ಸೋಮವಾರ, ಏಪ್ರಿಲ್ 28, 2025
Homekarnataka245 ದಿನ 29 ರಾಜ್ಯ, 24 ಸಾವಿರ ಕಿ.ಮೀ : ಲಿಮ್ಕಾ ದಾಖಲೆ ಸೇರಿದೆ ಯುವಕರ...

245 ದಿನ 29 ರಾಜ್ಯ, 24 ಸಾವಿರ ಕಿ.ಮೀ : ಲಿಮ್ಕಾ ದಾಖಲೆ ಸೇರಿದೆ ಯುವಕರ ಸೈಕಲ್‌ ಜಾಥಾ

- Advertisement -

ಬೆಂಗಳೂರು : ಅವರಿಬ್ಬರು ಬಿಕಾಂ ಪದವೀಧರರು. ಪರಿಸರ ಹಾಗೂ ಶಿಕ್ಷಣದ ಕುರಿತು ಜಾಗೃತಿ ಮೂಡಿಸಲು ಪಣತೊಟ್ಟಿದ್ದಾರೆ. ಇದಕ್ಕಾಗಿ ಅವರು ಕೈಗೊಂಡಿದ್ದು ಸೈಕಲ್‌ ಜಾಥಾ. ಜನರಲ್ಲಿ ಜಾಗೃತಿ ಮೂಡಿಸುತ್ತಾ ಬರೋಬ್ಬರಿ 24 ಸಾವಿರ ಕಿ.ಮೀ ದೂರವನ್ನು ಸೈಕಲ್‌ನಲ್ಲಿಯೇ ಕ್ರಮಿಸಿದ್ದಾರೆ. ದೇಶದಾದ್ಯಂತ 245 ದಿನಗಳ ಕಾಲ ಕೈಗೊಂಡಿರುವ ಯುವಕರು ದಾಖಲೆಯ ಜಾಥಾವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಮೂಲಕ ಯುವಕರು ಲಿಮ್ಕಾ ದಾಖಲೆ ( Limca Book of Records) ನಿರ್ಮಿಸಿದ್ದಾರೆ.

ಬೆಂಗಳೂರಿನ ಎಂ. ಧನುಷ್ (23 ವರ್ಷ ) ಮತ್ತು ವೈ.ಬಿ. ಹೇಮಂತ್ (23 ವರ್ಷ) ಎಂಬವರೇ ಈ ವಿಶಿಷ್ಟ ದಾಖಲೆಯನ್ನು ಮಾಡಿದವರು. 245 ದಿನಗಳಲ್ಲಿ 29 ರಾಜ್ಯ ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಕಲ್ ಜಾಥ ಕೈಗೊಂಡು ಶಿಕ್ಷಣ ಮತ್ತು ಪರಿಸರ ಜಾಗೃತಿ ಮೂಡಿಸಿ ಗಿನ್ನೆಸ್ ದಾಖಲೆ ( Limca Book of Records) ನಿರ್ಮಿಸಿದ್ದಾರೆ. ಈ ಯುವಕರು ಈಗಾಗಲೇ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ. ದೇಶದಾದ್ಯಂತ ಜಾಥಾ ನಡೆಸಿ ಕೋಲಾರ ಮೂಲಕ ಬೆಂಗಳೂರಿಗೆ ಆಗಮಿಸಿದ ಯುವಕರನ್ನು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

ಪರಿಸರ ಸಂರಕ್ಷಣೆ, ಕಡ್ಡಾಯ ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಬೆಂಗಳೂರಿನ ಶಿಶು ಮಂದಿರ್ ಸಂಸ್ಥೆಯ ರೋಟ್ರ್ಯಾಕ್ಟರ್ ಕ್ಲಬ್‌ನ ಇಬ್ಬರು ಯುವಕರು ಕಳೆದ 8 ತಿಂಗಳ ಹಿಂದೆ ಸೈಕಲ್ ಜಾಥಾ ಆರಂಭಿಸಿದ್ದರು. ಮಾ.12ರ ಶನಿವಾರ ಕೋಲಾರ ಜಿಲ್ಲೆಯ ಮುಖಾಂತರ ಬೆಂಗಳೂರು ನಗರಕ್ಕೆ ಆಗಮಿಸಿದರು. ಈ ಯುವಕರು ನಗರದ ಕಾಡುಗೋಡಿಯ ಮಹದೇವಪುರ ಕ್ಷೇತ್ರದವರಾಗಿದ್ದು ಕಳೆದ ಜುಲೈ 11 ರಂದು ಬೆಂಗಳೂರಿನ ವಿಧಾನಸೌಧದ ಎದುರು ಜಾಥಾ ಆರಂಭಿಸಿದ್ದು, ಯುವಕರು ಈವರೆಗೆ 29 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳನ್ನು ಸುತ್ತಿ ಬಂದಿದ್ದಾರೆ.

ಶಿಕ್ಷಣ ಮತ್ತು ಪರಿಸರ ಈ ಎರಡು ಸಧ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಚರ್ಚಿಸಬೇಕಾದ ವಿಷಯಗಳು. ಹೀಗಾಗಿ ಇವುಗಳ ಬಗ್ಗೆಯೇ ಜನರಲ್ಲಿ ಅರಿವು ಮೂಡಿಸುವ ಸಮಯದಲ್ಲಿ 4 ರಾಜ್ಯಗಳ ಮುಖ್ಯ ಮಂತ್ರಿಗಳು, ರಾಜ್ಯಪಾಲರು, ರಾಜ್ಯ ಕ್ರೀಡಾ ಸಚಿವರು, ಕಂದಾಯ ಸಚಿವರು, ಸಂಸದರು, ರೋಟರಿ ಮತ್ತು ರೋಟ್ರ್ಯಾಕ್ಟರ್ ಕ್ಲಬ್ಗಳು, ಅನೇಕ ಐಎಎಸ್ ಅಧಿಕಾರಿಗಳು ಹಾಗೂ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡಿ ಕಲ್ ಜಾಥದ ಉದ್ದೇಶವನ್ನು ತಿಳಿಸಿಕೊಟ್ಟಿದ್ದಾರೆ. ನಿರಂತರವಾಗಿ 19,500 ಕಿ.ಮೀ ವರೆಗಿನ ಜಾಥಾವು ಇದುವರೆಗಿನ ಗರಿಷ್ಠ ದಾಖಲೆಯಾಗಿದೆ. ಬೆಂಗಳೂರಿನ ಯುವಕರು ಆ ದಾಖಲೆಯನ್ನು ಮುರಿದು 24 ಸಾವಿರ ಕಿ.ಮೀ. ಸೈಕಲ್ ಜಾಥಾ ನಡೆಸಿದ್ದಾರೆ. ಈ ಯುವಕರು ಪ್ರತೀ ದಿನ 120 ಕಿ.ಮೀ ಪ್ರಯಾಣ ಮಾಡಿದ್ದು, ರಾತ್ರಿ ಸಮಯದಲ್ಲಿ ರೋಟರಿ ಕ್ಲಬ್‌ ವಿಶ್ರಾಂತಿ ಗ್ರಹದ ವ್ಯವಸ್ಥೆಯನ್ನು ಕಲ್ಪಿಸಿತ್ತು. ಅಲ್ಲದೇ ಐದು ಮಂದಿ ಯುವಕರ ತಂಡ ಇಬ್ಬರು ಯುವಕರ ಮೇಲೆ ಸದಾ ನಿಗಾ ಇರಿಸಿ ವ್ಯವಸ್ಥೆಯನ್ನು ಕಲ್ಪಿಸುವ ಕಾರ್ಯವನ್ನು ಮಾಡಿದ್ದಾರೆ.

ಶಾಸಕ ಅರವಿಂದ ಲಿಂಬಾವಳಿ ಅವರು ಮಾತನಾಡಿ, ಯುವಕರಿಬ್ಬರು ಒಳ್ಳೆಯ ಉದ್ದೇಶದಿಂದ ದೇಶಾದ್ಯಂತ ಸೈಕಲ್ ಜಾಥಾ ಕೈಗೊಂಡಿದ್ದುದು ಹಲವರಿಗೆ ಸ್ಫೂರ್ತಿ ಮತ್ತು ಮಾದರಿಯಾಗಿದೆ. ರೋಟರಿ ಸಂಸ್ಥೆಯು ಹಲವು ಸಾಮಾಜಿಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ವಿಶ್ವದಾದ್ಯಂತ ಘಟಕಗಳನ್ನು ಹೊಂದಿದೆ. ನಮ್ಮ ಕ್ಷೇತ್ರದಲ್ಲೂ ರೋಟರಿ ಕ್ಲಬ್ನವರು ಹಲವು ಕೆಲಸಗಳನ್ನು ಮಾಡುತ್ತಿದೆ. 10 ಲಕ್ಷ ಜನಸಂಖ್ಯೆಯುಳ್ಳ ಕ್ಷೇತ್ರ ನಮ್ಮದು. ನಮ್ಮ ಸರಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಸಿಎಸ್ಆರ್ ನಿಧಿಯನ್ನು ಬಳಸಿ ಕಟ್ಟುತ್ತಿದ್ದೇವೆ. ಹೀಗಾಗಿ ನಮ್ಮ ಜತೆಗೆ ರೋಟರಿ ಕ್ಲಬ್ನವರು ಕೂಡ ಇದಕ್ಕೆ ಕೈ ಜೋಡಿಸಿದರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದ ಅವರು, ಮುಂದಿನ ವರ್ಷ ಮತ್ತೆ ಸೈಕಲ್ ಜಾಥಾ ಮಾಡುವುದಾಗಿ ಈ ಯುವಕರು ಹೇಳುತ್ತಿದ್ದಾರೆ. ಯುವಕರು ಈ ರೀತಿ ಕೆಲಸಗಳನ್ನು ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.

ರೋಟರಿ ಡಿಸ್ಟ್ರಿಕ್ಟ್ 3190 ಗೌರ್ನರ್ ಫಜಲ್ ಮಹಮ್ಮದ್ ಮಾತನಾಡಿ, ಒಂದು ದಿನ ಮನೆಯಿಂದ ಹೊರಗೆ ಹೋದರೆ ಅವರ ಪೋಷಕರು ಆತಂಕಕ್ಕೆ ಒಳಗಾಗುವುದು ಸಹಜ. ಅಲ್ಲದೆ ಅವರು ಉಳಿಯುವುದೆಲ್ಲಿ, ಅವರಿಗೆ ಊಟ, ತಿಂಡಿ, ನಿದ್ದೆ ಇತ್ಯಾದಿಗಳ ಬಗ್ಗೆ ಆತಂಕ ಮೂಡುತ್ತದೆ. ಆದರೆ ಧನುಷ್ ಮತ್ತು ಹೇಮಂತ್ ಬರೋಬ್ಬರಿ 240 ದಿನ ಮನೆಯಿಂದ ಹೊರಗಿದ್ದುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಅದೂ ಸೈಕಲ್ ತುಳಿಯುತ್ತಾ ಸಾಗಿದ್ದುದು ಮತ್ತಷ್ಟು ಕಷ್ಟದ ಕೆಲಸ. ರೋಟರಿಯಿಂದ ಹಮ್ಮಿಕೊಂಡಿರುವ ಮೂಲ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಕೋವಿಡ್ನಂತಹ ಸಂದರ್ಭದಲ್ಲಿ ಪರಿಸರದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಒಂದು ಬಹುಮುಖ್ಯ ಉದ್ದೇಶವನ್ನು ಹೊತ್ತು ದೇಶ ಪರ್ಯಟನ ಮಾಡಿದ್ದು ಖುಷಿಯ ಸಂಗತಿ. ನಮ್ಮ ಕ್ಲಬ್ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ಇಂದು ಇವರು ಜಾಥಾ ಪೂರೈಸಿ ವಾಪಸಾದುದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ವೈಟ್‌ಫೀಲ್ಡ್‌ನ ದುರ್ಗಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ವಾಹನ ಸವಾರರಿಗೆ ಶಾಕ್: ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ರಾತ್ರಿ ಸಂಚಾರ ಬಂದ್

ಇದನ್ನೂ ಓದಿ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಡು ಪ್ಲೆಸಿಸ್‌ ನಾಯಕ

(245 Day 29 State, 24 Thousand Km Limca Book of Records Youth Cycle Jatha)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular