ಬೆಳಗಾವಿ : ಮಹಾರಾಷ್ಟ್ರದಲ್ಲಿ ಕರ್ನಾಟಕ ಧ್ವಜವನ್ನು ಸುಟ್ಟು ವಿಕೃತಿ ಮೆರೆದಿದ್ದ ಕಿಡಿಕೇಡಿಗಳು ಬೆಳಗಾವಿಯಲ್ಲಿ (belagavi) ತಡರಾತ್ರಿ ಗಲಾಟೆ ನಡೆಸಿದ್ದಾರೆ. ರಾಯಣ್ಣನ ಪ್ರತಿಮೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಹಾನಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಭಾನುವಾರವೂ ನಿಷೇಧಾಜ್ಞೆ(144 section in belagavi) ಜಾರಿಯಲ್ಲಿ ಇರಲಿದೆ.
ಪ್ರಕರಣ ಸಂಬಂಧ ಈಗಾಗಲೇ 27 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ತಪ್ಪಿತಸ್ಥರನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದೊಂದು ನೀಚ ಕೃತ್ಯವಾಗಿದೆ. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ವಿಕೃತಿ ಮೆರೆದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ಆನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ಸಂಬಂಧ ಶುಭಂ ಶಳಕೆ ಸೇರಿದಂತೆ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘ ಸಹ ಟಿಳಕವಾಡಿ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದು ರಾಯಣ್ಣ ಪ್ರತಿಮೆಗೆ ಹಾನಿ ಉಂಟು ಮಾಡಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಬೆಳಗಾವಿಯ ಖಡಾ ಬಜಾರ್ ಪೊಲೀಸ್ ಠಾಣೆ, ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ದೂರು ದಾಖಲಾಗಿದೆ. ಪೊಲೀಸರ ಕರ್ತವ್ಯ ಅಡ್ಡಿ ಬಂದದ್ದು, ಪೊಲೀಸರ ವಾಹನ ಜಖಂಗೊಳಿಸಿದ್ದು ಹಾಗೂ ಭಾಷಾ ವೈಷಮ್ಯ ಮೆರೆದ ಆರೋಪಗಳ ಅಡಿಯಲ್ಲಿ 100ಕ್ಕೂ ಅಧಿಕ ಮಂದಿಯ ವಿರುದ್ಧ ಈ ಮೂರು ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕನ್ನಡ ಬಾವುಟಕ್ಕೆ ಬೆಂಕಿ : ಕೆರಳಿದ ಕರವೇ, ದಚ್ಚು, ಜಗ್ಗೇಶ್ ಆಕ್ರೋಶ
ಬೆಳಗಾವಿಯಲ್ಲಿನ ಕನ್ನಡಿಗರು ಹಾಗೂ ಮರಾಠಿಗರ ನಡುವಿನ ಸಮರ ಸದ್ಯಕ್ಕೆ ಕೊನೆಯಾಗುವಂತೆ ತೋರುತ್ತಿಲ್ಲ. ಕನ್ನಡದ ಬಗ್ಗೆ ಅಸಡ್ಡೆ ತೋರಿದ್ದಕ್ಕೆ ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಎಂಇಎಸ್ ಮುಖಂಡನ ಮುಖಕ್ಕೆ ಕನ್ನಡಿಗರು ಮಸಿ ಬಳಿದಿದ್ದರೇ ಅತ್ತ ಶಿವಸೇನೆ ಕನ್ನಡದ ಬಾವುಟ ಸುಡುವ ಮೂಲಕ ಉದ್ಧಟತನ ತೋರಿದ್ದು ಶಿವಸೇನೆಯ ಪುಂಡಾಟಕ್ಕೆ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಸ್ಯಾಂಡಲ್ ವುಡ್ ನಟರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಎರಡು ದಿನಗಳ ಹಿಂದೆ ಎಂಇಎಸ್ ಮುಖಂಡನ ಮುಖಕ್ಕೆ ಮಸಿ ಬಳಿಯಲಾಗಿತ್ತು. ಇದನ್ನು ಖಂಡಿಸಿ ಎಂಇಎಸ್ ಕಾರ್ಯಕರ್ತರು ಬೆಳಗಾವಿ ಬಂದ್ ಗೆ ಕರೆ ನೀಡಿದ್ದರು. ಆದರೆ ಬಂದ್ ಯಶಸ್ವಿಯಾಗಲಿಲ್ಲ. ಆದರೂ ಹಟ ಬಿಡದ ಎಂಇಎಸ್ ಕನ್ನಡಿಗರ ವಿರುದ್ಧ ತನ್ನ ಪಿತೂರಿ ಮುಂದುವರೆಸಿದ್ದು ಶಿವಸೇನೆಯ ಸಹಕಾರದೊಂದಿಗೆ ಕನ್ನಡದ ಬಾವುಟಕ್ಕೆ ಬೆಂಕಿ ಹಚ್ಚಿದೆ. ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದ್ದು ಕನ್ನಡದ ಗೂಂಡಾಗಳಿಗೆ ದಿಕ್ಕಾರ ಎಂದು ಕೂಗಿ ಬಾವುಟಕ್ಕೆ ಬೆಂಕಿ ಹಚ್ಚಿದೆ.ಕನ್ನಡದ ಬಾವುಟಕ್ಕೆ ಶಿವಸೇನೆ ಬೆಂಕಿ ಹಚ್ಚಿದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ರಾಯಚೂರಿನಲ್ಲಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೇ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲೂ ಕರವೇ ಕಾರ್ಯಕರ್ತರು ಬೆಳಗಾವಿ ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿದ್ದಾರೆ. ಇನ್ನು ಶಿವಸೇನೆ ಉದ್ಧಟತನ ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ವಿಚಾರಕ್ಕೆ ಸ್ಯಾಂಡಲ್ ವುಡ್ ನಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಹಿರಿಯ ನಟ ಜಗ್ಗೇಶ್, ಕನ್ನಡ ಬಾವುಟಕ್ಕೆ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಅಲ್ಲದೇ ತಮ್ಮ ಟ್ವೀಟ್ ಗೆ ಸಿಎಂ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೇ ಕನ್ನಡಕ್ಕಾಗಿ ಹೋರಾಡಿದ ಸೈನಿಕರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಕೊನೆಗೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದಿದ್ದಾರೆ.
ಕೇವಲ ನಟ ಜಗ್ಗೇಶ್ ಮಾತ್ರವಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳು ವಂತೆ ಒತ್ತಾಯಿಸಿದ್ದಾರೆ. ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡದ ಸೇವಕರನ್ನು ಬಿಡುಗಡೆ ಮಾಡಿ ಎಂದಿದ್ದಾರೆ.
144 section in belagavi