ಬೆಂಗಳೂರು: ಇಂಗ್ಲೆಂಡ್’ಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್(Ben Stokes) ಅವರ ಮೇಲೆ ಐಪಿಎಲ್ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಐಪಿಎಲ್ ಮಿನಿ ಹರಾಜು ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಬೆನ್ ಸ್ಟೋಕ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಐಪಿಎಲ್ ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿವೆ.
ಈ ಹಿಂದೆ ಬೆನ್ ಸ್ಟೋಕ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಕಳೆದ ವರ್ಷದ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಸ್ಟೋಕ್ಸ್ ಅವರನ್ನು ಮುಂಬರುವ ಟೂರ್ನಿಗೆ ತಂಡಕ್ಕೆ ಸೇರಿಸಿಕೊಳ್ಳಲು ರಾಯಲ್ಸ್ ಪಡೆ ಮುಂದಾಗಿದೆ. ಬೆನ್ ಸ್ಟೋಕ್ಸ್ ಮುಂದಿನ ಐಪಿಎಎಲ್’ಗೆ ಲಭ್ಯರಿದ್ದಾರೆಯೇ ಎಂಬ ಬಗ್ಗೆ ಸ್ಟೋಕ್ಸ್ ಅವರನ್ನು ರಾಜಸ್ಥಾನ್ ರಾಯಲ್ಸ್ ವಿಚಾರಿಸಿದೆ. ಇದಕ್ಕೆ ಬೆನ್ ಸ್ಟೋಕ್ಸ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ್ದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಟ್ರೋಫಿ ಗೆದ್ದು ಕೊಟ್ಟಿದ್ದರು. ಫೈನಲ್’ನಲ್ಲಿ 138 ರನ್’ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 45 ರನ್ನಿಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದಾಗ 4ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿದಿದ್ದ ಸ್ಟೋಕ್ಸ್ ಜವಾಬ್ದಾರಿಯುತ ಆಟವಾಡಿದ್ದರು. ಪಾಕಿಸ್ತಾನದ ಅಪಾಯಕಾರಿ ದಾಳಿಗೆ ಸಡ್ಡು ಹೊಡೆದು ನಿಂತಿದ್ದ ಬೆನ್ ಸ್ಟೋಕ್ಸ್ 49 ಎಸೆತಗಳಲ್ಲಿ ಅಜೇಯ 52 ರನ್ ಸಿಡಿಸಿ ಇಂಗ್ಲೆಂಡ್ ಗೆಲುವಿಗೆ ಕಾರಣರಾಗಿದ್ದರು.
32 ವರ್ಷದ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ತಾಕತ್ತಿರುವ ಆಟಗಾರ. ಹೀಗಾಗಿ ಐಪಿಎಲ್ ಮಿನಿ ಹರಾಜಿನಲ್ಲಿ ಸ್ಟೋಕ್ಸ್ ಅವರಿಗೆ ಭಾರೀ ಬೇಡಿಕೆಯಿದೆ. ಐಪಿಎಲ್-2023ರಲ್ಲಿ ಆಡಲು ಬೆನ್ ಸ್ಟೋಕ್ಸ್ ನಿರ್ಧರಿಸಿರುವುದಾಗಿ ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ,. ಹೀಗಾಗಿ ಮಿನಿ ಹರಾಜಿನಲ್ಲಿ ಸ್ಟೋಕ್ಸ್ ಅವರನ್ನು ಖರೀದಿಸಲು ಫ್ರಾಂಚೈಸಿಗಳ ಮಧ್ಯೆ ದೊಡ್ಡ ಪೈಪೋಟಿಯೇ ಏರ್ಪಡಲಿದೆ.
ಇದನ್ನೂ ಓದಿ : MS Dhoni : ಟಿ 20 ವಿಶ್ವಕಪ್ 2022 ಸೋಲಿನ ಬಳಿಕ ಟೀಂ ಇಂಡಿಯಾಕ್ಕೆ ಮರಳಿದ ಎಂಎಸ್ ಧೋನಿ
ಇದನ್ನೂ ಓದಿ : IPL Mini Auction : ಐಪಿಎಲ್-2023ರಿಂದ ಪ್ಯಾಟ್ ಕಮಿನ್ಸ್ ಔಟ್, ಕೇನ್ ವಿಲಿಯಮ್ಸನ್ ಮೇಲೆ CSK ಕಣ್ಣು
2017ರಿಂದ ಐಪಿಎಲ್’ನಲ್ಲಿ ಆಡುತ್ತಿರುವ ಬೆನ್ ಸ್ಟೋಕ್ಸ್ ಒಟ್ಟು 43 ಪಂದ್ಯಗಳನ್ನಾಡಿದ್ದು, ಎರಡು ಶತಕಗಳ ಸಹಿತ ಒಟ್ಟು 920 ರನ್ ಕಲೆ ಹಾಕಿದ್ದಾರೆ. ಜೊತೆಗೆ 28 ವಿಕೆಟ್’ಗಳನ್ನೂ ಪಡೆದಿದ್ದಾರೆ.
Ben Stokes: IPL franchises eyes on World Cup hero Ben Stokes, who is the star England all-rounder?