Rudresh Murder Case : ಮೃತ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಮನೆಯಲ್ಲಿ ತುತ್ತು ಕೂಳಿಗೂ ತತ್ವಾರ : ಆಶ್ವಾಸನೆ ಕೊಟ್ಟು ಮರೆತ ಸರಕಾರ

ಬೆಂಗಳೂರು : ಆಕೆ ಎಲ್ಲರಂತೆ ಗಂಡ ಮಕ್ಕಳು ಅಂತ ನೆಮ್ಮದಿಯಾಗಿ ಬದುಕುವ ಕನಸಿಟ್ಟುಕೊಂಡು ಸಪ್ತಪದಿ ತುಳಿದಿದ್ದಳು. ಆದರೆ ಸಂಘಟನೆ ರಾಷ್ಟ್ರ ಭಕ್ತಿ ಎಂದು ಹೋರಾಟಕ್ಕಿಳಿದ ಗಂಡ ವಯಸ್ಸಲ್ಲದ ವಯಸ್ಸಿನಲ್ಲಿ ಅಗಲಿ‌ ಹೋಗಿದ್ದಾನೆ. ಗಂಡ ಸತ್ತಾಗ ಸಾಂತ್ವನ ಕೊಟ್ಟವರದ್ದೆಲ್ಲ ಬರಿ‌ ಮಾತಿನ ಭರವಸೆಯಾಗಿಯೇ ಉಳಿದಿದೆ. ಇದರಿಂದಾಗಿ ಆಕೆ ಬದುಕಿಗಾಗಿ ಹೋರಾಡುತ್ತಿದ್ದಾಳೆ. ಇದ್ಯಾರ ಕತೆ ಅಂದ್ರುಕೊಂಡ್ರಾ ಇದು ಪಿಎಫ್ಐ ಸಂಘಟನೆಯಿಂದ ಹತ್ಯೆಗೀಡಾದ ರುದ್ರೇಶ್ (Rudresh Murder Case ) ಮಡದಿಯ ಸಂಕಷ್ಟದ ಕತೆ.

ಅದು ಅಕ್ಟೋಬರ್ 16, 2016 ರ ದಿನ.‌ ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಎಂಬಾತನನ್ನು ಪಿಎಫ್ ಐ ಸಂಘಟನೆಗೆ ಸೇರಿದವರು ಎನ್ನಲಾದ ಗೂಂಡಾಗಳು ಶಿವಾಜಿ ನಗರದಲ್ಲಿ ಹತ್ಯೆಗೈಯ್ದಿದ್ದರು. ಶಿವಮೊಗ್ಗ ಹರ್ಷ ಮಾದರಿಯಲ್ಲೇ ನಡೆದ ಈ ಹತ್ಯೆ ಆಗ ರಾಜ್ಯದಾದ್ಯಂತ ಸಂಚಲನ ಮೂಡಿಸಿತ್ತು. ಈ ವೇಳೆ ಸರ್ಕಾರ ರುದ್ರೇಶ್ ಪತ್ನಿಗೆ ಕೆಲಸದ ಭರವಸೆ ನೀಡಿತ್ತು. ಅಂದು ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಲಾಗಿತ್ತು. ಹರ್ಷ ಮಾದರಿಯಲ್ಲೇ ಘಟನೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಮಾತ್ರವಲ್ಲ ನೂರಾರು ರಾಜಕೀಯ ನಾಯಕರು ರುದ್ರೇಶ್ ಮನೆಗೆ ಭೇಟಿ ನೀಡಿದ್ದರು.

ರುದ್ರೇಶ್ ಪತ್ನಿ ವಿದ್ಯಾ ಹಾಗೂ ಇಬ್ಬರು ಪುಟ್ಟ ಮಕ್ಕಳಿಗೆ ಸಹಾಯದ ಭರವಸೆ ಹರಿದು ಬಂದಿತ್ತು. ಅಲ್ಪಸ್ವಲ್ಪ ಹಣ ಸಹಾಯವೂ ಸಿಕ್ಕಿತ್ತು. ಆದರೆ ಕಾಲ‌ ಕಳೆದಂತೆ ಈ ಕುಟುಂಬದ ಸ್ಥಿತಿ ದಯನೀಯ ಗತಿಗೆ ತಲುಪಿದೆ. ತಮಗೆ ಭರವಸೆ ನೀಡಿದ ಉದ್ಯೋಗಕ್ಕಾಗಿ ವಿದ್ಯಾ ರಾಜ್ಯ ಸರ್ಕಾರ ಹಾಗೂ ರಾಜಕಾರಣಿಗಳ ಮನೆಗೆ ಅಲೆದು ಸುಸ್ತಾಗಿದ್ದಾರಂತೆ. ರುದ್ರೇಶ್ ಹತ್ಯೆ ಯಾದಾಗ ಸಂಘಪರಿವಾರದವರು ಸ್ವಲ್ಪ ಹಣಸಹಾಯ ಮಾಡಿದ್ದರು. ಆದರೆ ಬಳಿಕ ಯಾರು ನಮ್ಮ ಕಡೆ ನೋಡಿಲ್ಲ.

ನಾನು ಉದ್ಯೋಗಕ್ಕಾಗಿ ಸಿ.ಟಿ.ರವಿ, ಆಶ್ವತ್ಥ್ ನಾರಾಯಣ್,ಪಿ.ಸಿ.ಮೋಹನ್,ಸಂತೋಷ್ ಜೀ ಎಲ್ಲರನ್ನು ಭೇಟಿ ಮಾಡಿದೆ. ಆದರೆ ಏನು ಪ್ರಯೋಜನವಾಗಲಿಲ್ಲ. ರುದ್ರೇಶ್ ತೀರಿಕೊಂಡಾಗ ಚಿಕ್ಕವರಿದ್ದ ಮಕ್ಕಳು ಈಗ ನಾಲ್ಕು ಮತ್ತು ಐದನೇ ತರಗತಿಯಲ್ಲಿ ಓದುತ್ತಿದ್ದಾರೆ. ತುತ್ತು ಕೂಳಿಗಾಗಿ ಹಾಗೂ ಮಕ್ಕಳನ್ನು ಸಲಹುವುದಕ್ಕಾಗಿ ನಾನು ಮನೆಯಲ್ಲೇ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಕಷ್ಟದಲ್ಲಿ ಮಕ್ಕಳನ್ನು ಸಾಕುತ್ತಿದ್ದೇನೆ.

ಆಗ ಕಾಂಗ್ರೆಸ್ ಸರ್ಕಾರವಿತ್ತು. ಆಗ ಉದ್ಯೋಗ ಸಿಗಲಿಲ್ಲ. ಈಗ ಬಿಜೆಪಿಯೇ ಅಧಿಕಾರದಲ್ಲಿದೆ. ಈಗಲಾದರೂ ನನಗೆ ಒಂದು ಉದ್ಯೋಗ ಕೊಡಿ.‌ ಪಕ್ಷಕ್ಕಾಗಿ, ಸಂಘಟನೆಗಾಗಿ ನನ್ನ ಗಂಡ ಬಲಿಯಾಗಿದ್ದಾರೆ. ಅವರ ತ್ಯಾಗವನ್ನು ಬಲಿದಾನವನ್ನು ವ್ಯರ್ಥ ಮಾಡಬೇಡಿ ಎಂದು ಕಣ್ಣೀರಿಡುತ್ತಿದ್ದಾರೆ ರುದ್ರೇಶ್ ಪತ್ನಿ ವಿದ್ಯಾ. ಒಟ್ಟಿನಲ್ಲಿ ಹಿಂದೂ ಪರ ಸಂಘಟನೆಯ ಹೆಸರಿನಲ್ಲಿ ಬಲಿಯಾದವರ ಕುಟುಂಬದ ಗೋಳು ಯಾರು ಕೇಳೋರಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇನ್ನಾದರೂ ಯುವಕರು ಪ್ರಚೋದನೆಗೆ ಒಳಗಾಗಿ ಜೀವ ಬಲಿಕೊಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ : ಹೈಕೋರ್ಟ್‌ನಲ್ಲಿ ಪ್ರತಿಧ್ವನಿಸಿದ ಇಸ್ಲಾಮಿ ಸಂಘಟನೆಗಳ ಹೆಸರು ಮತ್ತು ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ

ಇದನ್ನೂ ಓದಿ : ಮೃತ ಹರ್ಷ ತಾಯಿಗೆ ಬಿಜೆಪಿ ಟಿಕೇಟ್ : ಈಶ್ವರಪ್ಪ, ಯಡಿಯೂರಪ್ಪ ಎದೆಯಲ್ಲಿ ನಡುಕ

( RSS Activist Rudresh Murder Case: State Government Fails, family in distress )

Comments are closed.