
ಶಿವಮೊಗ್ಗ : ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವಿನ ಕಿತ್ತಾಟ ಪ್ರಕರಣ ಕೊನೆಗೂ ಸುಖಾಂತ್ಯವನ್ನು ಕಂಡಿದೆ. ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥಗೊಂಡಿದ್ದು, ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.
ವರ್ಷಂಪ್ರತಿ ಸಿಗಂಧೂರು ದೇವಸ್ಥಾನದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಚಂಡಿಕಾಯಾಗವನ್ನು ನೆರವೇರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಸೋಂಕಿನ ಕಾರಣಕ್ಕೆ ಚಂಡಿಕಾಯಾಗ ನಡೆಸಲು ಅನುಮತಿಯನ್ನು ನಿರಾಕರಿಸಿತ್ತು. ಇದೇ ಕಾರಣಕ್ಕೆದೇವಸ್ಥಾನದಲ್ಲಿ ಅರ್ಚಕರು ಹಾಗೂ ಧರ್ಮದರ್ಶಿಗಳ ನಡುವೆ ವಿವಾದ ಹುಟ್ಟಿಕೊಂಡಿತ್ತು.

ದೇವಸ್ಥಾನದ ಅರ್ಚಕ ಶೇಷಗಿರಿ ಭಟ್ ಕುಟುಂಬ ಸಮೇತರಾಗಿ ದೇವಿಯ ಮುಂದೆ ಕುಳಿತು ಮೌಲ ಪ್ರತಿಭಟನೆಯನ್ನು ನಡೆಸಿದ್ದರು. ನಂತರದಲ್ಲಿ ಧರ್ಮದರ್ಶಿ ರಾಮಪ್ಪ ಹಾಗೂ ಅವರ ಪುತ್ರ ರವಿ ಕುಮಾರ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ನಡುವಲ್ಲೇ ಹಲವರು ರಾಜಿಗೆ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭಕ್ತರಾದ ಸಂದೀಪ್ ಹಾಗೂ ನವೀನ್ ಜೈನ್ ಎಂಬವರು ಸಾಗರದ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು.

ಈ ಕುರಿತು ವಿಚಾರಣೆಯನ್ನು ನಡೆಸಿದ ಸಾಗರದ ಸಿವಿಲ್ ನ್ಯಾಯಾಲಯ ಮಧ್ಯಸ್ಥಿಕೆಯಿಂದ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳುವಂತೆ ಸೂಚನೆಯನ್ನು ನೀಡಿತ್ತು. ಅಲ್ಲದೇ ಮಧ್ಯಸ್ಥಿಗಾರರನ್ನು ನೇಮಿಸಿ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವೆ ರಾಜೀ ಸಂಧಾನ ನಡೆಸುವಲ್ಲಿ ಯಶಸ್ವಿಯಾಗಿದೆ.

ದೇವಸ್ಥಾನದಲ್ಲಿ ನವರಾತ್ರಿಯ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬಂದ ಚಂಡಿಕಾಯಾಗವನ್ನು ಮಾಡಲು ಅನುಮತಿಯನ್ನು ನೀಡಲಾಗಿದೆ. ಆದರೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಚಂಡಿಕಾ ಯಾಗದಲ್ಲಿ ರಾಮಪ್ಪ ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿರಬೇಕು. ಪೂಜೆಯ ನಂತರದಲ್ಲಿ ದೇವಿಗೆ ಮಾಡುವ ಮಂಗಳಾರತಿಯ ತಟ್ಟೆಯನ್ನು ಅರ್ಚಕರು ಭಕ್ತರ ಬಳಿಗೆ ಕೊಂಡೊಯ್ಯುವಂತಿಲ್ಲ.

ಮಂಗಳಾರತಿ ತಟ್ಟೆಯನ್ನು ನಿರ್ಧಿಷ್ಟ ಸ್ಥಳದಲ್ಲಿಯೇ ಇಟ್ಟು ನಮಸ್ಕಾರ ಮಾಡಲು ಅವಕಾಶವನ್ನು ಕಲ್ಪಿಸಬೇಕು. ಇನ್ನು ಕೊರೊನಾ ವೈರಸ್ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಲ್ಲದೇ ಸಾಮಾಜಿಕ ಅಂತರವನ್ನು ಕಾಪಾಡಬೇಕೆಂದು ರಾಜೀ ಸಂಧಾನದಲ್ಲಿ ನಿರ್ಣಯಿಸಲಾಗಿದೆ.