ದೇಶದಾದ್ಯಂತ ನೀರಜ್ ಚೋಫ್ರಾ ಗೆಲುವನ್ನು ಸಂಭ್ರಮಿಸಲಾಗುತ್ತಿದೆ. ಸಂಘ-ಸಂಸ್ಥೆಗಳು, ಸರ್ಕಾರಗಳು ನೀರಜ್ ಗೆ ಬಹುಮಾನ ಘೋಷಿಸುತ್ತಿವೆ. ಈ ಮಧ್ಯೆ ಗುಜರಾತ್ ಪೆಟ್ರೋಲ್ ಬಂಕ್ ಮಾಲಿಕರೊಬ್ಬರು ನೀರಜ್ ಹೆಸರಿನವರಿಗೆಲ್ಲ ಉಚಿತವಾಗಿ ಪೆಟ್ರೋಲ್ ನೀಡುವುದಾಗಿ ಘೋಷಿಸಿ ಗಮನ ಸೆಳೆದಿದ್ದಾರೆ.

ಗುಜರಾತ್ ನ ಭರೂಚ್ ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಎರಡು ದಿನಗಳ ಕಾಲ ನೀರಜ್ ಹೆಸರಿನವರಿಗೆ 502 ರೂಪಾಯಿವರೆಗಿನ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.

ಕ್ರೀಡಾಅಭಿಮಾನಿಯಾಗಿರುವ ಪೆಟ್ರೋಲ್ ಬಂಕ್ ಮಾಲೀಕ ಅಯೂಬ್ ಪಠಾಣ್ ಇಂತಹೊಂದು ದುಬಾರಿ ನಿರ್ಣಯಕ್ಕೆ ಬಂದಿದ್ದಾರೆ. ನೀರಜ್ ಚೋಪ್ರಾ ಸಾಧನೆ ಗೌರವಿಸಲು ಇದು ನಮ್ಮ ಯೋಜನೆಯಾಗಿದ್ದು, ಎರಡು ದಿನಗಳ ಕಾಲ ನೀರಜ್ ಹೆಸರಿನವರು ತಮ್ಮ ಯಾವುದಾದರೂ ಒಂದು ಐಡಿ ಕಾರ್ಡ್ ತೋರಿಸಿ ಉಚಿತ ಪೆಟ್ರೋಲ್ ಪಡೆಯಬಹುದಾಗಿದೆ.

ನೀರಜ್ ಚೋಫ್ರಾ ಪದಕ ಗೆದ್ದಾಗಿನಿಂದ ಅವರಿಗೆ ಗೌರವಧನಸಹಾಯ ಸುರಿಮಳೆಯೇ ಘೋಷಣೆಯಾಗುತ್ತಿದ್ದು, ಈಗಾಗಲೇ ಇಂಡಿಗೋ ಒಂದು ವರ್ಷಗಳ ಕಾಲ ಅನ್ ಲಿಮಿಟೆಡ್ ಫ್ರೀ ಪ್ರಯಾಣ ಅವಕಾಶ ನೀಡಿದೆ. ಮಹೀಂದ್ರಾ ಕಂಪನಿ ಕಾರು ಕೊಡುಗೆ ನೀಡಿದೆ.
ಆದರೆ ಈ ಪೆಟ್ರೋಲ್ ಬಂಕ್ ಮಾಲಿಕ ಮಾತ್ರ ನೀರಜ್ ಹೆಸರಿನವರಿಗೆಲ್ಲಾ ಆಫರ್ ಘೋಷಿಸುವ ಮೂಲಕ ಕ್ರೀಡಾಭಿಮಾನ ಮೆರೆದಿದ್ದು, ಜನರು ಪೆಟ್ರೋಲ್ ಗಾಗಿ ಮುಗಿಬಿದ್ದಿದ್ದಾರೆ.