ಮಂಗಳೂರು : ಉಸೇನ್ ಬೋಲ್ಟ್ … ವಿಶ್ವದ ವೇಗದ ಓಟಗಾರ. ಸಿಂಥೆಟಿಕ್ ಟ್ರ್ಯಾಕ್ ಮೇಲೆ 100 ಮೀಟರ್ ಓಟವನ್ನು ಕೇವಲ 9.58 ಸೆಕೆಂಡ್ ಗಳಲ್ಲಿ ಕ್ರಮಿಸೋ ಮೂಲಕ ವಿಶ್ವದಾಖಲೆಯನ್ನು ಬರೆದಾತ. ಈತ ಚಿಗರೆಯ ಓಟಕ್ಕೆ ವಿಶ್ವವೇ ನಿಬ್ಬೆರಗಾಗಿತ್ತು. ಉಸೇನ್ ಬೋಸ್ಟ್ ಒಲಿಂಪಿಕ್ಸ್ ನಲ್ಲಿ ಚಿನ್ನಕ್ಕಾಗಿ ಓಡುತ್ತಿದ್ರೆ ಕ್ರೀಡಾಭಿಮಾನಿಗಳು ಆತನ ಓಟವನ್ನು ನೋಡೋಕೆ ಕಾದು ಕುಳಿತಿರುತ್ತಾರೆ. ಉಸೇನ್ ಬೋಲ್ಟ್ ಸಾಧನೆಯನ್ನು ಇದುವರೆಗೂ ಮೀರಿಸಿದವರೇ ಇರಲಿಲ್ಲ. ಆದ್ರೀಗ ಕಡಲತಡಿಯ ಓಟಗಾರನೋರ್ವ 100 ಮೀಟರ್ ಓಟವನ್ನು ಕೇವಲ 9.55 ಸೆಕೆಂಡ್ ಗಳಲ್ಲಿ ಓಡುವ ಮೂಲಕ ಉಸೇನ್ ಬೋಲ್ಟ್ ದಾಖಲೆಯನ್ನೇ ಮೀರಿಸಿದ್ದಾನೆ.

ಅಷ್ಟಕ್ಕೂ ಈ ಸಾಧಕ ಸಾಧನೆ ಮಾಡಿರೋದು ಸಿಂಥೆಟಿಕ್ ಟ್ರಾಕ್ ನಲ್ಲಿ ಅಲ್ಲಾ, ಇನ್ನು ಒಲಿಂಪಿಕ್ಸ್ ಗೇಮ್ ನಲ್ಲಿಯೂ ಅಲ್ಲ. ಬದಲಾಗಿ ಕರಾವಳಿಯ ಜಾನಪದ ಕ್ರೀಡೆಯಾಗಿರೋ ಕಂಬಳದ ಗದ್ದೆಯಲ್ಲಿ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶ್ರೀನಿವಾಸ ಗೌಡ ಎಂಬವರೇ ವೇಗದ ಓಟಗಾರ. ಕಾಲಿಗೆ ಶೂ ಹಾಕಿಕೊಂಡು ಸಿಂಥೆಟಿಕ್ ಟ್ರಾಕ್ ನಲ್ಲಿ ಸಾಧನೆ ಮಾಡೋದು ಸುಲಭವಲ್ಲ. ಆದ್ರೆ ಕಂಬಳಕ್ಕಾಗಿ ಸಿದ್ದ ಪಡಿಸೋ ಕೆಸರಿನ ಗದ್ದೆಯಲ್ಲಿ ಕೋಣಗಳನ್ನು ಓಡಿಸುತ್ತಾ ಈ ಸಾಧನೆ ಮಾಡಿರೋದು ಸಾಮಾನ್ಯವೇನಲ್ಲ. ಯಾರಿಂದಲೂ ಮಾಡಲಾಗದ ಸಾಧನೆಯನ್ನು ಇದೀಗ ಶ್ರೀನಿವಾಸ ಗೌಡರು ಮಾಡಿ ತೋರಿಸಿದ್ದಾರೆ.

ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಐಕಳದಲ್ಲಿ ನಡೆದ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡರು 142.50 ಮೀಟರ್ ಕೆರೆ (ಕಂಬಳದ ಕೋಣಗಳ ಟ್ರ್ಯಾಕ್)ಯನ್ನು ಕೇವಲ 13.62 ಸೆಕೆಂಡ್ಗಳಲ್ಲಿ ಕ್ರಮಿಸಿದ್ದಾರೆ. ಅಲ್ಲಿಗೆ 100 ಮೀಟರ್ ದೂರವನ್ನು ಕೇವಲ 9.55 ಸೆಕೆಂಡ್ನಲ್ಲಿ ತಲುಪಿದಂತಾಗಿದೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆ ಮಾತ್ರವಲ್ಲ, ಈ ಸಾಧನೆಯನ್ನು ಇದೀಗ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆಗೆ ಹೋಲಿಕೆ ಮಾಡಲಾಗುತ್ತಿದೆ. ಕಂಬಳ ಕ್ರೀಡೆಯಲ್ಲಿ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ದೂರ ಹಾಗೂ ಓಡಿದ ಸಾಧನೆಯನ್ನು ತಂತ್ರಜ್ಞಾನದ ಮೂಲಕವೇ ಅಳೆಯಲಾಗಿದೆ. ಇದೀಗ ಶ್ರೀನಿವಾಸ ಗೌಡ ಅಸಮಾನ್ಯ ಸಾಧನೆಯನ್ನು ತುಳುನಾಡ ಮಂದಿ ಕೊಂಡಾಡುತ್ತಿದ್ದಾರೆ.