World Cup 2024 : ಬಹುಶಃ… ರಾಹುಲ್ ದ್ರಾವಿಡ್ (Rahul Dravid) ಅವರ ಅಪ್ಪಟ ಅಭಿಮಾನಿಗಳು ಆ ದೃಶ್ಯವನ್ನು ನೆನಪಿಸಿಕೊಂಡರೆ ಈಗಲೂ ಕಣ್ಣೀರಾಗುತ್ತಾರೆ. ಸಮಚಿತ್ತ ವ್ಯಕ್ತಿತ್ವದ ದ್ರಾವಿಡ್, ಯಾವತ್ತೂ ಭಾವನೆಗಳನ್ನು ಅದುಮಿಟ್ಟುಕೊಂಡೇ ಆಡಿದ ದ್ರಾವಿಡ್ ಆ ದಿನ ಕಣ್ಣೀರು ಹಾಕಿದ್ದರು. ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡ 2007ರ ಏಕದಿನ ವಿಶ್ವಕಪ್ ಟೂರ್ನಿಗೆ ಕಾಲಿಟ್ಟಾಗ ಬಹುತೇಕ ಕ್ರಿಕೆಟ್ ಪಂಡಿತರು ಹೇಳಿದ್ದು, ‘’ಈ ಬಾರಿ ವಿಶ್ವಕಪ್ ಗೆಲ್ಲುವ ತಂಡ ಇದೇ’’ ಎಂದು.

ಏನಿತ್ತು.. ಏನಿರಲಿಲ್ಲ ಆ ತಂಡದಲ್ಲಿ..? ಸಚಿನ್, ಗಂಗೂಲಿ, ಸೆಹ್ವಾಗ್, ಯುವರಾಜ್ ಸಿಂಗ್, ಎಂ.ಎಸ್ ಧೋನಿ, ರಾಬಿನ್ ಉತ್ತಪ್ಪನಂಥಾ ದಾಂಡಿಗರು, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಜಹೀರ್ ಖಾನ್’ನಂಥಾ quality ಬೌಲರ್’ಗಳು.. ಇಡೀ ತಂಡಕ್ಕೆ ಕಳಶವಿಟ್ಟಂತೆ ತಾಳ್ಮೆಯ ಪ್ರತಿರೂಪದ gentlemen ರಾಹುಲ್ ದ್ರಾವಿಡ್ ಅವರ ನಾಯಕತ್ವ. ಒಂದು ವಿಶ್ವಕಪ್ ಗೆಲ್ಲಲು ಏನೆಲ್ಲಾ ಇರಬೇಕಿತ್ತೋ ಅಷ್ಟೂ ಆ ತಂಡದಲ್ಲಿತ್ತು. ಆದರೆ… ಒಗ್ಗಟ್ಟು ಒಂದನ್ನು ಬಿಟ್ಟು..!

ಸೋಲಲೇಬಾರದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೋತಿತು. ಶ್ರೀಲಂಕಾ ವಿರುದ್ಧ ಮುಗ್ಗರಿಸಿತು. ಇನ್ನೆಲ್ಲಿಯ ವಿಶ್ವಕಪ್..? ಲೀಗ್ ಹಂತದಲ್ಲೇ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿತು ದ್ರಾವಿಡ್ ನಾಯಕತ್ವದ ಭಾರತ ತಂಡ. ಅನಿರೀಕ್ಷಿತ ಆಘಾತಕ್ಕೆ ಅವತ್ತು ಪೆವಿಲಿಯನ್’ನಲ್ಲಿ ಕೂತು ಕಣ್ಣೀರಿಡುವುದನ್ನು ಬಿಟ್ಟರೆ ದ್ರಾವಿಡ್ ಅವರ ಬಳಿ ಬೇರೆ ಆಯ್ಕೆಯೇ ಇರಲಿಲ್ಲ. ವಿಧಿಯಾಟ ಹೇಗಿದೆ ನೋಡಿ.. 17 ವರ್ಷಗಳ ಹಿಂದೆ ಯಾವ ನೆಲದಲ್ಲಿ ರಾಹುಲ್ ದ್ರಾವಿಡ್ ಕಣ್ಣೀರಿಟ್ಟಿದ್ದರೋ, ಅದೇ ನೆಲದಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದಾರೆ.
ಇದನ್ನೂ ಓದಿ : Aiden Markram : ದಕ್ಷಿಣ ಆಫ್ರಿಕಾಗೆ ಚೊಚ್ಚಲ ಕಪ್ ಗೆಲ್ಲಿಸ್ತಾನಾ ಲಕ್ಕಿ ಕ್ಯಾಪ್ಟನ್ ಏಡನ್ ಮಾರ್ಕ್ರಮ್ ?
ದೇವರು ಕೊನೆಗೂ ನ್ಯಾಯ ಕೊಟ್ಟಿದ್ದಾನೆ. ದ್ರಾವಿಡ್ ಯಾವುದಕ್ಕೆ ಅರ್ಹರಾಗಿದ್ದರೋ ಅದು ಅವರಿಗೆ ಸಿಕ್ಕಿದೆ. ಆಟಗಾರನಾಗಿ, ನಾಯಕನಾಗಿ ವಿಶ್ವಕಪ್ ಗೆಲ್ಲಲಾಗದ ದ್ರಾವಿಡ್ ಕೋಚ್ ಆಗಿ ತಮ್ಮ ಜೀವನದ ಅತ್ಯಂತ ದೊಡ್ಡ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಆ ಕಪ್ ಹಿಡಿದು ಅವರು ಸಂಭ್ರಮಿಸಿದ ರೀತಿಯೇ ಹೇಳುತ್ತಿದೆ, ‘’ವಿಶ್ವಕಪ್ ಟ್ರೋಫಿ ದ್ರಾವಿಡ್ ಅವರಿಗೆ ಎಷ್ಟು ಮುಖ್ಯವಾಗಿತ್ತು’’ ಎಂದು.

ರಾಹುಲ್ ದ್ರಾವಿಡ್ ಭಾರತ ತಂಡಕ್ಕಾಗಿ ಎಲ್ಲವನ್ನೂ ಮಾಡಿದ ಒಬ್ಬ amazing team man. ಅಂತಹ ಮತ್ತೊಬ್ಬ ಕ್ರಿಕೆಟಿಗ ದುರ್ಬೀನು ಹಾಕಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ. ಸ್ವಾರ್ಥ ಎಂಬ ಪದ ಅವರ dictionaryಯಲ್ಲೇ ಇಲ್ಲ. ಅಂತಹ ಲವಲೇಶದಷ್ಟು ಸ್ವಾರ್ಥವಿದ್ದಿದ್ದರೆ, ಅವರು ಕ್ರಿಕೆಟ್ ಮೈದಾನದಲ್ಲಿ ಹತ್ತಾರು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರಲಿಲ್ಲ.
ಇದನ್ನೂ ಓದಿ : T20 World Cup 2024 India Win : ಭಾರತದ ಮಡಿಲಿಗೆ 4ನೇ ವಿಶ್ವಕಪ್, ಕೊನೆಗೂ ಈಡೇರಿಲ್ಲ ದಕ್ಷಿಣ ಆಫ್ರಿಕಾದ ಕನಸು
ಯಾವುದೇ ಪರಿಸ್ಥಿತಿ ಇರಲಿ, ಎಂಥದ್ದೇ ಸನ್ನಿವೇಶವಿರಲಿ.. ತಂಡಕ್ಕೆ ತನ್ನ ಅಗತ್ಯವಿದೆ ಎಂದಾಗ ದ್ರಾವಿಡ್ ಯಾವತ್ತೂ ಹಿಂದೇಟು ಹಾಕಿದವರೇ ಅಲ್ಲ. ಅವರು ಅರ್ಜುನನಂಥಾ ಸವ್ಯಸಾಚಿ ಆಟಗಾರ. ಆದರೆ ಈ ಸವ್ಯಸಾಚಿಗೆ ಕ್ರಿಕೆಟ್ ತ್ಯಜಿಸುವ ಹೊತ್ತಿಗೆ ಸಿಕ್ಕಿದ್ದು ಬರೀ ನೋವು. ಆಡಿದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸೋಲು, ಆಡಿದ ಕೊನೆಯ ಏಕದಿನ ಪಂದ್ಯದಲ್ಲಿ ಸೋಲು, ವೃತ್ತಿಜೀವನದಲ್ಲಿ ಆಡಿದ ಏಕೈಕ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಸೋಲು

.
ಕಟ್ಟ ಕಡೆಯ ಐಪಿಎಲ್ ಪಂದ್ಯದಲ್ಲಿ ಸೋಲು, ಕೊನೆಯ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲೂ ಸೋಲು.. ಹೀಗೆ ಸಿಗಬೇಕಿದ್ದ ಗೌರವದ ವಿದಾಯ ದ್ರಾವಿಡ್ ಅವರಿಗೆ ಸಿಕ್ಕಿರಲೇ ಇಲ್ಲ. ಇನ್ನು ದ್ರಾವಿಡ್ ನಿವೃತ್ತಿಯಾದ ಸಂದರ್ಭ… ತೆಂಡೂಲ್ಕರ್, ಗಂಗೂಲಿಯಂತೆ ಮೈದಾನದಲ್ಲೇ ವಿದಾಯದ ಕ್ಷಣಗಳ ಅನುಭವದಿಂದಲೂ ವಂಚಿತರಾದವರು ನತದೃಷ್ಟ ದ್ರಾವಿಡ್.
ಇದನ್ನೂ ಓದಿ : Rohit Sharma : 6 ತಿಂಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕಿತ್ತೆಸೆಯಲ್ಪಟ್ಟವನು ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ
ಆಟಗಾರನಾಗಿ ಯಾವ ಗೌರವದ ವಿದಾಯ ದ್ರಾವಿಡ್ ಅವರಿಗೆ ಸಿಗಬೇಕಿತ್ತೋ, ಅದು ಕೋಚ್ ಆಗಿ ಸಿಕ್ಕಿದೆ. ಅದೂ, ಅವರು ಅಷ್ಟಾಗಿ ಇಷ್ಟ ಪಡದೇ ಇದ್ದ ಕ್ರಿಕೆಟ್ ಫಾರ್ಮ್ಯಾಟ್ ಮೂಲಕ. ಕೊನೆಗೂ ಭಾರತಕ್ಕೆ 10 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆಲ್ಲಿಸಲು, 13 ವರ್ಷಗಳ ನಂತರ ವಿಶ್ವಕಪ್ ಗೆಲ್ಲಿಸಲು ನಮ್ಮ ಕರ್ನಾಟಕದ ಹೆಮ್ಮೆ ರಾಹುಲ್ ದ್ರಾವಿಡ್ ಅವರೇ ದ್ರೋಣಾಚಾರ್ಯನಾಗಿ ಬರಬೇಕಾಯಿತು.
Rahul Dravid They have once again lifted the World Cup 2024 on the field where they lost the World Cup and shed tears