ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಓಪನರ್, ಗಬ್ಬರ್ ಖ್ಯಾತಿಯ ಶಿಖರ್ ಧವನ್ (Shikhar Dhawan) ಬೆಂಗಳೂರಿನಲ್ಲಿ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kichcha Sudeep) ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸುದೀಪ್ ಅವರ ಮನೆಯಲ್ಲಿ ಈ ಭೇಟಿ (Shikhar Dhawan meets actor Sudeep) ನಡೆದಿದೆ. ಶಿಖರ್ ಧವನ್ ಜೊತೆಗಿನ ಭೇಟಿಯ ಚಿತ್ರಗಳನ್ನು ನಟ ಸುದೀಪ್ ಸುದೀಪ್ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಗಬ್ಬರ್ ಭೇಟಿಯ ಬಗ್ಗೆ ಎರಡು ಸಾಲುಗಳನ್ನು ಬರೆದಿದ್ದಾರೆ. “ಎಂತಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ.. ಮುಂಬರುವ ಐಪಿಎಲ್’ಗೆ ನನ್ನ ಸಹೋದರನಿಗೆ ಶುಭಹಾರೈಕೆಗಳು” ಎಂದು ಸುದೀಪ್ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
37 ವರ್ಷದ ಶಿಖರ್ ಧವನ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದು, ಈ ಮಾಹಿತಿ ಪಡೆದುಕೊಂಡಿದ್ದ ಕಿಚ್ಚ ಸುದೀಪ್ ತಮ್ಮ ಸ್ನೇಹಿತರೊಬ್ಬರ ಮೂಲಕ ಶಿಖರ್ ಧವನ್ ಅವರನ್ನು ಸಂಪರ್ಕಿಸಿ ಮನೆಗೆ ಆಹ್ವಾನಿಸಿದ್ದರು. ಸುದೀಪ್ ಆಹ್ವಾನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಧವನ್, ಭಾನುವಾರ ರಾತ್ರಿ ಕಿಚ್ಚನ ಮನೆಗೆ ಭೇಟಿ ಕೊಟ್ಟಿದ್ದಾರೆ.
ಎರಡು ದಿನಗಳ ಹಿಂದಷ್ಟೇ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ, ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್, ಕಿಚ್ಚ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಕರ್ನಾಟಕದ ಕೆ.ಸಿ ಕಾರಿಯಪ್ಪ, ಸಂಜು ಸ್ಯಾಮ್ಸನ್ ಅವರನ್ನು ಸುದೀಪ್ ನಿವಾಸಕ್ಕೆ ಕರೆದೊಯ್ದಿದ್ದರು. ಸಿನಿಮಾ ಜೊತೆ ಕ್ರಿಕೆಟ್ ಮೇಲೂ ಅಪಾರ ಆಸಕ್ತಿ ಹೊಂದಿರುವ ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್’ನಲ್ಲಿ (CCL) ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕತ್ವ ವಹಿಸಿ ಎರಡು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಈ ಬಾರಿಯ ಸಿಸಿಎಲ್’ನಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಕಿಚ್ಚ ಸುದೀಪ್ ಅವರೇ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ : 5 ಟೆಸ್ಟ್ ಪಂದ್ಯಗಳ ಮೇಲೆ ನಿಂತಿದೆ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯ
ಇದನ್ನೂ ಓದಿ : KL Rahul: ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಜೊತೆ ರಾಹುಲ್ ಓಪನರ್, ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರ ಹೆಗಲಿಗೆ?
ಸಿಸಿಎಲ್ ಅಷ್ಟೇ ಅಲ್ಲದೆ, ಸುದೀಪ್ ಕರ್ನಾಟಕ ಚಲನಚಿತ್ರ ಕಪ್ (KCC) ಟೂರ್ನಿಯ ಸಂಸ್ಥಾಪಕರಾಗಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದರ ಜೊತೆ ಅಂತರಾಷ್ಟ್ರೀಯ ಆಟಗಾರರನ್ನು ಕೆಸಿಸಿ ಟೂರ್ನಿಗೆ ಕರೆಸಿ ಆಡಿಸುತ್ತಿದ್ದಾರೆ. ಫೆಬ್ರವರಿ 24 ಮತ್ತು 25ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕೆಸಿಸಿ ಮೂರನೇ ಆವೃತ್ತಿಯ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ದಿಗ್ಗಜರಾದ ಕ್ರಿಸ್ ಗೇಲ್, ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್, ಭಾರತದ ಸುರೇಶ್ ರೈನಾ ಮತ್ತು ಸುಬ್ರಮಣ್ಯಮ್ ಬದ್ರಿನಾಥ್ ಆಡಲಿದ್ದಾರೆ.
Shikhar Dhawan meets actor Sudeep : Team India Gabbar met Kiccha in Bangalore