ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಿಯರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಅರ್ಧಕ್ಕೆ ನಿಂತಿದ್ದ ಐಪಿಎಲ್ ಪಂದ್ಯಾವಳಿಗಳನ್ನು ಸಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲು ಬಿಸಿಸಿಐ ಸಿದ್ದತೆ ಮಾಡಿಕೊಂಡಿದ್ದು, ದಿನಾಂಕ ಬಹುತೇಕ ಫಿಕ್ಸ್ ಆಗಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಾವಳಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಕ್ರಿಕೆಟ್ ಪ್ರಿಯರಿಗೆ ನಿರಾಸೆಯಾಗಿತ್ತು. ಮತ್ತೆ ಐಪಿಎಲ್ ಪಂದ್ಯಗಳು ನಡೆಯುತ್ತೋ ಇಲ್ಲವೋ ಅನ್ನೋ ಗೊಂದಲದಲ್ಲಿದ್ದಾಗಲೇ ಬಿಸಿಸಿಐ ಯುಎಇಯಲ್ಲಿ ಉಳಿದ ಪಂದ್ಯಾವಳಿಗಳನ್ನು ಆಯೋಜಿಸುವುದಾಗಿ ಘೋಷಣೆಯನ್ನು ಮಾಡಿತ್ತು. ಅಲ್ಲದೇ ಬಿಸಿಸಿಐ ಐಪಿಎಲ್ ಪಂದ್ಯಾವಳಿಗಾಗಿ ಸಿದ್ದತೆಗಳನ್ನು ಮಾಡಿಕೊಂಡಿತ್ತಾದರೂ ಇದುವರೆಗೂ ದಿನಾಂಕ ಪ್ರಕಟಿಸಿರಲಿಲ್ಲ. ಆದ್ರೀಗ ಸಪ್ಟೆಂಬರ್ 19ರಂದು ಐಪಿಎಲ್ ಟೂರ್ನಿ ಆರಂಭವಾಗುವುದು ಬಹುತೇಕ ಫಿಕ್ಸ್ ಆಗಿದೆ.

ಬಿಸಿಸಿಐ ಮೂಲಗಳ ಪ್ರಕಾರ ಸಪ್ಟೆಂಬರ್ 19ರಂದು ಪಂದ್ಯಾವಳಿಯ ಉಳಿದ ಪಂದ್ಯಗಳು ಆರಂಭಗೊಳ್ಳಲಿದ್ದು ಅಕ್ಟೋಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ. ಸುಮಾರು 25 ದಿನಗಳ ಕಾಲ ಪಂದ್ಯಾವಳಿಯನ್ನು ನಡೆಸಲು ಇಸಿಬಿ (ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ) ಜೊತೆಗೆ ಮಾತುಕತೆಯನ್ನು ಮುಗಿಸಿದೆ. ಬಹುತೇಕ ಅಗಸ್ಟ್ ತಿಂಗಳಿನಲ್ಲಿಯೇ ಫ್ರಾಂಚೈಸಿಗಳು ದುಬೈಗೆ ಹಾರಲು ಸಿದ್ದತೆ ಮಾಡಿಕೊಂಡಿದೆ. ಕೊರೊನಾ ನಿಯಮಗಳ ಹಿನ್ನೆಲೆಯಲ್ಲಿ 14 ದಿನಗಲ ಕಾಲ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲನೆ ಮಾಡುವುದರ ಜೊತೆಗೆ ಅಭ್ಯಾಸ ಪಂದ್ಯಗಳನ್ನು ಆಡಬೇಕಾಗಿದೆ.

ಐಪಿಎಲ್ ಅರ್ಧಕ್ಕೆ ಸ್ಥಗಿತಗೊಳ್ಳುವ ಮೊದಲು ಸುಮಾರು 29 ಪಂದ್ಯಗಳು ನಡೆದಿದ್ದು, ವೇಳಾಪಟ್ಟಿಯಂತೆ ಇನ್ನೂ 31 ಪಂದ್ಯಗಳು ಬಾಕಿ ಉಳಿದಿದೆ. ಐಪಿಎಲ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರು ಈಗಾಗಲೇ ತಾಯ್ನಾಡಿಗೆ ಮರಳಿದ್ದಾರೆ. ಜೊತೆಗೆ ಹಲವು ಕ್ರಿಕೆಟ್ ಮಂಡಳಿಗಳು ಅಂತರಾಷ್ಟ್ರೀಯ ಪಂದ್ಯಾವಳಿಗಳ ವೇಳಾಪಟ್ಟಿಯೂ ಪ್ರಕಟವಾಗಿದೆ. ಹೀಗಾಗಿ ವಿದೇಶಿ ಆಟಗಾರರು ಐಪಿಎಲ್ ನಲ್ಲಿ ಭಾಗಿಯಾಗುತ್ತಾರಾ ಅನ್ನೋ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಪಂದ್ಯಾವಳಿ ಯುಎಇನಲ್ಲಿ ನಡೆಯಲಿರೋದ್ರಿಂದಾಗಿ ಬಹುತೇಕ ಆಟಗಾರರು ಉಳಿದ ಪಂದ್ಯಾವಳಿಗಳನ್ನು ಆಡುವ ಸಾಧ್ಯತೆಯಿದೆ.