School Reopen : ಶಾಲಾರಂಭಕ್ಕೆ ದುಡುಕಿನ ನಿರ್ಧಾರ ಬೇಡ : ಡಾ.ಮಂಜುನಾಥ್‌ ಸಲಹೆ

ಬೆಂಗಳೂರು : ಕೇರಳ ಮತ್ತು ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಅಲ್ಲದೇ ಎರಡು ವಾರಗಳ ಬಳಿಕ ಕರ್ನಾಟಕದಲ್ಲಿಯೂ ಸೋಂಕು ಏರಿಕೆ ಕಂಡಿದೆ. ಹೀಗಾಗಿ ಕರ್ನಾಟಕದಲ್ಲಿ ಶಾಲೆಗಳನ್ನು ಆರಂಭಿಸಲು ದುಡುಕುವುದು ಬೇಡ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್‌ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಶಾಲೆಗಳನ್ನು ಆರಂಭಿಸುವುದು ಬಹಳ ಸೂಕ್ಷ್ಮ ವಿಚಾರವಾಗಿದೆ. ಈ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಯಬೇಕಾಗಿದೆ. ಇನ್ನೇರಡು ವಾರಗಳ ಕಾಲ ಕಾದು ನೋಡಿ ಶಾಲಾರಂಭ ಕ್ಕೆ ಯೋಚಿಸಿದರೆ ಒಳ್ಳೆಯದು. ಆದರೆ ಆತುರವಾಗಿ ದುಡುಕಿನ ನಿರ್ಧಾರ ಒಳ್ಳೆಯದಲ್ಲ ಎಂದು ಅವರು ತಿಳಿಸಿದ್ದಾರೆ.

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಈ ಹಿಂದೆ ನೆರೆಯ ರಾಜ್ಯಗಳಲ್ಲಿ ಸೋಂಕು ಹೆಚ್ಚಳವಾದಾಗ ಕರ್ನಾಟಕದಲ್ಲಿ ಎರಡು ವಾರಗಳ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಹೀಗಾಗಿ ಈ ಬಾರಿಯೂ ಪುನರಾವರ್ತನೆಯಾಗುವ ಸಾಧ್ಯತೆಯಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಾದು ನೋಡುವುದು ಉತ್ತಮ ಎಂದಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ರಾಜ್ಯ ಸರಕಾರ ಶಾಲಾರಂಭದ ಕುರಿತು ಚಿಂತನೆ ನಡೆಸಿಲ್ಲ. ಆದರೆ ಖಾಸಗಿ ಶಾಲೆಗಳ ಒಕ್ಕೂಟ ಸರಕಾರಕ್ಕೆ ಸಡ್ಡು ಹೊಡೆದು ಶಾಲಾರಂಭ ಮಾಡಲು ಮುಂದಾಗಿತ್ತು. ಸದ್ಯದಲ್ಲಿ ಸಭೆ ಕರೆದು ಚರ್ಚೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದ ಬೆನ್ನಲ್ಲೇ ಖಾಸಗಿ ಶಾಲೆಗಳ ಒಕ್ಕೂಟ ತಮ್ಮ ನಿರ್ಧಾರದಿಂದ ಹಿಂದೆ ಸರಿದಿತ್ತು. ಇದೀಗ ಡಾ. ಮಂಜುನಾಥ್‌ ಅವರು ಸರಕಾರಕ್ಕೆ ಸಲಹೆ ನೀಡಿದ್ದರು, ಅದ್ಯಾವ ನಿರ್ಧಾರವನ್ನು ಕೈಗೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

Comments are closed.