ದುಬೈ : ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಭವಿಷ್ಯ ಇಂದು ನಿರ್ಧಾರವಾಗಲಿದೆ. ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ದ ಸೆಣೆಸಾಡಲಿದೆ. ಅಫ್ಘಾನಿಸ್ತಾನ ತಂಡ ಗೆಲುವನ್ನು ಕಂಡ್ರೆ ಭಾರತ ಸೆಮಿಫೈನಲ್‌ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ, ಒಂದೊಮ್ಮೆ ಕಿವೀಸ್ ಪಂದ್ಯವನ್ನು ಜಯಿಸಿದ್ರೆ ಕೊಯ್ಲಿ ಪಡೆಯ ವಿಶ್ವಕಪ್ ಕನಸು ನುಚ್ಚು ನೂರಾಗಲಿದೆ. ಹೀಗಾಗಿ ಭಾರತೀಯ ಅಭಿಮಾನಿಗಳು ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ಗೆಲುವಿಗೆ ಪ್ರಾರ್ಥಿಸುತ್ತಿದ್ದಾರೆ.
ಅಬುದಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿಂದು ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ವಿಶ್ವಕಪ್ ನುದ್ದಕ್ಕೂ ಅದ್ಬುತ ಯಶಸ್ಸು ಕಂಡಿರುವ ಅಫ್ಘಾನಿಸ್ತಾನ ಕಿವೀಸ್ ವಿರುದ್ದ ಗೆಲ್ಲುವ ಕನಸು ಕಾಣುತ್ತಿದೆ. ಇನ್ನೊಂದೆಡೆಯಲ್ಲಿ ಪಾಕಿಸ್ತಾನ ವಿರುದ್ದ ಸೋಲು ಕಂಡಿರುವ ನ್ಯೂಜಿಲೆಂಡ್ ತಂಡಕ್ಕೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ನ್ಯೂಜಿಲೆಂಡ್ ಗೆಲುವು ಕಂಡ್ರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ, ಒಂದೊಮ್ಮೆ ಸೋತ್ರೆ ಟೂರ್ನಿಯಿಂದಲೇ ಹೊರ ಬೀಳಲಿದೆ. ಮೇಲ್ನೋಟಕ್ಕೆ ನ್ಯೂಜಿಲೆಂಡ್ ತಂಡ ಬಲಿಷ್ಟವಾಗಿದೆ.
ಮಾರ್ಟಿನ್ ಗುಪ್ಟಿಲ್, ಕೇನ್ ವಿಲಿಯಮ್ಸನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನೊಂದೆಡೆ ಸೌಥಿ, ಬೌಲ್ಟ್, ಮಿಲ್ನೆ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ನ್ಯೂಜಿಲೆಂಡ್ ತಂಡ ಬ್ಯಾಟಿಂಗ್, ಬೌಲಿಂಗ್‌ನಲ್ಲಿಯೂ ಸದೃಢವಾಗಿದ್ದು, ಟೀಂ ಇಂಡಿಯಾಕ್ಕೆ ಈಗಾಗಲೇ ಸೋಲಿನ ರುಚಿ ತೋರಿಸಿದೆ. ಇನ್ನೊಂದೆಡೆ ಅಫ್ಘಾನ್ ತಂಡವನ್ನು ಕಡೆಗಣಿಸುವಂತಿಲ್ಲ. ನ್ಯೂಜಿಲೆಂಡ್ ಹಾಗೂ ಅಫ್ಘಾನ್ ತಂಡಗಳು ಇದೇ ಮೊದಲ ಬಾರಿ ಟೀ 20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ರಶೀದ್ ಖಾನ್, ಮೊಹ್ಮದ್ ನಬಿ, ಝಝೈ, ನಜೀಬ್, ಶೆಹಝಾದ್‌ರಂತಹ ಬಲಿಷ್ಟ ಆಟಗಾರರಿದ್ದಾರೆ. ಈಗಾಗಲೇ ಹಲವು ತಂಡಗಳಿಗೆ ಸೋಲಿನ ಪಾಠ ಕಲಿಸಿರುವ ಅಫ್ಘಾನಿಸ್ತಾನ ತಂಡ ಕಿವೀಸ್ ವಿರುದ್ದ ಗೆದ್ದು ಸೆಮಿಫೈನಲ್ ಪ್ರವೇಶಿಸೋ ಕನಸು ಕಾಣುತ್ತಿದೆ. ಒಟ್ಟಿನಲ್ಲಿ ಇಂದಿನ ಪಂದ್ಯ ಹೆಚ್ಚು ರೋಚಕತೆಯಿಂದ ಕೂಡಿದ್ದು, ಭಾರತೀಯರು ಇಂದಿನ ಪಂದ್ಯ ದಲ್ಲಿ ಅಫ್ಘಾನ್ ಗೆಲುವಿಗಾಗಿ ಹಾರೈಸುತ್ತಿದ್ದಾರೆ.
ಇದನ್ನೂ ಓದಿ : ಅತಿಯಾ ಶೆಟ್ಟಿಗೆ “ಹ್ಯಾಪಿ ಬರ್ತ್ ಡೇ ಮೈ ಹಾರ್ಟ್ ಐಕಾನ್” ಎಂದ ಕೆಎಲ್ ರಾಹುಲ್
ಇದನ್ನು ಓದಿ : 2022 ಐಪಿಎಲ್‌ಗೆ ಎಂಟ್ರಿ ಕೊಟ್ಟ ಲಕ್ನೋ, ಅಹಮದಾಬಾದ್ ಹೊಸ ತಂಡ
( New Zealand – Battle of Afghanistan, India making entry to the semifinals )