Indian Cricket Team Head Coach next : ಬೆಂಗಳೂರು: ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಆದರೆ ಮುಂದಿನ ತಿಂಗಳು ಭಾರತ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುವುದು ಗೌತಮ್ ಗಂಭೀರ್ (Gowtham Gambhir) ಅಲ್ಲ, ಬದಲಾಗಿ ಮತ್ತೊಬ್ಬ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Lakshman) .

ಹೌದು. ಮುಂದಿನ ತಿಂಗಳು ಜಿಂಬಾಬ್ವೆ ಪ್ರವಾಸ (India tour of Zimbabwe 2024) ಕೈಗೊಳ್ಳಲಿರುವ ಭಾರತ ತಂಡದ ಕೋಚ್ ಜವಾಬ್ದಾರಿಯನ್ನು ವಿವಿಎಸ್ ಲಕ್ಷ್ಮಣ್ ವಹಿಸಿಕೊಳ್ಳಲಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡ ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಜಿಂಬಾಬ್ವೆ ಪ್ರವಾಸದ ನಂತರ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup 2024) ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದೆ. ಹೀಗಾಗಿ ಟಿ20 ವಿಶ್ವಕಪ್’ನಲ್ಲಿ ಆಡುತ್ತಿರುವ ಬಹುತೇಕ ಆಟಗಾರರಿಗೆ ವಿಶ್ರಾಂತಿ ನೀಡಿ, ಹೊಸಬರಿಗೆ ಅವಕಾಶ ಕೊಡಲು ಬಿಸಿಸಿಐ ನಿರ್ಧರಿಸಿದೆ. ಟಿ20 ವಿಶ್ವಕಪ್’ನೊಂದಿಗೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ಅವರ ಜೊತೆಗಿರುವ ಸಹಾಯಕ ಸಿಬ್ಬಂದಿಯ ಕಾರ್ಯಾವಧಿಯೂ ಅಂತ್ಯಗೊಳ್ಳಲಿದೆ. ಹೀಗಾಗಿ ಜಿಂಬಾಬ್ವೆ ಪ್ರವಾಸದಲ್ಲಿ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ : Virat Kohli Vs Smriti Mandhana : ವೈರಲ್ ಆಗುತ್ತಿದೆ ವಿರಾಟ್ ಕೊಹ್ಲಿ Vs ಸ್ಮೃತಿ ಮಂಧನ ಬೌಲಿಂಗ್ ಆ್ಯಕ್ಷನ್
ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಯುವ ಟೀಮ್ ಇಂಡಿಯಾವನ್ನು ಜಿಂಬಾಬ್ವೆಗೆ ಕಳುಹಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಟಿ20 ವಿಶ್ವಕಪ್’ನಲ್ಲಿ ಆಡುತ್ತಿರುವ ಪ್ರಮುಖ ಆಟಗಾರರು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಐಪಿಎಲ್’ನಲ್ಲಿ ಮಿಂಚಿರುವ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಮಯಾಂಕ್ ಯಾದವ್ ಅವರಂತಹ ಯುವ ಪ್ರತಿಭಾವಂತರಿಗೆ ಭಾರತ ಪರ ಆಡುವ ಅವಕಾಶ ಸಿಗಲಿದೆ.

ಭಾರತ Vs ಜಿಂಬಾಬ್ವೆ ಟಿ20 ಸರಣಿಯ ವೇಳಾಪಟ್ಟಿ (India tour of Zimbabwe 2024)
ಜುಲೈ 06: ಮೊದಲ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 07: ಎರಡನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 10: ಮೂರನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 13: ನಾಲ್ಕನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಜುಲೈ 14: ಐದನೇ ಟಿ20 ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಇದನ್ನೂ ಓದಿ : Exclusive: ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಕಹಿ ಸುದ್ದಿ, ರಾಜ್ಯ ತಂಡ ತೊರೆದ ಮತ್ತೊಬ್ಬ ಕ್ರಿಕೆಟಿಗ
Indian Cricket Team Head Coach next VVS Laxman, not Gautam Gambhir