ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ಮಧ್ಯೆ ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಭವಿಷ್ಯ ಈ ಪಂದ್ಯದಲ್ಲಿ ನಿರ್ಧಾರವಾಗಲಿದೆ. ಪ್ಲೇ ಆಪ್ ಕನಸನ್ನು ಜೀವಂತವಾಗಿಡಬೇಕಾದರೆ ಸಿಎಸ್’ಕೆ ವಿರುದ್ಧ ಆರ್’ಸಿಬಿ ಕನಿಷ್ಠ 18 ರನ್’ಗಳಿಂದ ಪಂದ್ಯ ಗೆಲ್ಲಬೇಕಿದೆ. ಒಂದು ವೇಳೆ ಚೇಸಿಂಗ್ ಮಾಡಿದರೆ ಸಿಎಸ್’ಕೆ ಒಡ್ಡುವ ಗುರಿಯನ್ನು 18.1 ಓವರ್’ಗಳ ಒಳಗೆ ತಲುಪಬೇಕಿದೆ. ಹಾಗಾದಲ್ಲಿ ಮಾತ್ರ ಆರ್’ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.

ಆದರೆ ಮೇ 18ರಂದು ಚಿನ್ನಸ್ವಾಮಿಯಲ್ಲಿ ನಡೆಯುವ ಈ ಹೈವೋಲ್ಟೇಜ್ ಪಂದ್ಯಕ್ಕೆ (RCB vs CSK) ಮಳೆಯ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಹವಾಮಾನ ವರದಿಯ ಪ್ರಕಾರ ಶನಿವಾರವೂ ಮಳೆ ಸುರಿಯುವ ಸಾಧ್ಯತೆಯಿದೆ.
ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆಯಾಗಲಿದೆ. ಆಗ RCB ತಂಡ 14 ಪಂದ್ಯಗಳಿಂದ ಕೇವಲ 13 ಅಂಕ ಗಳಿಸಿದಂತಾಗುತ್ತದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಿಂದ 15 ಅಂಕ ಗಳಿಸಿ ಪ್ಲೇ ಆಫ್ ಹಂತಕ್ಕೇರಲಿದೆ.

ಆದರೆ ಮಳೆ ಬಂದರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಮ್ (Sub air system in Chinnaswamy Stadium) ಇರುವುದು ಆರ್’ಸಿಬಿಗೆ ಗುಡ್ ನ್ಯೂಸ್. ಅದೆಷ್ಟೇ ಮಳೆಯಾದರೂ ಮಳೆ ನಿಂತ ಬಳಿಕ ಮೈದಾನದ ನೀರನ್ನು ಹೊರ ಹಾಕಿ ಕ್ಷಣ ಮಾತ್ರದಲ್ಲಿ ಕ್ರೀಡಾಂಗಣವನ್ನು ಪಂದ್ಯಕ್ಕೆ ಸಜ್ಜುಗೊಳಿಸಬಲ್ಲ ಸಾಮರ್ಥ್ಯ ಈ ಸಬ್ ಏರ್ ಸಿಸ್ಟಮ್’ಗಿದೆ. ಇಂತಹ ವ್ಯವಸ್ಥೆ ಭಾರತದ ಬೇರೆ ಯಾವ ಕ್ರೀಡಾಂಗಣಗಳಲ್ಲೂ ಇಲ್ಲ. ಸಬ್ ಏರ್ ಸಿಸ್ಟಮ್ ಹೊಂದಿರುವ ದೇಶದ ಮೊದಲ ಕ್ರಿಕೆಟ್ ಮೈದಾನವೆಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿದೆ. ಈ ವ್ಯವಸ್ಥೆ ಇರುವುದರಿಂದ ಕಳೆದ ಕೆಲ ವರ್ಷಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯ ಕಾರಣ ಪಂದ್ಯಗಳು ರದ್ದಾದ ಉದಾಹರಣೆ ತುಂಬಾ ಕಡಿಮೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 13 ಪಂದ್ಯಗಳಲ್ಲಿ ಆರು ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 13 ಪಂದ್ಯಗಳಿಂದ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆರ್’ಸಿಬಿ +0.387 ರನ್ ರೇಟ್ ಹೊಂದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ +0.528 ರನ್ ರೇಟ್ ಹೊಂದಿದೆ. ಹೀಗಾಗಿ ಚೆನ್ನೈ ರನ್ ರೇಟ್ ಅನ್ನು ಹಿಂದಿಕ್ಕಬೇಕಾದರೆ ಆರ್’ಸಿಬಿ ತಂಡ ಮೊದಲ ಬ್ಯಾಟಿಂಗ್ ಮಾಡಿದರೆ ಕನಿಷ್ಠ 18 ರನ್’ಗಳಿಂದ ಪಂದ್ಯ ಗೆಲ್ಲಬೇಕಿದೆ. ಗುರು ಬೆನ್ನಟ್ಟುವ ಸಂದರ್ಭ ಎದುರಾದರೆ 18.1 ಓವರ್’ಗಳ ಒಳಗೆ ಗೆಲ್ಲಲೇಬೇಕಿದೆ.