ಬೆಂಗಳೂರು: ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಇದೇ ಜೂನ್ ಕೊನೆಗೆ ಅಂತ್ಯವಾಗಲಿರುವ ಕಾರಣ, ಭಾರತ ತಂಡಕ್ಕೆ ಹೊಸ ಕೋಚ್ (Team India Head Coach) ನೇಮಕಕ್ಕೆ ಬಿಸಿಸಿಐ (BCCI) ಅರ್ಜಿ ಆಹ್ವಾನಿಸಿದೆ.
ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿದ್ದು, ನಂತರ ಕೋಚ್ ಆಯ್ಕೆ ಪ್ಯಾನಲ್ ಅರ್ಜಿಗಳ ವಿಮರ್ಶೆ ನಡೆಸಲಿದೆ. ಶಾರ್ಟ್ ಲಿಸ್ಟ್ ಆದವರನ್ನು ಸಂದರ್ಶನಕ್ಕೆ ಕರೆಯಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021ರಲ್ಲಿ ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದ ರಾಹುಲ್ ದ್ರಾವಿಡ್ (Rahul Dravid), ಮುಂದಿನ ದಿನಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಂತರ ಟೀಮ್ ಇಂಡಿಯಾ ಕೋಚ್ ಹುದ್ದೆ ತೊರೆಯಲಿದ್ದಾರೆ.
ದ್ರಾವಿಡ್ ಕೇವಲ 2 ವರ್ಷಗಳ ಅವಧಿಗಷ್ಟೇ ಟೀಮ್ ಇಂಡಿಯಾ ಕೋಚ್ ಆಗಿ ನೇಮಗೊಂಡಿದ್ದರು. ಹೀಗಾಗಿ ಅವರ ಅವಧಿ ಕಳೆದ ವರ್ಷವೇ ಅಂತ್ಯಗೊಂಡಿತ್ತು. ಆದರೆ ಐಸಿಸಿ ಟಿ20 ವಿಶ್ವಕಪ್’ವರೆಗೆ ಭಾರತ ತಂಡದ ಕೋಚ್ ಆಗಿ ಮುಂದುವರಿಯುವಂತೆ ದ್ರಾವಿಡ್ ಅವರಲ್ಲಿ ಬಿಸಿಸಿಐ ಮನವಿ ಮಾಡಿತ್ತು.
ದ್ರಾವಿಡ್ ಅವರು ಕೋಚ್ ಆಗಿ ಪುನರಾಯ್ಕೆ ಬಯಸುವುದಾದರೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಆದರೆ ಮತ್ತೆ ಕೋಚ್ ಆಗಲು ದ್ರಾವಿಡ್ ಅವರಿಗೆ ಮನಸ್ಸಿಲ್ಲದ ಕಾರಣ ಅವರು ಅರ್ಜಿ ಸಲ್ಲಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ನೂತನ ಕೋಚ್ ಹುದ್ದೆಯ ಅವಧಿ:
ಭಾರತ ತಂಡದ ನೂತನ ಮುಖ್ಯ ಕೋಚ್ ಅವಧಿ ಮೂರೂವರೆ ವರ್ಷಗಳದ್ದಾಗಿರುತ್ತದೆ. 2024ರ ಜುಲೈ 1ಕ್ಕೆ ಆರಂಭವಾಗಿ 2027ರ ಡಿಸೆಂಬರ್ 31ಕ್ಕೆ ಕೋಚ್ ಹುದ್ದೆ ಅವಧಿ ಕೊನೆಗೊಳ್ಳಲಿದೆ. ಭಾರತ ಪುರುಷರ ತಂಡದ ಪರ್ಫಾಮೆನ್ಸ್ ಮತ್ತು ಮ್ಯಾನೇಜ್ಮೆಂಟ್ ಜವಾಬ್ದಾರಿ ಮುಖ್ಯ ತರಬೇತುದಾರನದ್ದಾಗಿರುತ್ತದೆ.
ಭಾರತ ತಂಡದ ಕೋಚ್ ಆಗಲು ಬಿಸಿಸಿಐ ನಿಗದಿ ಪಡಿಸಿರುವ ಮಾನದಂಡಗಳು:
- 30 ಟೆಸ್ಟ್ ಅಥವಾ 50 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರಬೇಕು; ಅಥವಾ
- ಪೂರ್ಣ ಸದಸ್ಯತ್ವ ಹೊಂದಿರುವ ಟೆಸ್ಟ್ ಆಡುವ ರಾಷ್ಟ್ರೀಯ ತಂಡಕ್ಕೆ ಕನಿಷ್ಠ ಎರಡು ವರ್ಷ ಕೋಚ್ ಆಗಿ ಕಾರ್ಯನಿರ್ವಹಿಸಿರಬೇಕು; ಅಥವಾ
- ಅಸೋಸಿಯೇಟ್ ಸದಸ್ಯ ರಾಷ್ಟ್ರಗಳ ತಂಡದ ಹೆಡ್ ಕೋಚ್/ಐಪಿಎಲ್ ಅಥವಾ ಅದಕ್ಕೆ ಸರಿಸಮನಾದ ಅಂತರಾಷ್ಟ್ರೀಯ ಲೀಗ್/ಫಸ್ಟ್ ಕ್ಲಾಸ್ ತಂಡಗಳ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿರಬೇಕು; ಅಥವಾ
- ಕನಿಷ್ಠ 3 ವರ್ಷ ರಾಷ್ಟ್ರೀಯ ಎ ತಂಡಗಳ ಕೋಚ್ ಆಗಿರಬೇಕು; ಅಥವಾ
- ಬಿಸಿಸಿಐನ ಲೆವೆಲ್ 3 ಸರ್ಟಿಫಿಕೇಟ್ ಹೊಂದಿರಬೇಕು
- ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 60 ವರ್ಷಕ್ಕಿಂತ ಕಡಿಮೆ ಇರಬೇಕು.