗಳ ತವರು ಎಂದು ಹೆಸರಾಗಿದೆ. ಇದು ಭಾರತದ ಪ್ರಾದೇಶಿಕ ಉದ್ಯಮಗಳ ಪೈಕಿ ಇದು ಒಂದು. ಈ ಆಟಿಕೆಗಳ ತಯಾರಿಕೆಯು “ಸರಕುಗಳ ಭೌಗೋಳಿಕ ಗುರುತು (ಸಂರಕ್ಷಣೆ ಮತ್ತು ನೋಂದಣೆ) ಕಾಯ್ದೆ-೧೯೯೯, ಈ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಈಗಾಗಲೆ ಪ್ರಸ್ತಾಪಿಸಿದಂತೆ ಇಲ್ಲಿನ ಆಟಿಕೆಗಳು ವಿಶೇಷ ಕಥಾನಕಗಳನ್ನು ಬಿಂಬಿಸುವAತಿರುತ್ತವೆ ಮತ್ತು ನವರಾತ್ರಿಯಲ್ಲಿ ನವರಾತ್ರಿಯ ನವದುರ್ಗೆಯರು, ಸಂಕ್ರಾAತಿ ಹಾಗು ಇತರ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಬ್ಬಗಳ ಮೌಲ್ಯ ಮತ್ತು ಹಿನ್ನಲೆಯನ್ನು ಸಾರುವ ಜೊತೆಗೆ ದಶಾವತಾರದಂತಹ ವಿಶಿಷ್ಟ ಗೊಂಬೆ ಮತ್ತು ಆಟಿಕೆಗಳ ಆಗರ ಕೊಂಡಪ್ಪಲ್ಲಿಯ ಮರದ ಆಟಿಕೆಗಳಲ್ಲಿ ಕಾಣಬಹುದು.
ಇದರ ತಯಾರಕರು ಮತ್ತು ಇಲ್ಲಿನ ಕರ-ಕುಶಲ ಕರ್ಮಿಗಳು ಈ ಆಟಿಕೆಗಳ ತಯಾರಿ ಮತ್ತು ಈ ಬಗೆಯ ಚಾರಿತ್ರಿಕ ಮತ್ತು ಪೌರಾಣಿಕ ಕಥೆಗಳ ಅಭಿವ್ಯಕ್ತಿಯು ‘ಬ್ರಹ್ಮಾಂಡ ಪುರಾಣ’ದಲ್ಲಿ ಉಲ್ಲೇಕಿಸಲಾಗಿದೆ ಎನ್ನುತ್ತಾರೆ ಜೊತೆಗೆ ಇವರನ್ನು ‘ಆರ್ಯಕ್ಷತ್ರೀಯರು’ ಎಂದು ಕರೆಯುತ್ತಾರೆ. ಒಂದು ಅಧ್ಯಯನದ ಪ್ರಕಾರ ಈ ಕಲಾಪ್ರಕಾರವು ಸುಮಾರು ನಾಲ್ಕುನೂರು ವರ್ಷಗಳಷ್ಟು ಹಳೆಯದ್ದು ಎಂದು ತಿಳಿದುಬಂದಿದೆ.
ಮುಕ್ತರ್ಷಿ ಎಂಬ ಸಾಧು ಶಿವದೇವರಿಂದ ಪ್ರಸಾದಿತವಾಗಿ ಪಡೆದ ಕಲೆಯಿದು ಮತ್ತು ಅವರ ಪೂರ್ವಜರು ರಾಜಸ್ತಾನದಿಂದ ಆಂಧ್ರದ ಕೊಂಡಪ್ಪಲ್ಲಿಗೆ ವಲಸೆ ಬಂದಿದ್ದಾರೆ ಎಂದು ನಂಬಿದ್ದಾರೆ. ಈ ಆಟಿಕೆಗಳ ತಯಾರಿಕೆಯು ಹಿಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿಲ್ಲ ಮತ್ತು ಇತ್ತೀಚಿನ ಯುವ ಪೀಳಿಗೆ ಈ ಕಡೆ ಆಸಕ್ತಿಯು ತೋರುತ್ತಿಲ್ಲ. ಈ ತಯಾರಿಕೆಯು ಬಹಳ ಕೌಶಲ್ಯವನ್ನು ಹೊಂದಿರುವ ಅವಶ್ಯಕತೆಯ ಜೊತೆಗೆ ಹೆಚ್ಚು ಸಮಯ ಹಿಡಿಯುವ ಕೆಲಸವಾಗಿದೆ ಮತ್ತು ಹೆಚ್ಚಿನ ಆದಾಯ ಇಲ್ಲದಿರುವುದರಿಂದ ಈ ಉತ್ಪಾದನೆಯ ಬಗ್ಗೆ ಮತ್ತು ಉಧ್ಯೋಗವಾಗಿ ರೂಡಿಸಿಕೊಳ್ಳುವ ಬಗ್ಗೆ ಯುವ ಪೀಳಿಗೆ ಆಸಕ್ತಿ ತೋರುತ್ತಿಲ್ಲ. ಆದರೆ, ಈ ಕಲಾಕೃತಿಗಳು ಮತ್ತು ವಿಶಿಷ್ಟ ಆಟಿಕೆಗಳು ಮೃದುವಾದ ಮರದಿಂದ ಮಾಡಲ್ಪಡುತ್ತದೆ ಮತ್ತು ನೈಜ ಜೀವನ ಶೈಲಿ, ಪ್ರಾಣಿ-ಪಕ್ಷಿಗಳು, ಜಾನಪದ ಸೌಂದರ್ಯ ಮತ್ತು ಚಾರಿತ್ರಿಕ ವಿಚಾರಗಳನ್ನು ಸಾರುತ್ತವೆ ಮತ್ತು ಅವುಗಳ ಉಳಿವಿಗೆ ಮತ್ತು ನೆನಪಿಗೆ ಕಾರಣವಾಗಿವೆ. ಅಂಬಾರಿ ಹೊತ್ತ ಆನೆ ಮತ್ತು ಸೈನಿಕರ ಗೊಂಬೆಗಳು ವಿಶೇಷ ಆಕರ್ಷಣೆಗಳಲ್ಲಿ ಒಂದು. ಇದರ ಇನ್ನೊಂದು ವೈಶಿಷ್ಟö್ಯವೆಂದರೆ ಇದಕ್ಕೆ ಬಳಸುವ ಪ್ರಾಕೃತಿಕ ಮತ್ತು ರಾಸಾಯನಿಕವಲ್ಲದ ಬಣ್ಣಗಳು. ತರಕಾರಿ ಸಿಪ್ಪೆಗಳು, ತೈಲಾಧಾರಿತ ವರ್ಣಗಳನ್ನು ಬಳಸುತ್ತಾರೆ ಕಾರಣ ಇಲ್ಲಿನ ಕಲಾವಿದರಿಗೆ ಬದುಕಿನ ಬಣ್ಣದ ಪರಿಚಯವಿದೆ.
ಇಲ್ಲಿನ ಕುಶಲ ಕರ್ಮಿಗಳು ತೀವ್ರವಾಗಿ ಹೆಣಗಾಡಿ ಈ ದೇಶಿ ಕಲೆಗಳನ್ನು ಇನ್ನೂ ಜೀವಂತವಾಗಿ ಉಳಿಸಿ ಬೆಳೆಸುತ್ತಿದ್ದಾರೆ. ೧೯೮೦ರ ವರೆಗೂ ಮಕ್ಕಳು ಇಲ್ಲನ ಆಟಿಕೆಗಳನ್ನೇ ಹೆಚ್ಚಾಗಿ ಮೆಚ್ಚಿಕೊಂಡು ಹಚ್ಚಿಕೊಳ್ಳುತ್ತಿದ್ದರು. ೪೦ ವರ್ಷ ಮೀರಿದರೂ ಈ ಮರದ ಬೊಂಬೆಗಳು, ಆಟಿಕೆಗಳು ಹಾಳಾಗುತ್ತಿರಲಿಲ್ಲ ಮತ್ತು ಬಾಲ್ಯದ ಸವಿ ನೆನಪಿಗಾಗಿ ಇರಿಸಿಕೊಳ್ಳುತ್ತಿದ್ದರು. ಆದರೆ, ಜಾಗತೀಕರಣದ ನಂತರ ಈ ಕಲೆಗಾರರ ಬದುಕಿನ ನೈಜ ಬಣ್ಣ ಕಳೆಗುಂದಿದೆ. ೧೯೮೦ರ ವರೆಗೂ ದೇಶೀಯ ಬಳಕೆಗೆ ಭಾರತದ ಆಟಿಕೆ ಉದ್ಯಮಗಳ ಉತ್ಪನ್ನಗಳೇ ಪೂರೈಕೆಯಾಗುತ್ತಿದ್ದವು. ಉಳಿದ ಕೇವಲ ೧೦%ರಷ್ಟು ಮಾತ್ರ ಜಪಾನ್, ಇಟಲಿ, ಅಮೇರಿಕಾ, ಜರ್ಮನಿಯಿಂದ ಆಮದಾಗುತ್ತಿತ್ತು. ೧೯೯೦ರ ದಶಕದಲ್ಲಾದ ಆರ್ಥಿಕ ವಹಿವಾಟಿನ ಜಾಗತಿಕ ಬದಲಾವಣೆ ಮತ್ತು ಮುಕ್ತ ವ್ಯಾಪಾರ ಒಪ್ಪಂದ ದೇಶೀಯ ಕೌಶಲ್ಯಗಳ ಕೈ ಕಟ್ಟಿಹಾಕಿದಂತಾಯಿತು. ಮೇಡ್ ಇನ್ ಚೀನಾ ಆಟಿಕೆಗಳು ನಮ್ಮ ಮಾರುಕಟ್ಟೆಗಳನ್ನು ಮುತ್ತಿಕೊಂಡವು. ನಮ್ಮ ಆಟಿಕೆಗಳು ಸ್ವಂತಿಕೆಗಳ ಜೊತೆಗೆ ಜನಪ್ರೀಯತೆಯನ್ನು ಉಳಿಸಿಕೊಂಡರೂ ಚೀನಾ ಮೂಲದ ಮೆಕ್ಯಾನಿಕಲ್, ಆಟೋಮ್ಯಾಟಿಕ್ ಮತ್ತು ಅಗ್ಗದ ಬೆಲೆಯ ಆಟಿಕೆಗಳು ಮಕ್ಕಳನ್ನು ಅತಿಯಾಗಿ ವಶಪಡಿಸಿಕೊಂಡವು. ಅನೇಕ ಸ್ವದೇಶಿ ಮತ್ತು ಸೃಜನಾತ್ಮಕ ಆಟಿಕೆಗಳ ಘಟಕಗಳು ಭಾರತದಲ್ಲಿ ಮುಚ್ಚಲ್ಪಟ್ಟವು. ಅದರಲ್ಲಿ ದುಡಿಯುತ್ತಿದ್ದ ಕಲಾವಿದರು ಮತ್ತು ಶ್ರಮಿಕವರ್ಗ ವಿದೇಶಿ ಆಟಿಕೆಗಳನ್ನು ಆಮದು ಮಾಡಿ ಮಾರುವ ದುಸ್ಥಿತಿ ಎದುರಾಗಿದೆ. ಈಗ ಜಾಗತಿಕ ಬಳಕೆಯ ಸುಮಾರು ೭೫% ಆಟಿಕೆಗಳು ಚೀನಾದಲ್ಲಿ ತಯಾರಿಸಲ್ಪಡುತ್ತಿದೆ. ಆತ್ಮ ನಿರ್ಭರದಂತಹ ಯೋಚನೆ ಮತ್ತು ಯೋಜನೆಗಳು ಕೊಂಡಪ್ಪಲ್ಲಿಯ ಆಟಿಕೆಗಳಂತಹ ಸಾಂಪ್ರದಾಯಿಕ ಮತ್ತು ನೈಜ ಕಲಾಕೃತಿ ಮತ್ತು ಆಟಿಕೆಗಳಿಗೆ ಅವಕಾಶ ಒದಗಿಸಲಿ ದೇಶೀಯ ಕೌಶಲ್ಯ ಜಗತ್ತಿನಾದ್ಯಂತ ಮೆರೆಯಲಿ ಎಂದು ಹಾರೈಸೋಣ.
ಇದನ್ನೂ ಓದಿ: CBSE 10 12 Exam : ಬಿಸಿ ಅಲೆ, ಕೋವಿಡ್ ಪ್ರಕರಣ ಹೆಚ್ಚಳ : CBSEಯಿಂದ ಹೊಸ ಮಾರ್ಗಸೂಚಿ ಪ್ರಕಟ
ಇದನ್ನೂ ಓದಿ: CBSE Term 2 2022 ರ 10 ನೇ ತರಗತಿ ಪರಿಕ್ಷೆಯ ಹಾಲ್ ಟಿಕೇಟ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಗೊತ್ತೇ?
(Kondapalli Toys Very Famous Toys in Andhrapradesh)