ಸೋಮವಾರ, ಏಪ್ರಿಲ್ 28, 2025
HomeCoastal Newsವಿಧಾನಸಭಾ ಚುನಾವಣೆ 2023: ಬಂಟ್ವಾಳದಲ್ಲಿ ಬಿಜೆಪಿಯಿಂದ ರಾಜೇಶ್ ನಾಯಕ್ Vs ಕಾಂಗ್ರೆಸ್ ನಿಂದ ಪದ್ಮರಾಜ್, ಅಶ್ವಿನ್...

ವಿಧಾನಸಭಾ ಚುನಾವಣೆ 2023: ಬಂಟ್ವಾಳದಲ್ಲಿ ಬಿಜೆಪಿಯಿಂದ ರಾಜೇಶ್ ನಾಯಕ್ Vs ಕಾಂಗ್ರೆಸ್ ನಿಂದ ಪದ್ಮರಾಜ್, ಅಶ್ವಿನ್ ಕುಮಾರ್ ರೈ

- Advertisement -

ಬಂಟ್ವಾಳ : ವಿಧಾನ ಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಉಳಿದಿದೆ. ಈ ನಡುವಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ (Bantwal Constituency) ಕ್ಷೇತ್ರದಲ್ಲೀಗ ಅಭ್ಯರ್ಥಿಗಳ ಕುರಿತು ಚರ್ಚೆ ಶುರುವಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ರಾಜೇಶ್ ನಾಯಕ್ ಅವರೇ ಮತ್ತೆ ಕಣಕ್ಕೆ ಇಳಿಯುವುದು ಖಚಿತ. ಆದರೆ ಕಾಂಗ್ರೆಸ್ ಪಕ್ಷದಲ್ಲೀಗ ಹೊಸ ಹೆಸರುಗಳು ಕೇಳಿಬರುತ್ತಿದೆ. ಅದ್ರಲ್ಲೂ ಪದ್ಮರಾಜ್ ಹಾಗೂ ಅಶ್ವಿನ್ ಕುಮಾರ್ ರೈ ಹೆಸರು ಮುಂಚೂಣಿಯಲ್ಲಿದೆ.

ಕರಾವಳಿ ಭಾಗದಲ್ಲಿಯೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರತೀ ಬಾರಿಯೂ ಕುತೂಹಲ ಮೂಡಿಸುತ್ತಿದೆ. ಹಿಂದೂ ಶಕ್ತಿಕೇಂದ್ರ ಎನಿಸಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಇಷ್ಟು ವರ್ಷಗಳ ಕಾಲ ಕಲ್ಲಡ್ಕ vs ರೈ ಪೈಪೋಟಿ ನಡೆಯುತ್ತಿದೆ. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ ರಾಜ್ಯದ 224 ವಿಧಾನಸಭಾ ಕೇತ್ರಗಳಲ್ಲಿಯೂ ಸಮೀಕ್ಷೆಯನ್ನು ನಡೆಸಿತ್ತು. ಈ ಪೈಕಿ ಬಂಟ್ವಾಳ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂದು ಹೈಕಮಾಂಡ್ ನಿರ್ಧಾರ ಮಾಡಿದಂತಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಅಶ್ವಿನ್ ಕುಮಾರ್ ರೈ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರ ಪರಮಾಪ್ತ ಪದ್ಮರಾಜ್. ಅಶ್ವಿನ್ ಕುಮಾರ್ ರೈ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ದಾಖಲಿಸಿತ್ತು. ಅಷ್ಟೇ ಯಾಕೆ ಅಶ್ವಿನ್ ಕುಮಾರ್ ರೈ ಅವಧಿಯಲ್ಲಿಯೇ ಬಿ.ರಮಾನಾಥ ರೈ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದ ಚುನಾವಣೆಯಲ್ಲಿ ಅಶ್ವಿನ್ ಕುಮಾರ್ ರೈ ಅವರ ಹೆಸರು ಬಂಟ್ವಾಳ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ಕೇಳಿಬಂದಿತ್ತಾದ್ರೂ ನಂತರದಲ್ಲಿ ರಮಾನಾಥ ರೈ ಅವರೇ ಗೆದ್ದು ಬಂದಿದ್ದರು.

ಆದ್ರೀಗ ಪಕ್ಷದ ಆಂತರಿಕ ಸಮೀಕ್ಷೆ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ವಯಸ್ಸಿನ ನೆಪವೊಡ್ಡಿ ಹೊಸ ಮುಖ ಹಾಗೂ ಯುವಕರಿಗೆ ಅವಕಾಶ ನೀಡಲು ಮುಂದಾಗಿದೆ. ಇದೇ ಕಾರಣಕ್ಕೆ ಇದೀಗ ಅಶ್ವಿನ್ ಕುಮಾರ್ ರೈ ಅವರ ಹೆಸರು ಬಲವಾಗಿ ಕೇಳಿಬರಲು ಆರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರ ಪರಮಾಪ್ತರಾಗಿದ್ದಾರೆ. ಅಶ್ವಿನ್ ಕುಮಾರ್ ರೈ ಅವರ ತಂದೆ ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಬಾರಿ ಅಶ್ವಿನ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ : ಕರ್ನಾಟಕ ಬಿಜೆಪಿಯಲ್ಲಿ ಭರ್ಜರಿ ಸರ್ಜರಿ : ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್, ಹಾಲಿ ಶಾಸಕರಿಗೆ ಟೆನ್ಶನ್

ಇನ್ನೊಂದೆಡೆಯಲ್ಲಿ ಸಾಮಾಜಿಕ ನಾಯಕರಾಗಿ ಹೆಸರು ಮಾಡಿರುವ ಪದ್ಮರಾಜ್ ಅವರ ಹೆಸರು ಬಂಟ್ವಾಳ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿಯಾಗಿರುವ ಪದ್ಮರಾಜ್ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ವಕೀಲರಾಗಿರುವ ಪದ್ಮರಾಜ್ ಅವರು ಜನಾರ್ಧನ ಪೂಜಾರಿ ಅವರ ಬಳಿಯಲ್ಲಿಯೇ ವಕೀಲ ವೃತ್ತಿ ಆರಂಭಿಸಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಪದ್ಮರಾಜ್ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಗುರು ಬೆಳದಿಂಗಳು ಸಂಸ್ಥೆಯನ್ನು ಕಟ್ಟುವ ಮೂಲಕ ಸಾಮಾಜಿಕ ಕಾರ್ಯದಲ್ಲಿಯೂ ತನ್ನನ್ನ ತೊಡಗಿಸಿಕೊಂಡಿದ್ದಾರೆ. ಯುವಕರನ್ನು ಕಾಂಗ್ರೆಸ್ ಪಕ್ಷದ ಕಡೆಗೆ ಸೆಳೆಯುವ ತಾಕತ್ತು ಹೊಂದಿರುವ ಪದ್ಮರಾಜ್ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕಾರ್ಯಕರ್ತರ ವಲಯದಲ್ಲಿಯೂ ಕೇಳಿಬಂದಿದೆ. ಇನ್ನು ಬಿ.ಕೆ.ಹರಿಪ್ರಸಾದ್, ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಾರಾಯಣ ಗುರುಗಳ ಪಠ್ಯ ಹಾಗೂ ಟ್ಯಾಬ್ಲೋ ವಿವಾದದ ಹೋರಾಟದಲ್ಲಿಯೂ ಪದ್ಮರಾಜ್ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬಿಲ್ಲವ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಎರಡು ಕಡೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಹೀಗಾಗಿ ಈ ಬಾರಿ ಬಿಲ್ಲವ ಸಮುದಾಯದ ಪದ್ಮರಾಜ್ ಅವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಇದನ್ನೂ ಓದಿ : ದ.ಕ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಹೊಸ ಮುಖ : ಪುತ್ತೂರು, ಬಂಟ್ವಾಳ ಸೇರಿ ಕಾಂಗ್ರೆಸ್ ನಲ್ಲಿ ಹಳಬರಿಗಿಲ್ಲ ಟಿಕೇಟ್

ಸದ್ಯ ಬಂಟ್ವಾಳ ಕ್ಷೇತ್ರದ ಶಾಸಕರಾಗಿರುವ ರಾಜೇಶ್ ನಾಯಕ್ ಅವರ ವಿರುದ್ದ ಯಾವುದೇ ಗುರುತರ ಆರೋಪಗಳಿಲ್ಲ. ಪಕ್ಷ ಬೇಧವಿಲ್ಲದೇ ಕೆಲಸ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವಲ್ಲಿಯೂ ರಾಜೇಶ್ ನಾಯಕ್ ಶ್ರಮಿಸಿದ್ದಾರೆ. ಪ್ರಗತಿಪರ ಕೃಷಿಕ ಎನಿಸಿಕೊಂಡಿರುವ ಶಾಸಕ ರಾಜೇಶ್ ನಾಯಕ್ ಅವರಿಗೆ ಕ್ಷೇತ್ರದಲ್ಲಿ ಬದಲಿ ನಾಯಕರಿಲ್ಲ.ಇದೇ ಕಾರಣಕ್ಕೆ ಬಿಜೆಪಿಯಿಂದ ರಾಜೇಶ್ ನಾಯಕ್ ಅವರೇ ಮುಂದಿನ ಬಾರಿಯೂ ಕಣಕ್ಕೆ ಇಳಿಯುವುದು ಖಚಿತ. ಈ ರೀತಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಎಲ್ಲರ ಗಮನ ಹಾಗೂ ಕುತೂಹಲವನ್ನು ಕೆರಳಿಸಿದೆ.

Assembly Elections 2023: Rajesh Naik from BJP Vs Padmaraj, Ashwin Kumar Rai from Congress in Bantwal Constituency

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular