ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul ) ಅವರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಮತ್ತೊಮ್ಮೆ ಅನ್ಯಾಯವಾಗಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ರಾಹುಲ್ ಅವರನ್ನು ಆಯ್ಕೆ ಮಾಡದೆ ಅನ್ಯಾಯ ಮಾಡಿದ್ದ ಬಿಸಿಸಿಐ ಆಯ್ಕೆ ಸಮಿತಿ, ಈಗ ಮತ್ತೊಮ್ಮೆ ಕನ್ನಡಿಗನಿಗೆ ಅನ್ಯಾಯ ಮಾಡಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಟಿ20 ವಿಶ್ವಚಾಂಪಿಯನ್ ನಾಯಕ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ರೋಹಿತ್ ವಿಶ್ರಾಂತಿ ಬಯಸಿದ್ದ ಕಾರಣ ರಾಹುಲ್ ಅವರಿಗೆ ತಂಡದ ನಾಯಕತ್ವ ಸಿಗುವ ಸಾಧ್ಯತೆಯಿತ್ತು. ಆದರೆ ರೋಹಿತ್ ಶ್ರೀಲಂಕಾ ವಿರುದ್ಧ ಆಡಲು ನಿರ್ಧರಿಸಿದ್ದರಿಂದ ಸಹಜವಾಗಿ ಅವರೇ ನಾಯಕನಾಗಿ ಮುಂದುವರಿದಿದ್ದಾರೆ. ಈ ಮಧ್ಯೆ ರಾಹುಲ್ ಅವರಿಗೆ ಕನಿಷ್ಠ ಉಪನಾಯಕನ ಜವಾಬ್ದಾರಿಯೂ ಸಿಕ್ಕಿಲ್ಲ. ರಾಹುಲ್ ಬದಲು ಯುವ ಆರಂಭಿಕ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಟೀಮ್ ಇಂಡಿಯಾ ವೈಸ್ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ.
ಭಾರತ ತಂಡದ ನಾಯಕನಾಗಿ ರಾಹುಲ್ ಅಮೋಘ ದಾಖಲೆ ಹೊಂದಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯನ್ನು ಭಾರತ ತಂಡ ರಾಹುಲ್ ನಾಯಕತ್ವದಲ್ಲಿ ಗೆದ್ದುಕೊಂಡಿತ್ತು. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜ ಅವರ ಅನುಪಸ್ಥಿತಿಯಲ್ಲಿ ಯುವ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದ ರಾಹುಲ್, ಹರಿಣಗಳ ನಾಡಿನಲ್ಲಿ ಭಾರತಕ್ಕೆ ಏಕದಿನ ಸರಣಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ : Suryakumar Yadav: ಸೂರ್ಯನಿಗೆ ಭಾರತ ತಂಡದ ನಾಯಕ ಪಟ್ಟ, ನಿಜವಾಯ್ತು ಕಾಪು ಮಾರಿಕಾಂಬ ಅರ್ಚಕರ ವಾಣಿ
ಇದುವರೆಗೆ ಒಟ್ಟು 16 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿರುವ ಕೆ.ಎಲ್ ರಾಹುಲ್ 11 ಗೆಲುವುಗಳನ್ನು ಕಂಡಿದ್ದಾರೆ. ರಾಹುಲ್ ನಾಯಕತ್ವದಲ್ಲಿ ಭಾರತ ಸೋತಿರುವುದು ಕೇವಲ 5 ಪಂದ್ಯಗಳಲ್ಲಿ ಮಾತ್ರ. ಈ ಪೈಕಿ 12 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ರಾಹುಲ್ 8 ಗೆಲುವು ಹಾಗೂ 4 ಸೋಲು ಕಂಡಿದ್ದಾರೆ.

ನಾಯಕನಾಗಿ ಉತ್ತಮ ದಾಖಲೆಯಿದ್ದರೂ ಭಾರತ ಏಕದಿನ ತಂಡದ ಉಪನಾಯಕನ ಸ್ಥಾನವನ್ನೂ ರಾಹುಲ್ ಅವರಿಗೆ ನೀಡದೇ ಇರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಹಿಂದೆ ರಾಹುಲ್ ಅವರನ್ನು ಟಿ20 ತಂಡದಿಂದ ಹೊರಗಿಟ್ಟಿದ್ದ ಬಿಸಿಸಿಐ ಆಯ್ಕೆ ಸಮಿತಿ, ಇದೀಗ ಏಕದಿನ ತಂಡದ ಉಪನಾಯಕತ್ವಕ್ಕೂ ಪರಿಗಣಿಸದೆ ಕನ್ನಡಿಗನಿಗೆ ಅನ್ಯಾಯ ಮಾಡಿದೆ.
ಇದನ್ನೂ ಓದಿ : Indian Cricket Team : ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕ, ಏಕದಿನ ಸರಣಿಗೆ ರೋಹಿತ್ ಕ್ಯಾಪ್ಟನ್
32 ವರ್ಷದ ರಾಹುಲ್ ಕಳೆದ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಹೈದರಾಬಾದ್’ನಲ್ಲಿ ಟೆಸ್ಟ್ ಪಂದ್ಯವಾಡಿದ ನಂತರ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಗಾಯದಿಂದ ಚೇತರಿಸಿಕೊಂಡು ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಿದ್ದ ರಾಹುಲ್, ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂಲಕ ಭಾರತ ತಂಡಕ್ಕೆ ಮರಳಲಿದ್ದಾರೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆಗಸ್ಟ್ 2ರಂದು ಕೊಲಂಬೊದಲ್ಲಿ ನಡೆಯಲಿದೆ. 2ನೇ ಪಂದ್ಯ ಆಗಸ್ಟ್ 4ರಂದು ಹಾಗೂ ಮೂರನೇ ಏಕದಿನ ಪಂದ್ಯ ಆಗಸ್ಟ್ 7ರಂದು ನಡೆಯಲಿದೆ.
ಇದನ್ನೂ ಓದಿ : KL Rahul : RCB ತಂಡ ಸೇರ್ತಾರಾ ಕರ್ನಾಟಕದ ಮನೆ ಮಗ ಕೆ.ಎಲ್ ರಾಹುಲ್
KL Rahul is again unfair in Indian Cricket Team