ಉಡುಪಿ : ಕೃಷ್ಣನ ನಾಡು ಉಡುಪಿಯಲ್ಲಿಂದು ಕೃಷ್ಣಜನ್ಮಾಷ್ಠಮಿಯ ಸಂಭ್ರಮ. ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಭಕ್ತರಿಲ್ಲದೇ ಅಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ.

ಕೃಷ್ಣಜನ್ಮಾಷ್ಟಮಿ ಅಂದ್ರೆ ಸಾಕು ಉಡುಪಿಯಲ್ಲಿ ಸಂಭ್ರಮವೋ ಸಂಭ್ರಮ. ದೇಶ ನಾನಾ ಮೂಲೆಗಳಿಂದಲೂ ಪೊಡವಿಗೊಡೆಯನ ನಾಡಿಗೆ ಭಕ್ತರು ಹರಿದುಬರುತ್ತಿದ್ದರು. ಎರಡು ದಿನಗಳ ಕಾಲ ಕೃಷ್ಣ ಮಠದಲ್ಲಷ್ಟೇ ಅಲ್ಲಾ ಉಡುಪಿಯಾದ್ಯಂತ ಹಬ್ಬದ ಸಂಭ್ರಮ.

ಆದರೆ ಈ ಬಾರಿ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮಕ್ಕೆ ಕೊರೊನಾ ಸೋಂಕು ಬ್ರೇಕ್ ಹಾಕಿದೆ. ಸರಕಾರದ ಮಾರ್ಗಸೂಚಿಯ ಅನ್ವಯ ಈ ಬಾರಿಯ ಕಷ್ಣ ಜನ್ಮಾಷ್ಟಮಿ ಕೇವಲ ಸಾಂಪ್ರದಾಯಿಕವಾಗಿ ನಡೆಯಲಿದೆ. ಪರ್ಯಾಯ ಮಠಾಧೀಶರು ಶ್ರೀ ಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಿದ್ದಾರೆ.

ಇನ್ನು ವಿಟ್ಲ ಪಿಂಡಿ ಮಹೋತ್ಸವದಲ್ಲಿ ಭಾಗಿಯಾಗಲು ಭಕ್ತರಿಗೆ ಜಿಲ್ಲಾಡಳಿತ ಅವಕಾಶವನ್ನು ನಿರಾಕರಿಸಿದೆ. ಅಲ್ಲದೇ ರಥಬೀದಿಯನ್ನು ಎರಡು ದಿನಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ಹೀಗಾಗಿ ವಿಟ್ಲ ಪಿಂಡಿ, ಮೊಸರು ಕುಡಿಕೆ ಆಚರಣೆ ಕೇವಲ ಮಠದ ಸಿಬ್ಬಂದಿಗಳಿಗಷ್ಟೇ ಸೀಮಿತವಾಗಲಿದೆ.

ಅಷ್ಟಮಿ ಹಾಗೂ ವಿಟ್ಲ ಪಿಂಡಿಯಂದು ಯಾವುದೇ ವೇಷ ಧರಿಸುವುದಕ್ಕೆ ಕೂಡ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಒಟ್ಟಿನಲ್ಲಿ ಈ ಬಾರಿ ಕೃಷ್ಣ ಜನ್ಮಾಷ್ಟಮಿ ಸಂಪೂರ್ಣವಾಗಿ ಭಕ್ತರಿಲ್ಲದೆ ನಡೆಯಲಿದೆ.