ಬೆಂಗಳೂರು: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ (India head coach) ಬರಲಿದ್ದಾರೆ. ನೂತನ ಕೋಚ್ ಆಯ್ಕೆಗೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಈ ಬಾರಿ ಟೀಮ್ ಇಂಡಿಯಾಗೆ ವಿದೇಶಿ ಕೋಚ್ ಬರ್ತಾರಾ ಅಥವಾ ಸ್ವದೇಶಿ ಕೋಚ್ ಇರ್ತಾರಾ ಎಂಬುದು ಕುತೂಹಲ ಕೆರಳಿಸಿದೆ. ಈ ಮಧ್ಯೆ ಭಾರತ ತಂಡದ ಕೋಚ್ ಹುದ್ದೆಯನ್ನು ಕುತೂಹಲದಿಂದ ನೋಡುತ್ತಿರುವುದಾಗಿ ಆಸ್ಟ್ರೇಲಿಯಾದ ಟೆಸ್ಟ್ ದಿಗ್ಗಜ, ಲಕ್ನೋ ಸೂಪರ್ ಜಯಂಟ್ಸ್ ತಂಡದ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ (Justin Langer) ಹೇಳಿದ್ದಾರೆ.
“ಯಾವುದೇ ಅಂತರಾಷ್ಟ್ರೀಯ ತಂಡದ ಕೋಚ್ ಆಗುವುದು ಅತ್ಯಂತ ಗೌರವದ ವಿಚಾರ. ಅಲ್ಲಿ ಸಾಕಷ್ಟು ಒತ್ತಡವಿರುತ್ತದೆ. ಆದರೆ ಭಾರತ ತಂಡದ ಕೋಚ್ ಆಗುವುದು ಅಸಾಮಾನ್ಯ ಜವಾಬ್ದಾರಿಯಾಗಲಿದೆ. ಭಾರತದಲ್ಲಿರುವ ಯುವ ಪ್ರತಿಭೆಗಳನ್ನು ನೋಡಿದಾಗ, ಟೀಮ್ ಇಂಡಿಯಾಕೋಚ್ ಹುದ್ದೆ ಆಕರ್ಷಣೀಯವೆನಿಸಲಿದೆ” ಎಂದು ಜಸ್ತಿನ್ ಲ್ಯಾಂಗರ್ ಅಭಿಪ್ರಾಯ ಪಟ್ಟಿದ್ದಾರೆ.

2015ರಲ್ಲಿ ಡಂಕನ್ ಫ್ಲೆಚರ್ ಕೋಚ್ ಹುದ್ದೆ ತೊರೆದ ನಂತರ ಟೀಮ್ ಇಂಡಿಯಾಗೆ ವಿದೇಶಿ ಕೋಚ್ ನೇಮಕವಾಗಿತ್ತು. 2011ರಲ್ಲಿ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅವರ ಗರಡಿಯಲ್ಲೇ ಭಾರತ ತಂಡದ ಏಕದಿನ ವಿಶ್ವಕಪ್ ಗೆದ್ದಿತ್ತು.
2021ರಲ್ಲಿ ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದ “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid), ‘ಟಿ20 ವಿಶ್ವಕಪ್ ಟೂರ್ನಿಯ ನಂತರ ಟೀಮ್ ಇಂಡಿಯಾ ಕೋಚ್ ಹುದ್ದೆ ತೊರೆಯಲಿದ್ದಾರೆ.
ದ್ರಾವಿಡ್ ಕೇವಲ 2 ವರ್ಷಗಳ ಅವಧಿಗಷ್ಟೇ ಟೀಮ್ ಇಂಡಿಯಾ ಕೋಚ್ ಆಗಿ ನೇಮಗೊಂಡಿದ್ದರು. ಹೀಗಾಗಿ ಅವರ ಅವಧಿ ಕಳೆದ ವರ್ಷವೇ ಅಂತ್ಯಗೊಂಡಿತ್ತು. ಆದರೆ ಐಸಿಸಿ ಟಿ20 ವಿಶ್ವಕಪ್’ವರೆಗೆ ಭಾರತ ತಂಡದ ಕೋಚ್ ಆಗಿ ಮುಂದುವರಿಯುವಂತೆ ದ್ರಾವಿಡ್ ಅವರಲ್ಲಿ ಬಿಸಿಸಿಐ ಮನವಿ ಮಾಡಿತ್ತು.
ಇದನ್ನೂ ಓದಿ: ಆರ್’ಸಿಬಿಗೆ ಬಿಗ್ ಶಾಕ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ರಣಬೇಟೆಗಾರನೇ ಇಲ್ಲ!

ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಮುಗಿದ ಬೆನ್ನಲ್ಲೇ ದ್ರಾವಿಡ್ ಭಾರತ ತಂಡದ ಕೋಚ್ ಹುದ್ದೆ ತೊರೆಯಲಿದ್ದಾರೆ. ದ್ರಾವಿಡ್ ಅವರು ಕೋಚ್ ಆಗಿ ಪುನರಾಯ್ಕೆ ಬಯಸುವುದಾದರೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಆದರೆ ಮತ್ತೆ ಕೋಚ್ ಆಗಲು ದ್ರಾವಿಡ್ ಅವರಿಗೆ ಮನಸ್ಸಿಲ್ಲದ ಕಾರಣ ಅವರು ಅರ್ಜಿ ಸಲ್ಲಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ತಂಡ ನಿರಂತರ 11 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್’ನಲ್ಲಿ ನಿರೀಕ್ಷೆಗಳು ಮತ್ತೆ ಗರಿಗೆದರಿದ್ದು, ದ್ರಾವಿಡ್ ತಮ್ಮ ಕೊನೆಯ ಅಸೈನ್ಮೆಂಟ್’ನಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ.