(Polali Rajarajeshwari ) ಯಾವುದಾದ್ರು ಒಂದು ವಸ್ತು ಆದ್ರೂ ನಮ್ಮ ಕೈಯಲ್ಲಿ ಕಾಣೆಯಾಗಿಯೇ ಇರುತ್ತೆ. ಅದು ಅಷ್ಟು ಮುಖ್ಯವಾದಲ್ಲ ಅಂದ್ರೆ ಬಿಟ್ಟು ಬಿಡುತ್ತೀವಿ. ಆದ್ರೆ ಅದು ನಮ್ಮ ಜೀವ, ಜೀವನಕ್ಕೆ ಹತ್ರವಾದ್ರೆ ಖಂಡಿತಾ ನಾವು ಅದನ್ನು ಹುಡುಕೋಕೆ ಶತ ಪ್ರಯತ್ನ ಮಾಡ್ತಿವಿ. ಅದು ಸಿಗದಿದ್ರೆ ಹತಾಶರಾಗಿ ದೇವರಲ್ಲೂ ಮೊರೆ ಇಡುತ್ತೀವಿ. ಅದು ಕೆಲವೊಮ್ಮೆ ಸಿಕ್ಕಿಯೂ ಬಿಡುತ್ತೆ. ಆದ್ರೆ ಈ ದೇವಾಲಯದಲ್ಲಿರೋ ತಾಯಿಯನ್ನು ಬೇಡಿದ್ರೆ ಕಳೆದ ಹೋದ ವಸ್ತು ಸಿಕ್ಕೇ ಸಿಗುತ್ತಂತೆ.

ಈ ತಾಯಿಯ ಮಹಿಮೆಯೇ ಹಾಗೆ.. ಸಾವಿರಾರು ವರ್ಷಗಳಿಂದ ಭಕ್ತರನ್ನು ಕಾಯುತ್ತಾ ನಿಂತಿದ್ದಾಳೆ ಈಕೆ. ಇಲ್ಲಿ ಬೇಡಿ ಬಂದ ಭಕ್ತರ ಹರಕೆ ಯಾವತ್ತು ಸುಳ್ಳಾಗುವುದಿಲ್ಲ. ಭಕ್ತಿಯಿಂದ ಬೇಡಿದ್ರೆ ಈ ರಾಜರಾಜೇಶ್ವರಿ (Polali Rajarajeshwari ) ತಾಯಿ ಕೈ ಹಿಡಿತಾಳೆ ಅನ್ನೋ ನಂಬಿಕೆ ಭಕ್ತರದ್ದು. ಅದರಲ್ಲೂ ಯಾವುದಾದ್ರು ವಸ್ತುವು ಕಾಣೆಯಾಗಿದೆ ಅಂತ ಹರಕೆ ಹೇಳಿಕೊಂಡ್ರೆ, ಅದು ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ.
ಇಲ್ಲಿ ರಾಜರಾಜೇಶ್ವರಿ ದೇವಿ ರೂಪದಲ್ಲಿ ಜಗನ್ಮಾತೆ ನೆಲೆಸಿದ್ದಾಳೆ. ರಾಜರಾಜೇಶ್ವರಿಯನ್ನು (Polali Rajarajeshwari ) ತಾಯಿಯ ಅತಿ ಸುಂದರವಾದ ರೂಪ ಅಂತ ಪುರಾಣದಲ್ಲಿ ನಂಬಲಾಗುತ್ತೆ. ಅದಕ್ಕೆ ಸಾಕ್ಷಿಯಾಗಿ ನಿಲ್ಲುತ್ತೆ ಈ ದೇವಿಯ ವಿಗ್ರಹ. 6 ಅಡಿ ಎತ್ತರವಿರುವ ತಾಯಿಯ ವಿಗ್ರಹ ನೋಡೋಕೆ ಸುಂದರ. ಈ ದೇವಿಗೆ ಮತ್ತಷ್ಟು ದೈವೀಕತೆಯನ್ನು ತುಂಬುತ್ತೆ ಕೆಂಪು ಮಾಣಿಕ್ಯದಿಂದ ಮಾಡಲಾದ ಕಣ್ಣುಗಳು. ಈಕೆಯ ಅಲಂಕಾರಕ್ಕಾಗಿ ಯೇ ವಜ್ರದ ಕಿರೀಟ, 18 ಗಜದ ಸೀರೆಯನ್ನು ಬಳಸಲಾಗುತ್ತೆ. ಇದರಲ್ಲಿ ದೇವಿ ಸಾಕ್ಷಾತ್ ಧರೆಗಿಳಿದಂತೆ ಕಾಣುತ್ತಾಳೆ.

ಈ ವಿಗ್ರಹದಲ್ಲಿ ಮತ್ತೊಂದು ವಿಶೇಷವಿದೆ ಅದೇನು ಗೊತ್ತಾ? ಅದನ್ನು ಕೇಳಿದ್ರೆ ನಿಮಗೇ ಆಶ್ಚರ್ಯವಾಗಬಹುದು . ಸಾಮಾನ್ಯವಾಗಿ ಯಾವುದೇ ದೇವಾಲಯದಲ್ಲಿರೋ ವಿಗ್ರಹವನ್ನು ಕಲ್ಲಿನಿಂದ ಅಥವಾ ಲೋಹದಿಂದ ತಯಾರಿಸಲಾಗಿರುತ್ತವೆ . ಆದ್ರೆ ರಾಜರಾಜೇಶ್ವರಿ ದೇವಿಯ ವಿಗ್ರಹ ಮಾತ್ರ ಪೂರ್ತಿ ಜೇಡಿ ಮಣ್ಣಿನಿಂದ ತಯಾರಿಸಲ್ಪಟ್ಟಿದ್ದು. ಆದ್ರೂ ಕಲ್ಲಿನ ವಿಗ್ರಹದಷ್ಟೇ ಗಟ್ಟಿಯಾಗಿದೆ. ಇಡೀ ಭಾರತದಲ್ಲಿ ಇಷ್ಟು ದೊಡ್ಡದಾದ ಮಣ್ಣಿನ ಮೂರ್ತಿ ಬೇರೆಲ್ಲೂ ಇಲ್ಲ.
ಇದು ಕೇವಲ ಮಣ್ಣಲ್ಲ ಬದಲಾಗಿ ಔಷಧೀಯ ಸಸ್ಯಗಳ ಸಾರವನ್ನು ಮಣ್ಣಿನಲ್ಲಿ ಬೆರೆಸಿ ತಯಾರಿಸಲಾದ ವಿಗ್ರಹ. ಇಂದಿಗೂ ಈ ಮಣ್ಣಿನಲ್ಲಿ ಸಾವಿರಾರು ರೋಗಗಳನ್ನು ಪರಿಹರಿಸುವ ಶಕ್ತಿಯಿದೆ ಅಂತ ನಂಬಲಾಗುತ್ತೆ. ಇಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಈ ವಿಗ್ರಹಕ್ಕೆ ಲೇಪಾಷ್ಠಗಂಧ ವನ್ನು ಮಾಡಲಾಗುತ್ತೆ. ಅಂದ್ರೆ ದೇವಿಯ ವಿಗ್ರಹಕ್ಕೆ ಮಣ್ಣಿನ ಲೇಪವನ್ನು ಮಾಡಲಾಗುತ್ತೆ. ಆದ್ರೆ ಅದಕ್ಕೂ ಬಳಸುವುದು ಸಾವಿರಾರು ವರ್ಷಗಳ ಹಿಂದಿನ ಮಣ್ಣು.

ಹೌದು, ಲೇಪನಕ್ಕಾಗಿಯೇ 2000 ವರ್ಷಗಳಿಂದ ಔಷಧೀಯ ಗುಣವುಳ್ಳ ಮಣ್ಣನ್ನು ಸಂರಕ್ಷಿಸಿಡಲಾಗಿದೆ. ಅದನ್ನು ಹೊರತು ಪಡಿಸಿ ಉಳಿದ ಯಾವುದೇ ಮಣ್ಣನ್ನು ಇಲ್ಲಿ ಬಳಸಲಾಗುವುದಿಲ್ಲ.ಇನ್ನು ಇಲ್ಲಿಯ ಸ್ಥಳಪರಾಣ ಪ್ರಕಾರ 2000ವರ್ಷಗಳ ಹಿಂದೆ ಸುರತ ಎಂಬ ರಾಜನೊಬ್ಬ ಈ ದೇವಾಲಯವನ್ನು ನಿರ್ಮಿಸಿದ ಎನ್ನಲಾಗುತ್ತೆ. ಸುರತ ವೈರಿಗಳ ಆಕ್ರಮಣದಿಂದ ರಾಜ್ಯವನ್ನು ಕಳೆದುಕೊಂಡಿದ್ದ. ಆಗ ಋಷಿಯೊಬ್ಬರ ಸಲಹೆಯ ಮೇರೆಗೆ ತಾಯಿಯ ಕುರಿತು 3 ವರ್ಷಗಳ ಕಾಲ ತಪಸ್ಸು ಮಾಡಿದ್ದಾನೆ. ಆಗ ತಾಯಿ ಸ್ವಪ್ನದಲ್ಲಿ ಕಾಣಿಸಿಕೊಂಡಿದ್ದಾಳೆ. ಇದಾದ ನಂತರ ಸುರತ ಕನಸಿನಲ್ಲಿ ಕಂಡಂತೆಯೇ ತಾಯಿಯ ವಿಗ್ರಹ ನಿರ್ಮಿಸಿ. ಅದಕ್ಕಾಗಿ ದೇವಾಲಯವನ್ನು ನಿರ್ಮಿಸಿದ್ದಾನೆ. ಇದರ ಫಲವಾಗಿ ಆತನಿಗೆ ತನ್ನ ರಾಜ್ಯ ವಾಪಾಸ್ ಸಿಕ್ಕಿತು ಅನ್ನೋ ಕಥೆ ಇದೆ.
ಇನ್ನು ಈ ದೇವಾಲಯಕ್ಕೆ 2000 ವರ್ಷಗಳ ಇತಿಹಾಸವಿದೆ ಅನ್ನುವುದಕ್ಕೂ ನಮಗೆ ಐತಿಹಾಸಿಕ ಸಾಕ್ಷಿ ಸಿಗುತ್ತೆ. ಕ್ರಿ.ಶ ದ ಪ್ರಾರಂಭದ ಅಶೋಕನ ಶಾಸನದಲ್ಲಿ, ವಿದೇಶಿ ಪ್ರವಾಸದ ಕಥನಗಳಲ್ಲಿ ಈ ದೇವಾಲಯದ ಉಲ್ಲೇಖ ಮಾಡಲಾಗಿದೆ. ಇನ್ನು ಕ್ರಿ.ಶ 710 ರಲ್ಲಿ ಆಳಿದ ಅಲುಪಾ ರಾಜವಂಶದ ರಾಜರು ವಿಶೇಷವಾಗಿ ದೇವಾಲಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ರು.ಕೆಳದಿಯ ರಾಣಿ ಚೆನ್ನಮ್ಮಾಜಿಯವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನಕ್ಕೆ ಭವ್ಯ ರಥವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆಂದು ಹೇಳಲಾಗುತ್ತದೆ.

ಇಲ್ಲಿ ರಾಜಾರಾಜೇಶ್ವರಿ (Polali Rajarajeshwari ) ವಿಗ್ರಹದ ಜೊತೆಗೆ ಸುಬ್ರಹ್ಮಣ್ಯ, ಮಹಾಗಣಪತಿ, ಭದ್ರಕಾಳಿ ಯನ್ನು ಪ್ರಧಾನ ದೇವರಾಗಿ ಆರಾಧಿಸಲಾಗುತ್ತೆ. ಶ್ರೀ ಕ್ಷೇತ್ರದ ಹೊರಾಂಗಣದ ಬಲಬದಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಗುಡಿಯಿದ್ದು ಸುಮೇಧಮುನಿಯು ಪ್ರತಿಷ್ಟಾಪಿಸಿದನೆಂದು ಪುರಾಣದಲ್ಲಿದೆ. ಎಡಬದಿಯಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿಯಿದೆ. ದೈನಂದಿನ ಪೂಜೆಗಳಲ್ಲಿ ಪ್ರಥಮ ಪೂಜೆ ದುರ್ಗಾಪರಮೇಶ್ವರಿಗೆ ನಡೆಯುತ್ತದೆ. ನಂತರ ಶ್ರೀ ರಾಜರಾಜೇಶ್ವರೀ ದೇವಿಗೆ ಹಾಗೂ ಪರಿವಾರ ದೇವತೆಗಳಿಗೆ ಪೂಜೆ ನಡೆಯುತ್ತದೆ, ಇಲ್ಲಿ ಶ್ರೀ ರಾಜರಾಜೇಶ್ವರಿ ಯ ಸಾನಿಧ್ಯದಷ್ಟೇ ಶ್ರೀ ಸುಬ್ರಹ್ಮಣ್ಯನ ಸಾನಿಧ್ಯವಿದ್ದು ಜಾತ್ರೋತ್ಸವಗಳು ಶ್ರೀ ಸುಬ್ರಹ್ಮಣ್ಯನಿಗೆ ನಡೆಯುವುದು ವಿಶೇಷ.
ಇನ್ನು ಇಲ್ಲಿ ಉತ್ಸವದಲ್ಲಿ ನಡೆಯೋ ಚೆಂಡು ಉತ್ಸವ ಇಲ್ಲಿನ ಮತ್ತೊಂದು ವಿಶೇಷ. ಚೆಂಡ ಆಟವನ್ನ ಈ ವಾರ್ಷಿಕ ಹಬ್ಬದಲ್ಲಿ ಆಡಲಾಗುತ್ತೆ, ಆಟಕ್ಕೆ ಬಳಸಲಾಗುವ ಚರ್ಮದ ಚೆಂಡನ್ನು ವಿಶೇಷವಾಗಿ ಕಾಬ್ಲರ್ ಕುಟುಂಬದಿಂದ ತಯಾರಿಸಲಾಗುತ್ತದೆ. ಈ ಚೆಂಡಾಟವು ಐದು ದಿನಗಳವರೆಗೆ ನಡೆಯುತ್ತೆ. ಈ ಚೆಂಡಿನ ಆಟವು ಕೆಟ್ಟದರ ವಿರುದ್ಧ ಗೆಲುವನ್ನು ಪ್ರತಿನಿಧಿಸುತ್ತದೆ.

ಅಂದ ಹಾಗೆ ರಾಜರಾಜೇಶ್ವರಿ (Polali Rajarajeshwari ) ದೇವಾಲಯವಿರೋದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಗ್ರಾಮದಲ್ಲಿ . ಪುಳಿನ, ಪೊಳಲ್ ಎಂದರೆ ಮಣ್ಣು ಎಂಬ ಅರ್ಥ .ಹೀಗಾಗಿಯೇ ಈ ಕ್ಷೇತ್ರಕ್ಕೆ ಪೊಳಲಿ ಎಂಬ ಹೆಸರು ಬಂತು ಎನ್ನಲಾಗುತ್ತೆ. ಮೊದಲು ಶ್ರೀ ಕ್ಷೇತ್ರಕ್ಕೆ ಪುಳಿನಾಪುರ ಅನ್ನೋ ಹೆಸರಿತ್ತು ಅದು ನಂತರ ಪೊಳಲಿ ಅನ್ನೋ ಹೆಸರಾಯಿತು ಅನ್ನೋದು ಪೊಳಲಿ ದೇವಾಲಯವು ಮಂಗಳೂರು ನಗರದಿಂದ 19 ಕಿ.ಮೀ ದೂರದಲ್ಲಿದ್ದು, ನಗರದಿಂದ ಸಾಕಷ್ಟು ಬಸ್ ಸೌಲಭ್ಯವೂ ಇದೆ. ಹೊರ ಪ್ರದೇಶದಿಂದ ಬರೋರು ರೈಲಿನ ಮೂಲಕ ಬರೋದಾದ್ರೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ಸಮೀಪದಲ್ಲಿದೆ. ಅಲ್ಲಿಂದ ಸುಲಭವಾಗಿ ತಲುಪಬಹುದು. ನೀವು ಮಂಗಳೂರಿನ ಕಡೆ ಬಂದ್ರೆ ಈ ತಾಯಿ ರಾಜರಾಜೇಶ್ವರಿಯ ದರ್ಶನ ಭಾಗ್ಯ ಪಡೆಯೋದನ್ನು ಮರೀಬೇಡಿ.
ಇದನ್ನೂ ಓದಿ : ತೆಂಗಿನಕಾಯಿ ನೀಡಿದ್ರೆ ಒಲಿತಾನೆ ರಾಮಭಂಟ : ವಾಯುಪುತ್ರನನ್ನು ನಂಬಿದ್ರೆ ಎಲ್ಲಾ ಕಾರ್ಯಸಿದ್ಧಿ
(Here the missing object foud saving devotes Polali Rajarajeshwari )