Alpesh Ramjani : ಜೂನ್ 2ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್’ನಲ್ಲಿ (ICC T20 World Cup 2024) ಈ ಬಾರಿ ಒಟ್ಟು 20 ತಂಡಗಳು ಆಡಲಿವೆ. ಈ ಪೈಕಿ ಉಗಾಂಡ ತಂಡವೂ (Uganda Cricket Team) ಒಂದು. ಐಸಿಸಿ ಟಿ20 ವಿಶ್ವಕಪ್’ನಲ್ಲಿ ಉಗಾಂಡ ತಂಡದ ಇದೇ ಮೊದಲ ಬಾರಿ ಆಡುತ್ತಿದೆ. ವಿಶೇಷ ಏನೆಂದರೆ ವಿಶ್ವಕಪ್’ನಲ್ಲಿ ಆಡುತ್ತಿರುವ ಉಗಾಂಡ ತಂಡದಲ್ಲಿ ನಮ್ಮ ಭಾರತೀಯ ಆಟಗಾರನೊಬ್ಬನಿದ್ದಾನೆ.

ಆತ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಶಿವಂ ದುಬೆ ಜೊತೆ ಆಡಿದ್ದ ಆಟಗಾರ. ಆತನ ಹೆಸರು ಅಲ್ಪೇಶ್ ರವಿಲಾಲ್ ರಾಮ್’ಜಾನಿ (Alpesh Ramjani). 29 ವರ್ಷದ ಅಲ್ಪೇಶ್ ರಾಮ್’ಜಾನಿ ಮುಂಬೈ ಮೂಲದ ಕ್ರಿಕೆಟಿಗ. ಮುಂಬೈ ಅಂಡರ್-16 ತಂಡದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ಜೊತೆ ಅಲ್ಪೇಶ್ ಆಡಿದ್ದಾನೆ. 2018ರ ಮುಂಬೈ ಟಿ20 ಲೀಗ್ ಟೂರ್ನಿಯಲ್ಲಿ ಅಲ್ಪೇಶ್ ರಾಮ್’ಜಾನಿ ಶಿವಾಜಿ ಪಾರ್ಕ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದ.
ಇದನ್ನೂ ಓದಿ : Kohli Vs Rayudu: ವಿರಾಟ್ ಕೊಹ್ಲಿ ಮೇಲೆ ಅಂಬಾಟಿ ರಾಯುಡುಗೇಕೆ ಈ ಪರಿ ಕೋಪ ? ಇಲ್ಲಿದೆ ಅಸಲಿ ಸತ್ಯ !
ಮುಂಬೈನ ಕಂಡಿವಲಿಯ ಸಿದ್ಧಾರ್ಥ್ ನಗರದವನಾಗಿರುವ ಅಲ್ಪೇಶ್ ರಾಮ್’ಜಾನಿ ಮುಂಬೈ ಅಂಡರ್-19 ತಂಡವನ್ನೂ ಪ್ರತಿನಿಧಿಸಿದ್ದಾನೆ. ಭಾರತ ಪರ ಆಡುವ ಕನಸು ಕಂಡಿದ್ದ ಅಲ್ಪೇಶ್, ಆ ಕನಸು ನನಸಾಗದೇ ಇದ್ದಾಗ ಕ್ರಿಕೆಟ್ ಅವಕಾಶ ಹುಡುಕಿಕೊಂಡು ಉಗಾಂಡಗೆ ಹೋಗಿದ್ದ.
2022ರಲ್ಲಿ ಉಗಾಂಡ ಪರ ಚೊಚ್ಚಲ ಅಂತರಾಷ್ಟ್ರೀಯ ಟಿ20 ಪಂದ್ಯವಾಡಿದ್ದ ಅಲ್ಪೇಶ್ ರಾಮ್’ಜಾನಿ ಇಲ್ಲಿವರೆಗೆ ಒಟ್ಟು 39 ಪಂದ್ಯಗಳಲ್ಲಿ ಉಗಾಂಡ ತಂಡವನ್ನು ಪ್ರತಿನಿಧಿಸಿದ್ದು, 70 ವಿಕೆಟ್ ಪಡೆದಿದ್ದಾನೆ. ಎಡಗೈ ಸ್ಪಿನ್ನರ್ ಆಗಿರುವ ಅಲ್ಪೇಶ್, ಅಂತರಾಷ್ಟ್ರೀಯ ಟಿ20ಯಲ್ಲಿ 569 ರನ್ ಕಲೆ ಹಾಕಿದ್ದಾನೆ. ಐಸಿಸಿ ಟಿ20 ವಿಶ್ವಕಪ್’ಗೆ ಇದೇ ಮೊದಲ ಬಾರಿ ಅರ್ಹತೆ ಪಡೆದಿರುವ ಉಗಾಂಡ ತಂಡ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಪಪುವಾ ನ್ಯೂ ಗಿನಿ ಮತ್ತು ವೆಸ್ಟ್ ಇಂಡೀಸ್ ತಂಡಗಳ ಜೊತೆ ಗ್ರೂಪ್ ’ಸಿ ’ನಲ್ಲಿ ಸ್ಥಾನ ಪಡೆದಿದೆ.

ಅಲ್ಪೇಶ್ ರಾಮ್’ಜಾನಿ ಜೊತೆ ಭಾರತ ಮೂಲದ ಆಟಗಾರರಾದ ರೊನಾಕ್ ಪಟೇಲ್ ಮತ್ತು ದಿನೇಶ್ ನಕ್ರಾನಿ ಕೂಡ ಉಗಾಂಡ ತಂಡದಲ್ಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ, ಉಗಾಂಡ ತಂಡದ ಹೆಡ್ ಕೋಚ್ ಆಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜೂನ್ 2ರಂದು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 29ರಂದು ನಡೆಯಲಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.
ICC T20 World Cup 2024 Uganda Cricket Team Playing Mumbai Base Player Alpesh Ramjani played with Shreyas Iyer and Shivam dube