ಕರ್ನಾಟಕ ವಿಧಾನಸಭಾ ಚುನಾವಣೆ 2023: ಮಂಗಳೂರು ದಕ್ಷಿಣದಲ್ಲಿ ವೇದವಾಸ್ ಕಾಮತ್ V/S ಐವನ್ ಡಿಸೋಜಾ ಬಿಗ್ ಫೈಟ್ ಸಾಧ್ಯತೆ

ಮಂಗಳೂರು : ವಿಧಾನಸಭಾ ಚುನಾವಣೆಯಲ್ಲಿ (Assembly Elections 2023) ಕರಾವಳಿ ಭಾಗದಲ್ಲಿಯೇ ಕುತೂಹಲ ಮೂಡಿಸುತ್ತಿರುವುದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಪ್ರತೀ ಚುನಾವಣೆಯಲ್ಲಿಯೂ ಎರಡೂ ಪಕ್ಷದ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಕ್ಷೇತ್ರದಲ್ಲೀಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ತಲಾ ಇಬ್ಬರ ಹೆಸರುಗಳು ಕೇಳಿಬರುತ್ತಿದೆ. ಸದ್ಯದ ಸ್ಥಿತಿಯಲ್ಲಿ ಹಾಲಿ ಶಾಸಕ ವೇದವ್ಯಾಸ ಕಾಮತ್ (Vedavyasa Kamath) ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಆದರೆ ಕಾಂಗ್ರೆಸ್ ನಲ್ಲಿ ಹಾಲಿ ಶಾಸಕ ಜೆ.ಆರ್.ಲೋಬೋ ಹಾಗೂ ಐವನ್ ಡಿಸೋಜಾ (Ivan DSouza) ನಡುವೆ ಪೈಪೋಟಿ ಏರ್ಪಟ್ಟಿದೆ.

ಬಿಜೆಪಿಯಿಂದ ಕಳೆದ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ನಮೋ ಬ್ರಿಗೆಡ್ ಸಂಸ್ಥಾಪಕ ನರೇಶ್ ಶೆಣೈ ಹೆಸರು ಕ್ಷೇತ್ರದಲ್ಲಿ ಬಲವಾಗಿ ಕೇಳಿಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ವೇದವ್ಯಾಸ ಕಾಮತ್ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ನರೇಶ್ ಶೆಣೈ ಹೆಸರು ಕೇಳಿಬರುತ್ತಿದೆಯಾದ್ರೂ ಕೂಡ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆ ತೀರಾ ಕಡಿಮೆ. ಹಾಲಿ ಶಾಸಕ ವೇದವ್ಯಾಸ ಕಾಮತ್ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಉತ್ತಮ ಕೆಲಸಗಾರ ಅನ್ನೋ ಮಾತು ಕೇಳಿಬರುತ್ತಿದೆ. ಒಂದು ಹಂತದಲ್ಲಿ ವೇದವ್ಯಾಸ ಕಾಮತ್ ಬಗ್ಗೆ ವಿರೋಧ ಕೇಳಿಬಂದಿತ್ತು. ಅಂದು ವಿರೋಧ ಮಾಡಿದವರು ಇಂದು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಸದ್ಯಕ್ಕೆ ವೇದವ್ಯಾಸ ಕಾಮತ್ ಅವರೇ ಅಭ್ಯರ್ಥಿಯಾಗುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರದಲ್ಲಿ ಒಂದಿಷ್ಟು ಅಪಸ್ವರ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಬಿಜೆಪಿ ಮುಖಂಡರು ಹಾಗೂ ಆರ್ ಎಸ್ ಎಸ್ ನಾಯಕರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ವೇದವ್ಯಾಸ ಕಾಮತ್ ಅವರೇ ಈ ಬಾರಿಯೂ ಬಿಜೆಪಿಯ ಅಭ್ಯರ್ಥಿ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಕಣಕ್ಕೆ ಇಳಿಯುವುದು ಖಚಿತ. ರಾಜ್ಯದಲ್ಲಿ ಕ್ರಿಸ್ತಿಯನ್ ಸಮುದಾಯಕ್ಕೆ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುತ್ತಿದೆ. ಒಂದು ಪುಲಕೇಶಿ ನಗರ ಮತ್ತೊಂದು ಮಂಗಳೂರು ದಕ್ಷಿಣ. ಹೀಗಾಗಿಯೇ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಶಾಸಕ ಜೆ.ಆರ್. ಲೋಬೋ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿಯ ಚುನಾವಣೆಯ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಜೆ.ಆರ್.ಲೋಬೋ ಅವರು ಕಳೆದ ಮೂರು ವರ್ಷಗಳಿಂದಲೂ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ. ಮುಂದಿನ ಚುನಾವಣೆಗೆ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ಜೆ.ಆರ್. ಲೋಬೋ ಅವರಿಗೆ ಈ ಬಾರಿ ಟಿಕೆಟ್ ಸಿಗುತ್ತೆ ಅನ್ನೋ ಖಚಿತತೆ ಇಲ್ಲ.

ಜೆ.ಆರ್. ಲೋಬೋ ಹಾಗೂ ಐವನ್ ಡಿಸೋಜಾ ಅವರ ನಡುವೆ ಪೈಪೋಟಿ ಏರ್ಪಟ್ಟಿದ್ದರೂ ಕೂಡ ಐವನ್ ಡಿಸೋಜಾ ಅವರಿಗೆ ಈ ಬಾರಿ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ. 2013ರ ಚುನಾವಣೆಯ ಹೊತ್ತಲೇ ಐವನ್ ಡಿಸೋಜಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿತ್ತು. ಆದರೆ ಅಂತಿಮ ಹಂತದಲ್ಲಿ ಜೆ.ಆರ್.ಲೋಬೋ ಅವರು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಕೊಂಡಿದ್ದರು. ಆದ್ರೀಗ ಮತ್ತೆ ದಕ್ಷಿಣ ಕ್ಷೇತ್ರದಲ್ಲಿ ಐವನ್ ಡಿಸೋಜಾ ಅವರ ಹೆಸರು ಕೇಳಿಬರುತ್ತಿದೆ. ಕಳೆದ ಚುನಾವಣೆಯ ಹೊತ್ತಲ್ಲಿ ಮೂಡಬಿದ್ರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಐವನ್ ಡಿಸೋಜಾ, ಇದೀಗ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದಾರೆ. ಮೂಡಬಿದ್ರೆಯಲ್ಲಿ ಡಿ.ಕೆ.ಶಿವಕುಮಾರ್ ತಮ್ಮ ಆಪ್ತ ಮಿಥುನ್ ರೈ ಅವರನ್ನು ಕಣಕ್ಕೆ ಇಳಿಸಲು ಮುಂದಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಐವನ್ ಡಿಸೋಜಾ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಎಐಸಿಸಿ ಕಾರ್ಯದರ್ಶಿಯಾಗಿ, ಕೇರಳ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ. ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾಗಿ ಅಷ್ಟೇ ಯಾಕೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಯಾಗಿಯೂ ಐವನ್ ಡಿಸೋಜಾ ಕೆಲಸ ಮಾಡಿದ್ದಾರೆ. ಪಕ್ಷದ ರಾಷ್ಟ್ರಮಟ್ಟದ ನಾಯಕರಾಗಿಯೂ ಐವನ್ ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಜೊತೆಗೂ ಕೂಡ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ವಕ್ತಾರರಾಗಿರುವ ಐವನ್ ಡಿಸೋಜಾ ಸೈ ಎನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಶತಾಯಗತಾಯ ಐವನ್ ಡಿಸೋಜಾ ಅವರನ್ನು ಕಣಕ್ಕೆ ಇಳಿಸಲು ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಹೀಗಾಗಿ ಐವನ್ ಡಿಸೋಜಾ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಒಂದೊಮ್ಮೆ ಐವನ್ ಡಿಸೋಜಾ ಕಾಂಗ್ರೆಸ್ ಅಭ್ಯರ್ಥಿಯಾದ್ರೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬಿಗ್ ಫೈಟ್ ಏರ್ಪಡುವುದರಲ್ಲಿ ಸಂದೇಹವೇ ಇಲ್ಲ.

ಇದನ್ನೂ ಓದಿ : ವಿಧಾನಸಭಾ ಚುನಾವಣೆ 2023 : ಕಾಪು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ Vs ರಾಜಶೇಖರ ಕೋಟ್ಯಾನ್ ಫೈಟ್

ಇದನ್ನೂ ಓದಿ : ವಿಧಾನಸಭಾ ಚುನಾವಣೆ 2023: ಬಂಟ್ವಾಳದಲ್ಲಿ ಬಿಜೆಪಿಯಿಂದ ರಾಜೇಶ್ ನಾಯಕ್ Vs ಕಾಂಗ್ರೆಸ್ ನಿಂದ ಪದ್ಮರಾಜ್, ಅಶ್ವಿನ್ ಕುಮಾರ್ ರೈ

Assembly Elections 2023: Vedavyasa Kamath from BJP Vs Ivan DSouza Congress Big Fight in Mangalore South Constituency

Comments are closed.