ಇಲ್ಲಿರುವ ಮಾಂತ್ರಿಕರ ಬಗೆಗೆ ಅರಿಯುವ ಮುನ್ನ ಕೊಳ್ಳೇಗಾಲ ಎಂಬ ಊರು ರಚನೆಯಾಗಿದ್ದು ಯಾವಾಗ ? ಈ ಊರಿಗೂ ಮಾಂತ್ರಿಕರಿಗೂ ಸಂಬಂಧ ಸೃಷ್ಟಿಯಾಗಿದ್ದು ಹೇಗೆ ? ಇಲ್ಲಿದ್ದ ಮುನಿವರ್ಯರು ಯಾರು..? ಕೊಳ್ಳೇಗಾಲ ಅಂತ ನಾಮಕರಣವಾಗಲು ಕಾರಣವೇನು..? ಇತ್ಯಾದಿ ಹೀಗೆ ನಾನಾ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಮುಂದುವರಿಯುತ್ತೇನೆ.. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಇತಿಹಾಸವನ್ನು ಕೆದಕುತ್ತಾ ಹೋದರೆ…

1956ರ ತನಕ ಕೊಳ್ಳೇಗಾಲ ತಾಲ್ಲೂಕು ಅಂದಿನ ಮದ್ರಾಸು ರಾಜ್ಯದ ಕೊಯಮತ್ತೂರು ಜಿಲ್ಲೆಗೆ ಸೇರಿತ್ತು. ಆ ನಂತರ ಭಾಷಾವಾರು ಪ್ರಾಂತ್ಯ ವಿಂಗಡಣೆ ಅನ್ವಯ ಕೊಳ್ಳೇಗಾಲ ತಾಲ್ಲೂಕು ಮೈಸೂರು ಜಿಲ್ಲೆಗೆ ಸೇರಿತು. 1997ರಲ್ಲಿ ಚಾಮರಾಜನಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡಿ ಕೊಳ್ಳೇಗಾಲ ತಾಲ್ಲೂಕನ್ನು ಮೈಸೂರು ಜಿಲ್ಲೆಯಿಂದ ಬೇರ್ಪಡಿಸಿ ಚಾಮರಾಜನಗರಕ್ಕೆ ಸೇರಿಸಲಾಯಿತು

ಇತಿಹಾಸದ ಪ್ರಕಾರ ಕಹಳ ಮತ್ತು ಗಾಲವ ಎಂಬಿಬ್ಬರು ಋಷಿಗಳು ಇಲ್ಲಿ ತಪಸ್ಸು ಮಾಡಿದ್ದರಿಂದ ಕಹಳಗಾಲ ಎಂದು ಪ್ರತೀತಿಗೆ ಬಂದು ನಂತರ ಜನರ ಬಾಯಿಯಿಂದ ಅದು ಅಪಭ್ರಂಶಗೊಳ್ಳುತ್ತ ಕೊಳ್ಳೇಗಾಲ ಎಂದಾಯಿತು. ಇನ್ನು ಪವಾಡ ಪುರುಷರೆಂದೇ ಖ್ಯಾತಿಗೊಂಡಿರುವ ಇಲ್ಲಿನ ಮಾಂತ್ರಿಕರ ವಿರುದ್ಧ ಕಾಳಗಕ್ಕಿಳಿದ ದೈವ ಶಕ್ತಿಯೇ ಭೂತ ಶಕ್ತಿಗಿಂತ ಮಿಗಿಲಾದುದು ಎಂದು ತೋರಿಸಿದ ಮಹನೀಯ ಸಿದ್ದಪ್ಪಾಜಿ ಗುರುಗಳ ಗದ್ದುಗೆಯು ಇಲ್ಲಿದೆ. ಪ್ರತಿ ವರ್ಷ ಚಿಕ್ಕಲ್ಲೂರು ಜಾತ್ರೆ ನಡೆದು ಸಿದ್ದಪ್ಪಾಜಿಗೆ ಭಕ್ತ ಸಮೂಹವೇ ಇಲ್ಲಿ ಸೇರುತ್ತೆ.

ದೇವಾನುದೇವತೆಗಳು ದುಷ್ಟಶಕ್ತಿಯ ನಿಗ್ರಹಕ್ಕಾಗಿ ಯಕ್ಷಿಣಿ ವಿದ್ಯೆಯನ್ನು ಬಳಸಿ ಕೊಳ್ತಿದ್ರು. ಅಲ್ಲಿಂದಲೂ ಮಾಂತ್ರಿಕರ ಬೇರು ಬೆಳೆದುಕೊಂಡು ಬಂದಿದೆ. ದೈವಶಕ್ತಿ ಬಳಸಿಕೊಂಡು ದುಷ್ಟರನ್ನು ಮಟ್ಟ ಹಾಕಲಾಗಿತ್ತು. ಅದೆ ದುಷ್ಟರು ದೇವತೆಗಳನ್ನು ಜಪ ತಪಗಳ ಮೂಲಕ ಒಲಿಸಿಕೊಂಡು ಘೋರ ಶಕ್ತಿ ಪಡೆಯುತ್ತಿದ್ದರು. ಕ್ಷುದ್ರ ವಿದ್ಯೆಗಳನ್ನು ಬಳಸಿ ಅಟ್ಟಹಾಸ ಮೆರೆಯುತ್ತಿದ್ದರು.

ಸುಮಾರು 24 ಬಗೆಯ ಕ್ಷುದ್ರ ವಿದ್ಯೆಗಳಿವೆ. ಅವುಗಳ ಪೈಕಿ ವಶೀಕರಣ, ಮಾಟ, ವಾಮಾಚಾರ, ಬಾನಾಮತಿ ವಿದ್ಯೆಗಳು ತುಂಬಾ ಘೋರವಾದವುಗಳು. ಇವುಗಳಲ್ಲಿ ತುಂಬಾ ಘೋರ ಅಂದ್ರೆ ಕ್ಷುದ್ರ ವಿದ್ಯೆಗಳ ಹದಿನಾರನೇ ವಿದ್ಯೆ ಕಾಶ್ಮೋರ. ಮಂತ್ರವಾದಿಗಳು ಕಾಶ್ಮೋರದಂತಹ ಕ್ಷುದ್ರ ವಿದ್ಯೆಯನ್ನಾದರೂ ಒಲಿಸಿಕೊಂಡರೆ ಅಂತಹ ಮಾಂತ್ರಿಕರನ್ನ ನಿಯಂತ್ರಿಸೋದು ಕಷ್ಟವಂತೆ. ಹಿಂದಿನ ಕಾಲದಲ್ಲಿ ರಾಜರು, ನವಾಬರು, ಮಂತ್ರಿಗಳು ಇದೇ ವಿದ್ಯೆಯನ್ನು ಬಳಸಿಕೊಂಡು ಎದುರಾಳಿಗಳನ್ನು ಮಣಿಸುತ್ತಿದ್ದರು ಎನ್ನಲಾಗುತ್ತದೆ. ಇದು ಎಷ್ಟು ಸತ್ಯವೋ ಮಿಥ್ಯವೋ ಗೊತ್ತಿಲ್ಲ.
ಒಂದು ವೇಳೆ ಮಾಟ ಮಾಡಿಸಿದರೆ ಕೈ ಕಾಲು ಬಿದ್ದು ಹೋಗುತ್ತದೆ. ವ್ಯಕ್ತಿ ನರಳಿ ನರಳಿ ಸಾಯುತ್ತಾನೆ ಎನ್ನುವುದು ನಿಜವೇ ಆಗಿದ್ದರೆ ಇವತ್ತು ನಮ್ಮ ಎದುರಾಳಿಗಳನ್ನು ಸೋಲಿಸೋಕೆ ಮಾಂತ್ರಿಕನೊಬ್ಬ ನಮ್ಮ ಬೆನ್ನಿಗಿದ್ದರೂ ಸಾಕಾಗಿತ್ತು ಅಲ್ಲವೇ..?

ಅದೆಲ್ಲ ಸೈಡಿಗಿರಲಿ, ಈ ದೆವ್ವ ಭೂತ ಪ್ರೇತಗಳು ಇದಾವಾ? ಇಷ್ಟಕ್ಕೂ ಈ ಮಾಂತ್ರಿಕ ವಿದ್ಯೆಯನ್ನು ಕರಗತ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಾ..? ಮಾಂತ್ರಿಕರು ವಿದ್ಯೆಗಳನ್ನ ಹೇಗೆ ಕರಗತ ಮಾಡಿಕೊಳ್ತಾರೆ? ಅದಕ್ಕಾಗಿ ಅವರು ಏನೇನು ಮಾಡ್ತಾರೆ ? ಅನ್ನೋ ರೋಚಕ ಕಥೆಯನ್ನು ಮುಂದಿನ ಸಂಚಿಕೆಯಲ್ಲಿ ಕಟ್ಟಿ ಕೊಡ್ತೀನಿ..ಅದು ಕಲ್ಲು ನೀರು ಕರಗುವ ಸಮಯದ ಕಥೆ..!
ಮುಂದುವರೆಯುತ್ತದೆ…
- ಕೆ.ಆರ್.ಬಾಬು