ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border – Gavaskar test series) ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಎದುರಿಸಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ವಿರುದ್ಧ ಕರ್ನಾಟಕದವರೇ ಆದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ (Venkatesh Prasad) ಟ್ವಿಟರ್ ಮೂಲಕ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ರಾಹುಲ್ ಅವರನ್ನು ಯಾವ ಮಾನದಂಡದ ಮೇಲೆ ತಂಡದಲ್ಲಿ ಮುಂದುವರಿಸಲಾಗಿದೆ ಎಂದು ವೆಂಕಟೇಶ್ ಪ್ರಸಾದ್ ಪ್ರಶ್ನಿಸಿದ್ದಾರೆ. ರಾಹುಲ್ ಅವರ ಆಯ್ಕೆ ಪ್ರದರ್ಶನದ ಆಧಾರದ ಮೇಲೆ ನಡೆದಿಲ್ಲ, ಬದಲಾಗಿ ಇದು ಸ್ವಜನ ಪಕ್ಷಪಾತ ಎಂದು ವೆಂಕಟೇಶ್ ಪ್ರಸಾದ್ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದರು.
ಆಸೀಸ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 20, 1 ಹಾಗೂ 17 ರನ್ ಗಳಿಸಿರುವ ರಾಹುಲ್ ಅವರನ್ನು ವೈಫಲ್ಯದ ಮಧ್ಯೆಯೂ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3 ಹಾಗೂ 4ನೇ ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾದಲ್ಲಿ ಮುನ್ನಡೆಸಲಾಗಿದೆ. ವಿದೇಶಿ ನೆಲಗಳಲ್ಲಿ ರಾಹುಲ್ ಅವರ ಸಾಧನೆ ಉತ್ತಮವಾಗಿದ್ದು ಈ ಮಾನದಂಡದ ಮೇಲೆ ರಾಹುಲ್ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಹೇಳಿದ್ದರು. ಇದಕ್ಕೆ ಟ್ವಿಟರ್’ನಲ್ಲಿ ತಿರುಗೇಟು ನೀಡಿರುವ ವೆಂಕಟೇಶ್ ಪ್ರಸಾದ್, ವಿದೇಶಿ ನೆಲಗಳಲ್ಲಿ ರಾಹುಲ್ ಅವರ ಟೆಸ್ಟ್ ಸಾಧನೆಯನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡಿಗ ಕೆ.ಎಲ್ ರಾಹುಲ್ ವಿರುದ್ಧ ಕರ್ನಾಟಕದವರೇ ಆದ ವೆಂಕಟೇಶ್ ಪ್ರಸಾದ್ ಈ ರೀತಿ ಟೀಕೆ ಮಾಡುತ್ತಿರುವುದರ ಹಿಂದಿನ ಅಸಲಿ ರಹಸ್ಯವನ್ನು ಕ್ರಿಕೆಟ್ ಪ್ರಿಯರೊಬ್ಬರು ಟ್ವಿಟರ್ ಮೂಲಕ ಬಿಚ್ಚಿಟ್ಟಿದ್ದಾರೆ.
‘’2021ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್’ಗೆ ಎಂಟ್ರಿ ಕೊಟ್ಟಾಗ ವೆಂಕಟೇಶ್ ಪ್ರಸಾದ್ ಲಕ್ನೋ ತಂಡದ ಬೌಲಿಂಗ್ ಕೋಚ್ ಆಗಲು ಬಯಸಿದ್ದರು. ತಮ್ಮನ್ನು ಬೌಲಿಂಗ್ ಕೋಚ್ ಆಗಲು ಸಹಾಯ ಮಾಡುವಂತೆ ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್ ಬಳಿ ವೆಂಕಟೇಶ್ ಪ್ರಸಾದ್ ಮನವಿ ಮಾಡಿಕೊಂಡಿದ್ದರು. ಅದಕ್ಕೆ ರಾಹುಲ್ ‘ನನ್ನ ಕೈಯಲ್ಲಿ ಏನೂ ಇಲ್ಲ ಸರ್’ ಎಂದಿದ್ದರು. ಇದರ ನಂತರ ರಾಹುಲ್ ಬಗ್ಗೆ ವೆಂಕಟೇಶ್ ಪ್ರಸಾದ್ ಅಸಮಾಧಾನಗೊಂಡಿದ್ದರು. ಈ ಅಸಮಾಧಾನವೀಗ ವೈಯಕ್ತಿಕ ದ್ವೇಷವಾಗಿ ಬದಲಾಗಿದ್ದು, ಆ ದ್ವೇಷವನ್ನು ಈಗ ಸಾಲು ಸಾಲು ಟ್ವೀಟ್’ಗಳ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ. ಇದು ವಾಸ್ತವ’’ ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.