ಟೋಕಿಯೋ : ಭಾರತೀಯ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಬೆಲ್ಜಿಯಂ ವಿರುದ್ದದ ಪಂದ್ಯದಲ್ಲಿ 5-2ರ ಅಂತರದಲ್ಲಿ ಸೋಲನ್ನು ಕಂಡಿರುವ ಟೀಂ ಇಂಡಿಯಾ ಇದೀಗ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಬೇಕಾಗಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದ್ಬುತ ಆಟದ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ ಹಾಕಿ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಆರಂಭಿಕ ಹಂತದಲ್ಲಿ ಭಾರತ ತಂಡ ಮೇಲು ಗೈ ಸಾಧಿಸಿತ್ತು. ಭಾರತದ ಹರ್ಮನ್ ಪ್ರೀತ್ ಹಾಗೂ ಮಂದೀಪ್ ಸಿಂಗ್ ಗೋಲ್ ಬಾರಿಸುವ ಮೂಲಕ ಭಾರತಕ್ಕೆ 2-1ರ ಮುನ್ನಡೆಯನ್ನು ತಂದುಕೊಟ್ರು.
ಆದರೆ ಪೆನಾಲ್ಟಿ ಕಾರ್ನರ್ ಲಾಭ ಪಡೆದ ಬೆಲ್ಜಿಯಂ ಪರ ಅಲೆಕ್ಯಾಂಡರ್ ಹ್ಯಾಂಡ್ರಿಕ್ಸ್ ಭರ್ಜರಿ ಗೋಲು ಬಾರಿಸುವ ಮೂಲಕ ಅಂತರವನ್ನು 2-2ರಿಂದ ಸಮಬಲ ಮಾಡಿಕೊಂಡಿ ದ್ದಾರೆ. ಆದರೆ ಭಾರತಕ್ಕೆ ಮೂರನೇ ಕ್ವಾರ್ಟರ್‌ಮಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಸಿಕ್ಕಿದ್ರೂ ಕೂಡ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಯ್ತು, ನಂತರದಲ್ಲಿ ಬೆಲ್ಜಿಯಂ ಸತತ ಗೋಲು ಗಳ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿದೆ.
ಭಾರತ ಹಾಕಿ ತಂಡ ದಾಖಲೆಯ ಗೆಲುವನ್ನು ಕಂಡು ಸೆಮಿ ಫೈನಲ್‌ಗೆ ಏರಿತ್ತು. ಅಲ್ಲದೇ ಈ ಬಾರಿ ಚಿನ್ನದ ಪದಕ ಗೆಲುವಿನ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದ್ರೆ ಬೆಲ್ಜಿಯಂ ತಂಡ ಭಾರತಕ್ಕೆ ಸೋಲಿನ ರುಚಿ ತೋರಿಸಿದೆ. 2012ರ ಲಂಡನ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್ ನಲ್ಲಿಯೂ ಭಾರತ ಬೆಲ್ಜಿಯಂ ವಿರುದ್ದವೇ ಸೋಲನ್ನು ಅನುಭವಿಸಿತ್ತು.