ಮಂಗಳೂರು : ರಾಜ್ಯದ ಅತ್ಯಂತ ಶ್ರೀಮಂತ ದೇಗುಲವೆಂಬ ಖ್ಯಾತಿಗೆ ಪಾತ್ರವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇನ್ಮುಂದೆ ಭಕ್ತರಿಗೆ ಹರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸ್ಥಗಿತಗೊಂಡಿದ್ದ ವಿವಿಧ ಸೇವೆಗಳು ಇಂದಿನಿಂದ (ಸೋಮವಾರ) ಆರಂಭವಾಗಲಿದೆ.

ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಎಲ್ಲಾ ಸೇವೆಗಳು ಇಂದಿನಿಂದಲೇ ಆರಂಭವಾಗಲಿದೆ. ಕೊರೊನಾ ವೈರಸ್ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಲಾಗುತ್ತಿದೆ. ಕಡ್ಡಾಯವಾಗಿ ಭಕ್ತರು ಈ ನಿಯಮಗಳನ್ನು ಪಾಲನೆ ಮಾಡಿಕೊಂಡೇ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಬಹುದಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.

ಭಕ್ತರು ಪಾಲಿಸಬೇಕಾದ ನಿಯಮಗಳು ಹೀಗಿವೆ
- ದೇವಾಲಯ ಬೆಳಗ್ಗೆ 6.30 ರಿಂದ ಮಧ್ಯಾಹ್ನ 1.30ರವರೆಗೆ ಮತ್ತು 3.30 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ.
- ಸೇವಾರ್ಥಿಗಳಿಗೆ ಮಾತ್ರ ಭೋಜನ ವ್ಯವಸ್ಥೆಯನ್ನು ಮಾಡಲಾಗುತ್ತದೆ.
- ಪ್ರತಿದಿನ ಮೂವತ್ತು ಭಕ್ತರಿಗೆ ಮಾತ್ರ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ನಡೆಸಲು ಅವಕಾಶ ನೀಡಲಾಗುವುದು.
- ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆಯಲ್ಲಿ ಇಬ್ಬರಿಗೆ ಮಾತ್ರ ಒಂದು ಟಿಕೆಟ್ನಲ್ಲಿ ಸೇವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.
- ಮಹಾಪೂಜೆ ಮತ್ತು ಪಂಚಾಮೃತ ಸೇವೆಯ ಹತ್ತು ಟಿಕೆಟ್ ಮಾತ್ರ ವಿತರಿಸಲಾಗುವುದು.
- ಸರ್ಪ ಸಂಸ್ಕಾರ ಸೇವೆ ಸಲ್ಲಿಸುವವರಿಗೆ ಎರಡು ದಿನ, ಬೇರೆ ಸೇವೆ ನೀಡುವವರಿಗೆ ಒಂದು ದಿನ ಮಾತ್ರ ದೇವಾಲಯದ ವಸತಿ ಗೃಹದಲ್ಲಿ ತಂಗಲು ಅವಕಾಶ ಕಲ್ಪಿಸಲಾಗುವುದು.