ಉಡುಪಿ : Deepak Devadiga Alevooru : ಮಿಸ್ಟರಿ ಸ್ಪಿನ್ (Mystery Spin Bowller) .. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿದೆ. ವೆಸ್ಟ್ ಇಂಡಿಸ್‌ನ ಸುನಿಲ್ ನರೇನ್, ಭಾರತದ ವರುಣ್ ಚಕ್ರವರ್ತಿ ಮಿಸ್ಟರಿ ಸ್ಪಿನ್ ಬೌಲಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಇದೀಗ ಕರ್ನಾಟಕದ ಅದ್ರಲ್ಲೂ ಉಡುಪಿಯ ಅಲೆವೂರಿನ ದೀಪಕ್ ದೇವಾಡಿಗ ಮಿಸ್ಟರಿ ಸ್ಪಿನ್ ಬೌಲಿಂಗ್ ಮೋಡಿಗೆ ಕ್ರಿಕೆಟ್ ಪಂಡಿತರು ಬೌಲ್ಡ್ ಆಗಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ (Maharaja Trophy 2023) ಶಿವಮೊಗ್ಗ ಲಯನ್ಸ್ ತಂಡದ ಪರ ಆಡುತ್ತಿರುವ ದೀಪಕ್ ದೇವಾಡಿಗ ತಮ್ಮ ಬೌಲಿಂಗ್ ಮೂಲಕ ಮಿಂಚು ಹರಿಸಿದ್ದಾರೆ.

ಈ ಬಾರಿಯ ಮಹಾರಾಜ ಟೂರ್ನಿಯಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಆಡಿರುವ ದೀಪಕ್, ಒಟ್ಟು 1 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದು, 26 ರನ್ ನೀಡಿದ್ದರು. ಆದರೆ ವಿಕೆಟ್ ಪಡೆಯಲು ವಿಫಲರಾಗಿದ್ದರು. ಎರಡನೇ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಪಡೆಯುವ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು ಮೂರನೇ ಪಂದ್ಯದಲ್ಲಿ ಕೇವಲ ಒಂದು ಓವರ್ ಎಸೆಯಲು ಮಾತ್ರವೇ ಅವಕಾಶ ಸಿಕ್ಕಿತ್ತು. ಇದೇ ಮೊದಲ ಬಾರಿಗೆ ಮಹಾರಾಜ ಟ್ರೋಫಿಯಲ್ಲಿ ಆಡುತ್ತಿರುವ ದೀಪಕ್ ದೇವಾಡಿಗ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ದೀಪಕ್ ದೇವಾಡಿಗ, ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ಸಾಕಷ್ಟು ಗಮನ ಸೆಳೆದಿದ್ದರು. ನಂತರದಲ್ಲಿ ಪ್ರವೀಣ್ ಪಿತ್ರೋಡಿ ಹಾಗೂ ಕೋಚ್ ಇಬ್ರಾಹಿಂ ಆತ್ರಾಡಿ ಅವರ ಮಾರ್ಗದರ್ಶನದಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಇದೀಗ ಕೋಚ್ ಇಬ್ರಾಹಿಂ ಅವರು ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ದೀಪಕ್ ದೇವಾಡಿಗ.

ಅಂಡರ್ 21 ಹಾಗೂ ಅಂಡರ್ 23 ಇಂಟರ್ ಮುಫೀಶಿಯಲ್ ಟೂರ್ನಮೆಂಟ್ ನಲ್ಲಿ ಮಂಗಳೂರು ಝೋನ್ ಪ್ರತಿನಿಧಿಸಿದ್ದಾರೆ. ಅಲ್ಲದೇ ಅಂಡರ್ 25 ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸುವ ಝೋನ್ ಟೂರ್ನಮೆಂಟ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ ತಮ್ಮ ಚಾಣಾಕ್ಷತೆಯನ್ನು ಮೆರೆದಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಪ್ಲೇಯಿಂಗ್ 11 ನಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ಪಂದ್ಯದಲ್ಲಿ ಆಡುವ ವಿಶ್ವಾಸವನ್ನು ಹೊಂದಿದ್ದಾರೆ.

ಉಡುಪಿ ಜಿಲ್ಲೆಯ ಅಲೆವೂರಿನ 24 ರ ಹರೆಯದ ದೀಪಕ್ ದೇವಾಡಿಗ ಅವರ ತಂದೆ ಪುರಂದರ ಶೇರಿಗಾರ್ ಮತ್ತು ತಾಯಿ ವಸಂತಿ ಅಲೆವೂರು. ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಕ್ರಿಕೆಟ್ ಬಗ್ಗೆ ಅಪಾರವಾದ ಕನಸು ಕಂಡಿದ್ದ ದೀಪಕ್ ದೇವಾಡಿಗ ಪಂದ್ಯಾವಳಿಯೊಂದರಲ್ಲಿ ಗಾಯಗೊಂಡಿದ್ದರು. ಮತ್ತೆ ಕ್ರಿಕೆಟ್ ಬದುಕಿಗೆ ವಾಪಾಸಾಗುತ್ತೇನೆ ಅನ್ನೋ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಆದರೆ ನಿಂತರವಾದ ಶ್ರಮದ ಫಲವಾಗಿ ಇಂದು ಮಹಾರಾಜ ಟ್ರೋಫಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಂಜಿನಿಯರಿಂಗ ಕೋರ್ಸ್ ಪಡೆದ ನಂತರದಲ್ಲಿ ಮಣಿಪಾಲದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರು. ತದನಂತರ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ ದೀಪಕ್ ದೇವಾಡಿಗ ಉದ್ಯೋಗದ ಜೊತೆಗೆ ತರಬೇತಿ ಮುಂದುವರಿಸಿದ್ದರು. ಆದ್ರೀಗ ಕೆಲಸಕ್ಕೆ ಗುಡ್‌ಬೈ ಹೇಳಿ ತಮ್ಮನ್ನು ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಹೈಸ್ಕೂಲು ದಿನಗಳಿಂದಲೂ ಲೆದರ್ ಬಾಲ್ ತರಬೇತಿಯನ್ನು ಪಡೆಯುತ್ತಿದ್ದರು. ಆದರೆ ಅಂತರ್ ಕಾಲೇಜು ಟೂರ್ನಿಯಲ್ಲಿ 6 ಓವರ್ ಬೌಲಿಂಗ್ ಮಾಡಿ ಕೇವಲ 19 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು. ಇದೀಗ ಮಿಸ್ಟರಿ ಸ್ಪಿನ್ ದಾಳಿಯ ಮೂಲಕ ಎಲ್ಲರ ಗಮನ ಸೆಳೆದಿದ್ದು, ಐಪಿಎಲ್ ಜೊತೆಗೆ ರಣಜಿ ಹಾಗೂ ದೇಶೀಯ ಟೂರ್ನಿಯಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮೀಣ ಭಾಗದ ಪ್ರತಿಬೆ ದೀಪಕ್ ದೇವಾಡಿಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆಯಲಿ ಅನ್ನೋದೇ ನಮ್ಮ ಆಶಯ.