ಬೆಂಗಳೂರು: ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah Best Friend) ಸದ್ಯ ಬೆಂಗಳೂರಿನಲ್ಲಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ (National Cricket Academy – NCA Rehabilitation Camp) ಭಾಗಿಯಾಗಿದ್ದಾರೆ.
ಗಾರ್ಡನ್ ಸಿಟಿಗೆ ಬಂದಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಕರ್ನಾಟಕ ಸ್ಟಾರ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ (Shreyas Gopal) ಭೇಟಿಯಾಗಿದ್ದಾರೆ. ಪತ್ನಿ ನಿಖಿತಾ ಶಿವ್ ಜೊತೆ ಬುಮ್ರಾ ಅವರನ್ನು ಶುಕ್ರವಾರ ರಾತ್ರಿ ರೆಸ್ಟೋರೆಂಟ್ ಒಂದರಲ್ಲಿ ಭೇಟಿ ಮಾಡಿರುವ ಶ್ರೇಯಸ್ ಗೋಪಾಲ್, ಟೀಮ್ ಇಂಡಿಯಾ ವೇಗಿ ಜೊತೆ ರಾತ್ರಿ ಡಿನ್ನರ್ ಪಾರ್ಟಿ ನಡೆಸಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಶ್ರೇಯಸ್ ಗೋಪಾಲ್ ಕಳೆದ 10 ವರ್ಷಗಳಿಂದ ಸ್ನೇಹಿತರು. ಇವರ ಸ್ನೇಹ ಶುರುವಾಗಿದ್ದು 2012ರಲ್ಲಿ. ಆಗ ಇಬ್ಬರೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಂಡರ್-19 ಕ್ಯಾಂಪ್’ನಲ್ಲಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಆತ್ಮೀಯ ಸ್ನೇಹವಿದೆ.
ಶ್ರೇಯಸ್ ಗೋಪಾಲ್ 2014ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದರು. ಆಗ ಜಸ್ಪ್ರೀತ್ ಬುಮ್ರಾ ಜೊತೆಯಾಗಿ ಆಡುವ ಅವಕಾಶ ಸಿಕ್ಕಿತ್ತು. ನಂತರದ ದಿನಗಳಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಆಯ್ಕೆಯಾಗಿ ಈಗ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬೌಲರ್’ಗಳಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ. ಆದರೆ ಶ್ರೇಯಸ್ ಗೋಪಾಲ್ ಅವರ ಕ್ರಿಕೆಟ್ ವೃತ್ತಿಜೀವನ ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ. ದೇಶೀಯ ಕ್ರಿಕೆಟ್’ನಲ್ಲಿ ಮಿಂಚುತ್ತಿದ್ದರೂ ಭಾರತ ಪರ ಆಡುವ ಅವಕಾಶ ಇನ್ನೂ ಸಿಕ್ಕಿಲ್ಲ. 2013ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ 28 ವರ್ಷದ ಶ್ರೇಯಸ್ ಗೋಪಾಲ್, ಕರ್ನಾಟಕ ಪರ 68 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು 2,777 ರನ್ ಹಾಗೂ 203 ವಿಕೆಟ್ ಪಡೆದಿದ್ದಾರೆ.
ಅತ್ಯುತ್ತಮ ಲೆಗ್ ಸ್ಪಿನ್ ಆಲ್ರೌಂಡರ್ ಆಗಿರುವ ಶ್ರೇಯಸ್ ಗೋಪಾಲ್ ಕಳೆದ 9 ವರ್ಷಗಳಲ್ಲಿ ಪ್ರಮುಖವಾಗಿ ಭಾರತ ಅಂಡರ್-19, ಕರ್ನಾಟಕ, ಭಾರತ ‘ಎ’, ಭಾರತ ‘ಬಿ’, ಇಂಡಿಯಾ ಗ್ರೀನ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್’ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದಾರೆ.
ಇದನ್ನೂ ಓದಿ : Sanju Samson : ಕ್ಯಾನ್ಸರ್ ಪೀಡಿತ ಹುಡುಗನಿಗೆ ಧೈರ್ಯ ತುಂಬಿದ ಸ್ಯಾಮ್ಸನ್.. ಸಂಜು ನಡೆಗೆ ಕ್ರಿಕೆಟ್ ಫ್ಯಾನ್ಸ್ ಫಿದಾ
ಇದನ್ನೂ ಓದಿ : Mohammad Shami : ಕೆಂಪು ಸುಂದರಿಯ ಜೊತೆ ಲವ್ವಲ್ಲಿ ಬಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ
Jasprit Bumrah Meet His Karnataka Best Friend