MS Dhoni- Dinesh Karthik : ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್-2024 (IPL 2024) ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು 27 ರನ್’ಗಳಿಂದ ಬಗ್ಗು ಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ, ಐಪಿಎಲ್ ಪ್ಲೇ ಆಫ್’ಗೆ (IPL Play off) ಲಗ್ಗೆ ಇಟ್ಟಿದೆ.

ಐದು ಬಾರಿಯ ಚಾಂಪಿಯನ್ಸ್ ಸಿಎಸ್’ಕೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್’ಸಿಬಿ ಗೆಲುವಿಗೆ ಕಾರಣವಾಗಿದ್ದಪ ಪಂದ್ಯದ ಕೊನೆಯ ಓವರ್’ನಲ್ಲಿ ಎಂ.ಎಸ್ ಧೋನಿ ಬಾರಿಸಿದ ಸಿಕ್ಸರ್ (Dhoni sixer). ಧೋನಿ ಸಿಕ್ಸರ್ ಆರ್’ಸಿಬಿ ಗೆಲುವಿಗೆ ಕಾರಣವಾಗಿದ್ದು ಹೇಗೆ ಎಂಬ ರಹಸ್ಯವನ್ನು ಆರ್’ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ.
219 ರನ್’ಗಳ ಗುರಿ ಬೆನ್ನಟ್ಟಿದ್ದ ಸಿಎಸ್’ಕೆ ಪ್ಲೇ ಆಫ್’ಗೆ ಕ್ವಾಲಿಫೈ ಆಗಲು ಕೊನೆಯ ಓವರ್’ನಲ್ಲಿ 17 ರನ್ ಗಳಿಸಬೇಕಿತ್ತು. ಆರ್’ಸಿಬಿಯ ಎಡಗೈ ಮಧ್ಯಮ ವೇಗಿ ಯಶ್ ದಯಾಶ್ ಎಸೆದ ಆ ಓವರ್’ನ ಮೊದಲ ಎಸೆತದಲ್ಲೇ ಧೋನಿ ಭರ್ಜರಿ ಸಿಕ್ಸರ್ ಬಾರಿಸಿದರು. ಫೈನ್’ಲೆಗ್ ವಿಭಾಗದಲ್ಲಿ ಧೋನಿ ಬಾರಿಸಿದ ಸಿಕ್ಸರ್ ಕ್ರೀಡಾಂಗಣವನ್ನು ದಾಟಿ ಹೊರಗೆ ಲ್ಯಾಂಡ್ ಆಗಿತ್ತು. ಪಂದ್ಯಕ್ಕೆ ತಿರುವು ಸಿಕ್ಕಿದ್ದು, ಆರ್’ಸಿಬಿ ಅದೃಷ್ಟ ಖುಲಾಯಿಸಿದ್ದು ಅಲ್ಲೇ.
ಇದನ್ನೂ ಓದಿ : 1% ಚಾನ್ಸ್, 99% ನಂಬಿಕೆ.. ಭರವಸೆಗಳೇ ಬತ್ತಿ ಹೋಗಿದ್ದವರ ಎದೆಯಲ್ಲಿ ಗೆಲುವಿನ ಕಿಚ್ಚು ಹೊತ್ತಿಸಿದ ಧೀರನೊಬ್ಬನ ಕಥೆ..!
ಹಳೇ ಚೆಂಡು ಕ್ರೀಡಾಂಗಣದಿಂದಲೇ ಹೊರ ಹೋಗಿ ಬಿದ್ದ ಕಾರಣ, ಅದರ ಬದಲು ಮತ್ತೊಂದು ಹಳೇ ಚೆಂಡನ್ನು ಬಳಸಬೇಕಾಯಿತು. ಧೋನಿ ಬಾರಿಸಿದ ಸಿಕ್ಸರ್’ಗೆ ಕಳೆದೇ ಹೋದ ಚೆಂಡು ಒದ್ದೆಯಾಗಿದ್ದ ಕಾರಣ, ಬೌಲರ್’ಗಳಿಗೆ ಗ್ರಿಪ್ ಆಗುತ್ತಿರಲಿಲ್ಲ. ಇದೇ ಕಾರಣದಿಂದ ಯಶ್ ದಯಾಳ್ ಯಾರ್ಕರ್ ಸ್ಥಳಕ್ಕೆ ಗುರಿ ಇಟ್ಟು ಎಸೆದಿದ್ದ ಚೆಂಡು ಫಿಲ್ ಟಾಸ್ ಆಗಿ ಬಿದ್ದಿದ್ದರಿಂದ ಧೋನಿ ಫೈನ್ ಲೆಗ್’ನಲ್ಲಿ ಸುಲಭವಾಗಿ ಸಿಕ್ಸರ್ ಸಿಡಿಸುವಂತಾಯಿತು. ಆದರೆ ಆ ಚೆಂಡಿಗೆ ಬದಲಿಯಾಗಿ ಬಂದ ಹಳೇ ಚೆಂಡು ಒದ್ದೆಯಾಗಿಲ್ಲದ ಕಾರಣ ಯಶ್ ದಯಾಳ್ ಸ್ಲೋ ಬಾಲ್’ಗಳನ್ನು ಪರಿಣಾಮಕಾರಿಯಾಗಿ ಎಸೆಯುವಂತಾಯಿತು. ಇದೇ ಕಾರಣದಿಂದ ನಂತರದ ಐದು ಎಸೆತಗಳಲ್ಲಿ 11 ರನ್ ಗಳಿಸಬೇಕಿದ್ದ ಸಿಎಸ್’ಕೆ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಡ್ರೆಸ್ಸಿಂಗ್ ರೂಮ್’ನಲ್ಲಿ ಟೀಮ್ ಮೀಟಿಂಗ್ ವೇಳೆ ಮಾತನಾಡುತ್ತಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಈ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಸಿಎಸ್’ಕೆ ವಿರುದ್ಧ ರೋಚಕವಾಗಿ ಗೆದ್ದ ಆರ್’ಸಿಬಿ ಒಟ್ಚು 14 ಅಂಕಗಳೊಂದಿಗೆ 4ನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಿದೆ. ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಪ್ರವೇಶಿಸಿದ ಉಳಿದ ಮೂರು ತಂಡಗಳು. ಮೇ 22ರಂದು ಅಹಮದಾಬಾದ್’ನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ಅಥವಾ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : Hardik Pandya Ban : ಐಪಿಎಲ್’ನಲ್ಲಿ ಆಟ ಮುಗಿದ ಮೇಲೆ ಹಾರ್ದಿಕ್ ಪಾಂಡ್ಯಗೆ ಒಂದು ಮ್ಯಾಚ್ ಬ್ಯಾನ್ ಶಿಕ್ಷೆ! ಏನಿದು ಕಥೆ ?
MS Dhoni six is the reason for RCB win against CSK! Dinesh Karthik revealed the secret