ಬಜೆಟ್ (Budget 2022) ಎಂಬುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ಸಂಬಂಧಿಸಿದ ವಿಷಯ. ಒಂದು ಮನೆಯ ಅಥವಾ ಸಂಸ್ಥೆಯ ಹಣಕಾಸಿನ ವಹಿವಾಟು ನಿಭಾಯಿಸಿ ಮನೆ ಮಂದಿಯನ್ನು ಸಾಕುವುದೇ ಒಂದು ದೊಡ್ಡ ಸವಾಲು. ಹೀಗಿರುವಾಗ ಇಡೀ ರಾಷ್ಟ್ರದ ಹಣಹಾಸಿನ ಕೀಲಿ ಹಿಡಿದಿರುವ ನಿರ್ಮಲಾ ಸೀತಾರಾಮನ್ ಅವರ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಕುತೂಹಲದಿಂದ ಕಾಯುತ್ತಿರುವ ಬಜೆಟ್ಅನ್ನು ಇದೇ ಫೆಬ್ರವರಿ 1 ರಂದು (Budget 2022 Date February 1) ನಾಲ್ಕನೇ ಬಾರಿ ನಿರ್ಮಲಾ ಸೀತಾರಾಮನ್ (FM Nirmala Sitharaman) ಅವರು ಮಂಡಿಸಲಿದ್ದಾರೆ.
ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜನಿಸಿದ್ದು ತಮಿಳುನಾಡಿನ ಮಧುರೈಯಲ್ಲಿ. ಸದ್ಯ ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರು. ನಿರ್ಮಲಾ ಸೀತಾರಾಮನ್ ಓದಿದ್ದು ಕೆಲ ವರ್ಷಗಳಿಂದ ವಿವಾದದ ಬಿಂದುವಾಗಿರುವ ದೆಹಲಿಯ ಜವಾಹರ್ಲಾಲ್ ನೆಹರು ವಿವಿ ಅರ್ಥಾತ್ ಜೆಎನ್‌ಯುವಿನಲ್ಲಿ. ತಮ್ಮ ಓದಿನ ದಿನಗಳಲ್ಲಿಯೇ ಪರಕಾಲ ಪ್ರಭಾಕರ್ ಅವರನ್ನು ನಿರ್ಮಲಾ ಸೀತಾರಾಮನ್ ಭೇಟಿಯಾದರು. 1986ರಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೂ ಪರಕಾಲ ಪ್ರಭಾಕರ್ ಅವರಿಗೂ ಮದುವೆಯಾಯಿತು. ಹೆಣ್ಣು ಮಗುವಿನ ತಾಯಿಯಾಗಿರುವ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಗಳ ಹೆಸರು ಪರಕಾಲ ವಾಙ್ಮಯಿ.
2014 ರಿಂದ 2019 ರ ಅವಧಿಯಲ್ಲಿ ರಾಜ್ಯದ ಹಣಕಾಸು ಸಚಿವೆಯಾಗಿ ಇವರು ಕಾರ್ಯ ನಿರ್ವಹಿಸಿದ್ದರು. ಇಂದಿಗೂ ಅದೇ ನಿಷ್ಠೆಯಲ್ಲಿ ತಮ್ಮ ಕಾರ್ಯದಲ್ಲಿ ದಕ್ಷತೆ ತೋರಿ ಹೆಸರುಗಳಿಸಿದ್ದಾರೆ. 2014 ರಲ್ಲಿ ಬಿಜೆಪಿ ಸೇರಿದಂದಿನಿಂದ ಅವರು ನಿರಂತರವಾಗಿ ಉನ್ನತ ಹುದ್ದೆಗಳಾದ ರಕ್ಷಣಾ ಖಾತೆ ಮತ್ತು ಹಣಕಾಸು ಸಚಿವೆಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಿರ್ಮಲಾ ಸೀತಾರಾಮನ್ ಅವರ ಬದುಕಿಗೆ ಮಹತ್ವದ ತಿರುವು ನೀಡಿತು. ಮೊದಲು ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಮತ್ತು ಉದ್ಯಮಗಳ ಇಲಾಖೆಯ ರಾಜ್ಯ ಖಾತೆಯ (ಸ್ವತಂತ್ರ ನಿರ್ವಹಣೆ) ಸಚಿವರಾದ ನಿರ್ಮಲಾ ಸೀತಾರಾಮನ್ 2017ರಲ್ಲಿ ದೇಶದ ರಕ್ಷಣೆಯ ಜವಾಬ್ದಾರಿ ಹೊತ್ತು ರಕ್ಷಣಾ ಸಚಿವೆಯಾದರು. 2019ರಲ್ಲಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಅವರಿಗೆ ಹಣಕಾಸು ಸಚಿವರ ಜವಾಬ್ದಾರಿ ದೊರೆಯಿತು. ಅದೇ ವರ್ಷ ಮೊದಲ ಬಾರಿಗೆ ದೇಶದ ಬಜೆಟ್ ಮಂಡಿಸಿದರು.
ಸಾಮಾಜಿಕ ಕಾರ್ಯಗಳಲ್ಲಿ ಇವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದು ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಸದಸ್ಯರಾಗಿದ್ದರು. ತಮ್ಮ ಪ್ರಭಲ ವಾಕ್ಚಾತುರ್ಯದಿಂದಾಗಿ ಬಹುಬೇಗ ಬಿಜೆಪಿ ಪಕ್ಷದ ವಕ್ತಾರರಾಗಿಯೂ ನೇಮಕಗೊಂಡರು. ರಾಜಕೀಯ ಸೇರುವ ಮುನ್ನ ಲಂಡನ್ನಲ್ಲಿ ಪ್ರೈಸ್ ವಾಟರ್ ಹೌಸ್ ಕೂಪರ್ ಸಂಸ್ಥೆಯಲ್ಲಿ ಇವರು ಆರ್ಥಿಕ ವ್ಯವಹಾರಗಳ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
(Nirmala Sitharaman Budget 2022 profile of finance minister of India)