ಮುಂಬೈ : ಟೀಂ ಇಂಡಿಯಾ ಪಾಲಿಗೆ ದಾದಾ. ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೀವನ ಕಥೆಗಳು ಇದೀಗ ಸಿನಿಮಾ ರೂಪ ತಾಳಲಿದೆ. ಈಗಾಗಲೇ ಬಾಲಿವುಡ್ ನಲ್ಲಿ ಗಂಗೂಲಿ ಬಯೋಪಿಕ್ ಗೆ ಸಿದ್ದತೆ ನಡೆಸಿದ್ದು, ಬರೋಬ್ಬರಿ 200ರಿಂದ 250 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ರೆಡಿಯಾಗಲಿದೆ.

ಮುಂಬೈನ ಸಿನಿಮಾ ಪ್ರೊಡಕ್ಷನ್ ಕಂಪೆನಿ ಈಗಾಗಲೇ ಸೌರವ್ ಗಂಗೂಲಿ ಅವರ ಬಯೋಫಿಕ್ ಮಾಡಲು ಮುಂದೆ ಬಂದಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗ್ತಿದ್ದು, ಖುದ್ದು ಸೌರವ್ ಗಂಗೂಲಿ ಅವರು ಬಯೋಪಿಕ್ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ಈ ಕುರಿತು ಗಂಗೂಲಿ ಅವರೇ ಅಧಿಕೃತ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ಸಿನಿಮಾಕ್ಕೆ ಸುಮಾರು 200ರಿಂದ 250 ಕೋಟಿ ರೂ. ಬಂಡವಾಳ ಹೂಡಲಾಗುತ್ತಿದೆ. ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ದಾದಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಸಿನಿಮಾದ ನಿರ್ದೇಶನ ಸೇರಿದಂತೆ ಕಲಾವಿದರ ಕುರಿತು ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಸೌರವ್ ಗಂಗೂಲಿ ಅವರ ಕುರಿತು ಸಿನಿಮಾ ಮಾಡೋ ನಿಟ್ಟಿನಲ್ಲಿ ಪ್ರೊಡಕ್ಷನ್ ಕಂಪೆನಿ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದೆ. ಈಗಾಗಲೇ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಹಲವು ಖ್ಯಾತ ನಾಮರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತೆರೆ ಕಂಡಿದೆ. ಇದೀಗ ಗಂಗೂಲಿ ಅವರ ಸಿನಿಮಾ ಕೂಡ ತೆರೆಗೆ ಬರಲು ಸಿದ್ದವಾಗುತ್ತಿದೆ.