KSCA Ground Ban : ಪಂದ್ಯ ನಡೆಯುತ್ತಿದ್ದಾಗಲೇ ಸ್ಟಂಪ್‌ಗೆ ಒದ್ದ ಗ್ರೌಂಡ್ ಓನರ್, KSCAನಿಂದ ಗ್ರೌಂಡ್ ಬ್ಯಾನ್

ಬೆಂಗಳೂರು: ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ (Karnataka State Cricket Association) ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. KSCA ಫಸ್ಟ್ ಡಿವಿಜನ್ ಪಂದ್ಯವೊಂದು ನಡೆಯುತ್ತಿದ್ದ ವೇಳೆ, ಮೈದಾನಕ್ಕೆ ನುಗ್ಗಿದ ಮೈದಾನದ ಮಾಲೀಕ ಸ್ಟಂಪ್ ಒದ್ದು, ಪಂದ್ಯವನ್ನೇ ನಿಲ್ಲಿಸಿ ಬಿಟ್ಟಿದ್ದಾನೆ. ಸಿಟ್ಟಿಗೆದ್ದ ರಾಜ್ಯ ಕ್ರಿಕೆಟ್ ಸಂಸ್ಥೆ ಆ ಮೈದಾನದ ಮೇಲೆಯೇ ನಿಷೇಧ (KSCA Ground Ban)ಹೇರಿ ಬಿಟ್ಟಿದೆ.

2 ವಾರಗಳ ಹಿಂದೆ ಬೆಂಗಳೂರಿನ ಗಟ್ಟಿನಾಗನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ VKCA ಮೈದಾನದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್ ಫಸ್ಟ್ ಡಿವಿಜನ್ ಪಂದ್ಯ ನಡೆಯುತ್ತಿತ್ತು. ರಾಜ್ಯದ ಪ್ರತಿಷ್ಠಿತ ತಂಡಗಳಾದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಮತ್ತು ಜವಾನ್ಸ್ ಕ್ರಿಕೆಟ್ ಕ್ಲಬ್ ತಂಡಗಳ ಮಧ್ಯೆ ನಡೆಯುತ್ತಿದ್ದ ಪಂದ್ಯ. ಪಂದ್ಯ ಆರಂಭವಾಗಿ 3 ಓವರ್ ಮುಗಿದಿರಲಿಲ್ಲ. ಅಷ್ಟರಲ್ಲೇ ಏಕಾಏಕಿ ಕ್ರೀಡಾಂಗಣಕ್ಕೆ ನುಗ್ಗಿದ VKCA ಮೈದಾನದ ಮಾಲೀಕ ಸ್ಟಂಪ್”ಗಳನ್ನು ಒದ್ದು ಹಾಕಿದ್ದಾನೆ. ಆಟಗಾರರನ್ನು, ಅಂಪೈರ್”ಗಳನ್ನು ನಿಂದಿಸುತ್ತಾ ಪಂದ್ಯವೇ ನಡೆಯದಂತೆ ಮಾಡಿ ಬಿಟ್ಟಿದ್ದಾನೆ. ಹೀಗಾಗಿ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡಿದೆ.

ಘಟನೆಯ ಬಗ್ಗೆ ತಿಳಿಯುತ್ತಲೇ ರಾಜ್ಯ ಕ್ರಿಕೆಟ್ ಸಂಸ್ಥೆ VKCA ಮೈದಾನದ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, VKCA ಮೈದಾನವನ್ನು ಬ್ಲಾಕ್”ಲಿಸ್ಟ್”ಗೆ ಸೇರಿಸಿ ಅಲ್ಲಿ ಯಾವುದೇ ಪಂದ್ಯಗಳನ್ನು ನಡೆಸದಿರುವಂತೆ ತನ್ನ ಅಧೀನದಲ್ಲಿರುವ ಸಂಸ್ಥೆಗಳಿಗೆ KSCA ಸೂಚನೆ ನೀಡಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪೂರ್ ಈ ಬಗ್ಗೆ ಜೂನ್ 30ರಂದು ಸೂಚನೆ ಹೊರಡಿಸಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಯಾವುದೇ ಆಟಗಾರರು, ಅಧಿಕಾರಿಗಳು VKCA ಮೈದಾನದಲ್ಲಿ ಪಂದ್ಯಗಳನ್ನಾಡುವಂತಿಲ್ಲ, ಅಲ್ಲಿ ಅಭ್ಯಾಸವನ್ನೂ ನಡೆಸುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಕ್ರಿಕೆಟ್ ಸಂಸ್ಥೆ ಎಚ್ಚರಿಸಿದೆ.

ಹಾಗಾದ್ರೆ ಪಂದ್ಯ ನಡೆಯುತ್ತಿದ್ದ ವೇಳೆಯೇ ಮೈದಾನದ ಮಾಲೀಕ ಕ್ರೀಡಾಂಗಣಕ್ಕೆ ನುಗ್ಗಿದ್ದೇಕೆ.? ಇದರ ಹಿಂದೊಂದು ಇಂಟ್ರೆಸ್ಟಿಂಗ್ ಕಥೆಯಿದೆ. VKCA ಮೈದಾನದ ಮಾಲೀಕನ ಪುತ್ರ ವಲ್ಚರ್ಚ್ ಕ್ರಿಕೆಟ್ ಕ್ಲಬ್ ಪರ ಆಡುತ್ತಾನೆ. ಇತ್ತೀಚೆಗೆ ನಡೆದ ಕೆಲ ಪಂದ್ಯಗಳಲ್ಲಿ ತನ್ನ ಪುತ್ರನಿಗೆ ಆಡುವ ಅವಕಾಶ ನೀಡದಿದ್ದಕ್ಕೆ ಆಕ್ರೋಶಗೊಂಡಿದ್ದ VKCA ಮೈದಾನದ ಮಾಲೀಕ, ಆ ಕೋಪವನ್ನು ತನ್ನದೇ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಮತ್ತೊಂದು ಪಂದ್ಯಕ್ಕೆ ಅಡ್ಡಿ ಪಡಿಸುವ ಮೂಲಕ ತೀರಿಸಿಕೊಂಡಿದ್ದಾನೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಗಳು ಹೇಳಿವೆ. ಆತ ಮಾಡಿದ ತಪ್ಪಿಗೆ ಈಗ ಮೈದಾನವನ್ನೇ ಬ್ಲಾಕ್’ಲಿಸ್ಟ್”ಗೆ ಸೇರಿಸುವ ಮೂಲಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿಸ್ತು ಕ್ರಮ ಜರುಗಿಸಿದೆ.

ಇದನ್ನೂ ಓದಿ : India tour of Zimbabwe : ಆಗಸ್ಟ್‌ನಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ಟೂರ್, ಭಾರತ ತಂಡಕ್ಕೆ ಕ್ಯಾಪ್ಟನ್ ಯಾರು ?

ಇದನ್ನೂ ಓದಿ : ಯುವ ಆಟಗಾರನ ಹಾದಿಗೆ ವಿರಾಟ್ ಅಡ್ಡಗಾಲು, ಈಗೇನ್ಮಾಡ್ತಾರೆ ಟೀಮ್ ಇಂಡಿಯಾ ಹೀರೋ ?

KSCA Ground Ban : The ground owner who kicked the stumps while the match was in progress

Comments are closed.