Suryakumar Yadav- Kapu Mariamma Temple : ಬೆಂಗಳೂರು: ಕರ್ನಾಟಕದ ಅಳಿಯ ಸೂರ್ಯಕುಮಾರ್ (Suryakumar Yadav) ಅವರಿಗೆ ಕಾಪು ಮಾರಿಯಮ್ಮನ (Kapu Mariyamma Temple) ಅನುಗ್ರಹ ಸಿಕ್ಕಿದೆ. ಮಾರಿಯಮ್ಮನ ಸನ್ನಿಧಿಯಲ್ಲಿ ಅರ್ಚಕರು ಹೇಳಿದಂತೆ ಮುಂಬೈ ಆಟಗಾರನಿಗೆ ಭಾರತ ತಂಡದ ನಾಯಕತ್ವ ಸಿಕ್ಕಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕರಾಗಿ ನೇಮಕಗೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಉಪನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಬದಿಗಿಟ್ಟು, ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನೂತನ ಸಾರಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯವರೆಗೆ ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕರಾಗಿ ಮುಂದುವರಿಯುವ ಸಾಧ್ಯತೆಯಿದೆ.
ಅಚ್ಚರಿಯ ಸಂಗತಿ ಏನೆಂದರೆ ಕಾಪು ಮಾರಿಯಮ್ಮನ ಸನ್ನಿಧಿಗೆ ಬಂದು ಹೋದ ಹತ್ತೇ ದಿನಗಳಲ್ಲಿ ಸೂರ್ಯಕುಮಾರ್ ಯಾದವ್’ಗೆ ಟಿ20 ತಂಡದ ಪೂರ್ಣಕಾಲಿಕ ನಾಯತನ ಸ್ಥಾನ ಸಿಕ್ಕಿದೆ. ಜುಲೈ 9ರಂದು ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಅವರೊಂದಿಗೆ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಮಾರಿಯಮ್ಮನ ದೇಗುಲದ ಅರ್ಚಕರು ಮುಂದಿನ ದಿನಗಳಲ್ಲಿ ನಿಮಗೆ ಭಾರತ ತಂಡದ ನಾಯಕತ್ವ ಸಿಗಲಿ ಎಂದು ಹರಸಿದ್ದರು. ಅರ್ಚಕರ ವಾಣಿ ಇದೀಗ ನಿಜವಾಗಿದೆ.
ಇದನ್ನೂ ಓದಿ : Virat Kohli: ನಿವೃತ್ತಿಯ ನಂತರ ಭಾರತ ತೊರೆಯಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ
ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಉಡುಪಿಯವರು. ಇದುವರೆಗೆ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ಪೂರ್ಣಕಾಲಿಕ ನಾಯಕನಾಗಿರಲಿಲ್ಲ. ಕಾಯಂ ನಾಯಕ ಅಲಭ್ಯರಾದಾಗ ಸೂರ್ಯ ಟೀಮ್ ಇಂಡಿಯಾದ ಸಾರಥ್ಯ ವಹಿಸಿದ್ದರು. ಇದುವರೆಗೆ ಒಟ್ಟು 7 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಸೂರ್ಯಕುಮಾರ್ ಯಾದವ್ 5 ಗೆಲುವು ಹಾಗೂ 2 ಸೋಲುಗಳನ್ನು ಕಂಡಿದ್ದಾರೆ.

ಶ್ರೀಲಂಕಾ ವಿರುದ್ಧ ಜುಲೈ 27ರಿಂದ ಆರಂಭವಾಗಲಿರುವ ಟಿ20 ಸರಣಿಯ ಮೂಲಕ ಭಾರತ ತಂಡದ ಪೂರ್ಣಕಾಲಿಕ ಟಿ20 ನಾಯಕನಾಗಿ ಸೂರ್ಯಕುಮಾರ್ ಯಾದವ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿರುವ ಭಾರತ ತಂಡ, ದ್ವೀಪರಾಷ್ಟ್ರದಲ್ಲಿ ಆತಿಥೇಯರ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಟಿ20 ಸರಣಿಯ ಬೆನ್ನಲ್ಲೇ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಏಕದಿನ ಸರಣಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಟಿ20 ವಿಶ್ವಚಾಂಪಿಯನ್ ನಾಯಕ ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಹಿರಿಯ ಆಟಗಾರ ವಿರಾಟ್ ಕೊಹ್ಲಿ ಕೂಡ ಸರಣಿಯಲ್ಲಿ ಆಡಲಿದ್ದಾರೆ.
ಇದನ್ನೂ ಓದಿ : KL Rahul : RCB ತಂಡ ಸೇರ್ತಾರಾ ಕರ್ನಾಟಕದ ಮನೆ ಮಗ ಕೆ.ಎಲ್ ರಾಹುಲ್
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ : ಕಾಪು ಮಾರಿಗುಡಿಗೆ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ : ಕರಾವಳಿಯಲ್ಲಿ ಉಡುಪಿಯ ಅಳಿಯನ ಟೆಂಪಲ್ ರನ್ !
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
Suryakumar Yadav: Kapu Mariamma Temple priest’s words come true as Surya becomes captain of Indian team