- ಸುಶ್ಮಿತಾ ಸುಬ್ರಹ್ಮಣ್ಯ
ಶಿವಮೊಗ್ಗ : ಮಳೆಗಾಲದಲ್ಲಿ ಆಗುಂಬೆ ಘಾಟ್ ರಸ್ತೆಯಲ್ಲಿ ಸಂಚರಿಸುವಾಗ ಚಾಲಕರು ಜಾಗರೂಕರಾಗಿರಬೇಕು. ಸ್ವಲ್ಪ ಯಾಮಾರಿದ್ರೂ ಅಪಾಯ ಫಿಕ್ಸ್. ಅಂತೆಯೇ ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ವೊಂದು ಘಾಟಿಯ ಕೆಳಗೆ ಜಾರಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುರುವಾರ ಆಗುಂಬೆ ಘಾಟ್‌ನ ಆರು ಹಾಗೂ ಏಳನೆ ತಿರುವಿನ ಮಧ್ಯದಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗ ಕಡೆಯಿಂದ ಭತ್ತವನ್ನು ತುಂಬಿಕೊಂಡು ಮಂಗಳೂರಿನ ಕಡೆಗೆ ಹೊರಟಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ರಸ್ತೆಯಿಂದ ಪ್ರಪಾತದತ್ತ ವಾಲಿದೆ. ಟ್ರಕ್ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಣಾಪಾಯದಿಂದ ಪಾರಾಗಿದ್ದಾರೆ.

ಆಗುಂಬೆ ಘಾಟ್ ರಸ್ತೆಯಲ್ಲಿ ಎಷ್ಟು ಹುಷಾರಾಗಿ ವಾಹನ ಚಲಾಯಿಸಿದರು ಸಾಕಾಗಲ್ಲ. ಅದರಲ್ಲೂ ಮಳೆಗಾಲದ ಮಂಜು ಮುಸುಕಿದ ವಾತಾವರಣದಲ್ಲಿ ದಾರಿ ಗೋಚರಿಸುವುದಿಲ್ಲ. ಚಾಲಕ ಟ್ರಕ್ ಚಲಾಯಿಸುವಾಗ ಪ್ರಪಾತದತ್ತ ಚಲಾಯಿಸಿದ್ದಾನೆ. ಆದ್ರೆ ಈ ರಸ್ತೆಯ ಬದಿಯಲ್ಲಿ ನಿರ್ಮಿಸಲಾಗಿದ್ದ, ಉಕ್ಕಿನ ತಡೆಗೋಡೆಯ ಮೇಲೆ ಟ್ರಕ್ ಹತ್ತಿ ನಿಂತಿದೆ. ಅರ್ಧ ಟ್ರಕ್ ಹೆದ್ದಾರಿ ಕಡೆ ಇದ್ದರೆ ಇನ್ನರ್ಧ ಟ್ರಕ್ ಪ್ರಪಾತದ ಕಡೆ ನೇತಾಡುತ್ತಿತ್ತು.

ಉಕ್ಕಿನ ತಡೆಗೋಡೆ ಇದ್ದಿದ್ದರಿಂದಾಗಿ ಟ್ರಕ್ ಪ್ರಪಾತಕ್ಕೆ ಉರುಳಿ ಭಾರೀ ಅನಾಹುತ ಉಂಟಾಗುವ ಸಾಧ್ಯತೆಯಿತ್ತು. ಈ ಕುರಿತು ಆಗುಂಬೆ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.