ಇತ್ತೀಚೆಗೆ ಗುಜರಾತಿನಿಂದ ತಮಿಳುನಾಡಿನ ಕರಾವಳಿವರೆಗೂ ಅತಿ ಹೆಚ್ಚು ಕಳ್ಳ ಸಾಗಾಣಿಕೆ ಆಗುವ ವಸ್ತು ಯಾವುದು ಎಂದು ಗೊತ್ತಾದರೆ ಅಚ್ಚರಿ ಪಡುತ್ತಿರ! ಅದು ಮತ್ಯಾವುದು ಅಲ್ಲ ತಿಮಿಂಗಿಲದ ವಾಂತಿ (Ambergris). ವಾಂತಿಯನ್ನೂ ಕಳ್ಳ ಸಾಗಾಣಿಕೆ ಮಾಡಬಹುದಾ ಅಂದರೆ, ಹೌದು. ಇದು ಸ್ಪರ್ಮ್ ವೇಲ್ (Sperm Whale Vomit) ಎಂಬ ತಿಮಿಂಗಿಲದಿಂದ ಉಂಟಾಗುತ್ತದೆ. ಈಗಾಗಲೇ ನೂರಕ್ಕೂ ಹೆಚ್ಚು ಜನ ಇದನ್ನು ಕದ್ದೊಯ್ಯುವ (Ambergris Smuggling) ಸಮಯದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ತಿಮಿಂಗಿಲದ ವಾಂತಿಗೆ ಲಕ್ಷಕ್ಕೂ ಅಧಿಕ ಬೆಲೆ ಇದೆ.
ಕೇವಲ ವಾಂತಿಯಲ್ಲ!
ಇದು ಕೇವಲ ವಾಂತಿಯಲ್ಲ. ಸ್ಪರ್ಮ್ ವೆಲ್ ತಿಮಿಂಗಿಲದ ಹೊಟ್ಟೆಯಿಂದ ಹೊರ ಬರುವ ಮೇಣದಂತಹ ವಸ್ತು. ಇದನ್ನು ಅಂಬರ್ ಗ್ರೀಸ್ ಎನ್ನುತ್ತಾರೆ. ಈ ತಿಮಿಂಗಿಲ ನೋಡಲು 49ರಿಂದ 59 ಅಡಿ ಉದ್ದ ಇದ್ದು, 35ರಿಂದ 45 ಟನ್ ಭಾರ ಇರುತ್ತವೆ. ಇವುಗಳು ಅತ್ಯಂತ ದೊಡ್ಡ ಮೆದುಳು ಹೊಂದಿದ್ದು, ತಲೆಯಲ್ಲಿ ಎಣ್ಣೆಯಂತಹ ದ್ರವ ಇರುತ್ತದೆ. ಪುರಾತನ ಕಾಲದಲ್ಲಿ ತಿಮಿಂಗಿಲ ಕೊಂದು ಅದರ ಎಣ್ಣೆಯನ್ನು ದೀಪ ಹಚ್ಚಲು ಉಪಯೋಗಿಸುತ್ತಿದ್ದರು.
ಯಾಕಿಷ್ಟು ದುಬಾರಿ?
ಸಾಧಾರಣವಾಗಿ ನಾವು ಬಳಸುವ ಪರ್ಫ್ಯುಮ್ ಸುವಾಸನೆ ಕೆಲವೇ ಗಂಟೆಗಳಲ್ಲಿ ಕಡಿಮೆ ಆಗುತ್ತದೆ. ಎಷ್ಟೇ ದುಬಾರಿ ಆದರೂ ಸರಿ, ಈ ಪರ್ಫ್ಯುಮ್ ಆದರೂ ಇದೇ ಸ್ಥಿತಿ. ಆದರೆ, ಆಂಬರ್ ಗ್ರೀಸ್ ಸುಗಂಧ ವಿಶಿಷ್ಟವಾದ ಗುಣವನ್ನು ಹೊಂದಿದೆ. ಸುಮಾರು 1000ಕ್ಕೂ ಹೆಚ್ಚು ವರ್ಷಗಳಿಂದ ಇದರ ಬಳಕೆಯಿದೆ. ಆಂಬರ್ ಗ್ರೀಸ್ ಬಳಕೆ ಮೊದಲು ಆರಂಭ ಆಗಿದ್ದೆ ಅರಬ್ ರಾಷ್ಟ್ರಗಳಲ್ಲಿ. ಇಲ್ಲಿಂದ ಮುಂದೆ ಐರೋಪ್ಯ ದೇಶಗಳಿಗೂ ಆಂಬರ್ ಗ್ರೀಸ್ ಪರಿಚಯ ಆಯ್ತು. ಈಜಿಪ್ಟ್ ನಲ್ಲಿ ಇದನ್ನು ಬಳಸಿ ಉದುಬತ್ತಿ ತಯಾರಿಸುತ್ತಿದ್ದರು.
19ನೆ ಶತಮಾನದಿಂದ ನಕಲಿ ಆಂಬರ್ ಗ್ರೀಸ್ ಬಳಕೆಯಲ್ಲಿದೆ. ಆದರೆ ಇದು ಒರಿಜಿನಲ್ ಆಂಬರ್ ಗ್ರೀಸ್ಗೆ ಸಾಟಿ ಆಗುವುದಿಲ್ಲ.
ಆಂಬರ್ ಗ್ರೀಸ್ ಬಿಡುಗಡೆ ಆಗುವುದು ಹೇಗೆ?
ಸ್ಪರ್ಮ್ ವೇಲ್ ತಾನು ತಿಂದ ಗಟ್ಟಿ ಆಹಾರ ಅರಗಿಸಲು ದ್ರವ ಬಿಡುಗಡೆ ಮಾಡುತ್ತದೆ. ಅದರಿಂದ ಆಂಬರ್ ಗ್ರೀಸ್ ಬಿಡುಗಡೆ ಆಗುತ್ತದೆ ಎಂಬ ವಾದವಿದೆ. ಆದರೆ ಬಹುತೇಕ ಮಂದಿ ಇದನ್ನು ಅಲ್ಲಗಳೆಯುತ್ತಾರೆ . ಎಲ್ಲ ಸ್ಪರ್ಮ್ ವೇಲ್ಗಳಿಂದ ಆಂಬರ್ ಗ್ರೀಸ್ ಉತ್ಪತ್ತಿ ಆಗುವುದಿಲ್ಲ. 100ರಲ್ಲಿ ಒಂದು ವೇಲ್ ಮಾತ್ರ ಉತ್ಪತ್ತಿ ಮಾಡುತ್ತದೆ ಎನ್ನುವ ವಾದವು ಇದೆ.
ತಿಮಿಂಗಿಲ ಹೊರಸೂಸುವ ಈ ಆಂಬರ್ ಗ್ರೀಸ್ ನೀರಿನ ಮೇಲೆ ಸುಲಭವಾಗಿ ತೇಲುವುದಿಲ್ಲ. ಮೊದಲು ಕಪ್ಪು,ಬಿಳಿ ಬೂದು ಬಣ್ಣದ ಇದು ನಂತರ ಬಣ್ಣ ಬದಲಾಯಿಸುತ್ತದೆ. ಒಣಗಿದ ನಂತರ ಇದು ಹಳದಿ ಬಣ್ಣಕ್ಕೆ ತಿರುಗುತ್ತದೆ. ಮೊದಲು ವಾಸನೆ ಇದ್ದು, ಸಮುದ್ರದಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶೇಷ ಸುವಾಸನೆ ಉಂಟಾಗುತ್ತದೆ. ಇದನ್ನು ಸುಗಂಧ ದ್ರವ್ಯ, ಔಷಧಿ ಹಾಗೂ ಆಹಾರದಲ್ಲೂ ಬಳಸಲಾಗುತ್ತದೆ.
ಆಂಬರ್ ಗ್ರೀಸ್ ಅನ್ನು ಭಾರತ, ಅಮೆರಿಕ ,ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 40 ದೇಶಗಳಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಆಂಬರ್ ಗ್ರೀಸ್ ಬಳಕೆ ಹಾಗೂ ಮಾರಾಟವನ್ನು ವನ್ಯ ಜೀವಿಗಳ ಸಂರಕ್ಷಣೆ ಕಾಯ್ದೆ ಅಡಿ ನಿಷೇಧಿಸಲಾಗಿದೆ. ಗುಜರಾತ್ ಹಾಗೂ ಒಡಿಶಾ ಸಮುದ್ರದಲ್ಲಿ ಸ್ಪರ್ಮ್ ವೇಲ್ ಇವೆ ಎಂದು ಹೇಳಲಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಅವು ದಕ್ಷಿಣದತ್ತ ಬರಬಹುದು ಎಂಬ ಮಾತಿದೆ.
ಬರಹ: ತೇಜಸ್ವಿನಿ ಆರ್ ಕೆ
ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು
ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ
(What is Ambergris smuggling and How it Produce from sperm whale)