ಮುಂಬೈ : ಆಸ್ಟ್ರೇಲಿಯಾ ವಿರುದ್ದದ ಮೂರು ಏಕದಿನ ಪಂದ್ಯಗಳ ಸರಣಿಯ ಆರಂಭದಲ್ಲಿಯೇ ಟೀಂ ಇಂಡಿಯಾ ಮುಗ್ಗರಿಸಿದೆ. ಡೇವಿಡ್ ವಾರ್ನರ್ ಹಾಗೂ ಆರೋನ್ ಪಿಂಚ್ ಭರ್ಜರಿ ಶತಕದ ನೆರವಿನಿಂದ ಮೊದಲ ಏಕ ದಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದ ಭಾರತದಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬಹುಬೇಗನೆ ಪೆವಿಲಿಯನ್ ಹಾದಿ ಹಿಡಿದಿದ್ದರು. ನಂತರ ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು.

ಭಾರತ ಪರ ಶಿಖರ್ ಧವನ್ 74, ಕೆಎಲ್ ರಾಹುಲ್ 47, ವಿರಾಟ್ ಕೊಹ್ಲಿ 16, ರಿಷಬ್ ಪಂತ್ 28 ಮತ್ತು ರವೀಂದ್ರ ಜಡೇಜಾ 25 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 255 ರನ್ ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಸ್ಟಾರ್ಕ್ 3, ಕಮ್ಮಿನ್ಸ್, ರಿಚರ್ಡ್ ಸನ್ ತಲಾ 2 ವಿಕೆಟ್ ಪಡೆದಿದ್ದಾರೆ.

ಭಾರತ ನೀಡಿದ್ದ 256 ರನ್ ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯದ ಆರಂಭಿಕರಾದ ಡೇವಿಡ್ ವಾರ್ನರ್ ಅಜೇಯ 128 ಮತ್ತು ಆರೋನ್ ಪಿಂಚ್ ಅಜೇಯ 110 ರನ್ ಬಾರಿಸಿದ್ದಾರೆ. ಈ ಮೂಲಕ ವಿಕೆಟ್ ನಷ್ಟವಿಲ್ಲದೇ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.