ಅಹಮದಾಬಾದ್ : ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಹಾಗೂ ರೋಹಿತ್ ಶರ್ಮಾ ಆರ್ಭಟಕ್ಕೆ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲು ಕಂಡಿದೆ. ಈ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಮಾಡಿತು. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಯ್ಲಿ ಅದ್ಬುತ ಜೊತೆಯಾಟವಾಡಿದ್ರು. ರೋಹಿತ್ ಶರ್ಮಾ 34 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 64 ರನ್ ಗಳಿಸಿದ್ರೆ, ವಿರಾಟ್ ಕೊಯ್ಲಿ 52 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 80ರನ್ ಸಿಡಿಸಿದ್ರು.

ನಂತರದ ಜೊತೆಯಾದ ಸೂರ್ಯ ಕುಮಾರ್ ಯಾದವ್ 17 ಎಸೆತಗಳಲ್ಲಿ 32 ರನ್ ಗಳಿಸಿದ್ರೆ, ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 39ರನ್ ಸಿಡಿಸುವ ಮೂಲಕ ಭಾರತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 224ರನ್ ಗಳಿಸಿತು. ಇಂಗ್ಲೆಂಡ್ ತಂಡದ ಪರ ಆದಿಲ್ ರಶೀದ್ ಹಾಗೂ ಬೆನ್ ಸ್ಟೋಕ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.

ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತವನ್ನು ನೀಡಿದ್ರು. ಜಾಸನ್ ರಾಯ್ ಗೆ ಸೊನ್ನೆ ರನ್ನಿಗೆ ಭುವನೇಶ್ವರ್ ಕುಮಾರ್ ಫೆವಿಲಿಯನ್ ಹಾದಿ ತೋರಿಸಿದ್ರು. ಆದರೆ ನಂತರ ಡೇವಿಡ್ ಮಲನ್ ಜೊತೆಯಾದ ಜೋಸ್ ಬಟ್ಲರ್ ಉತ್ತಮ ಜೊತೆಯಾಟವಾಡಿದ್ರು. ಮಲನ್ 46 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನಿಂದ 68ರನ್ ಗಳಿಸಿದ್ರೆ ಬಟ್ಲರ್ 34 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 52 ರನ್ ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ನೆರವಾದ್ರು. ಆದರೆ ಭುವನೇಶ್ವರ್ ಕುಮಾರ್ ಹಾಗೂ ಶಾರ್ದೂಲ್ ಠಾಕೂರ್ ಆಘಾತ ನೀಡಿದ್ರು.

ನಂತರ ಬಂದ ಆಟಗಾರರಾರು ಕ್ರೀಸ್ ಗೆ ಕಚ್ಚಿಕೊಂಡು ಆಡುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 188 ರನ್ ಗಳಿಸಲಷ್ಟೇ ಶಕ್ತವಾಯಿತು. ಶಾರ್ದೂಲ್ ಠಾಕೂರ್ 3, ಭುವನೇಶ್ವರ್ ಕುಮಾರ್ 2 ಹಾಗೂ ನಟರಾಜನ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಭಾರತ ತಂಡ ಗೆಲುವಿನ ನಗೆ ಬೀರಿದೆ.