ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸ್ತಿರುವ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ಭಾರತ ಜೋಡೋ ಯಾತ್ರೆ, ನಾಳೆ ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ. ನಾಳೆಯಿಂದ 21 ದಿನ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಲಿದ್ದಾರೆ.
ಸ್ಪೆಪ್ಟೆಂಬರ್ 8 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಈ ಭಾರತ್ ಜೋಡೋ ಯಾತ್ರೆಯನ್ನ ರಾಹುಲ್ ಗಾಂಧಿ ಆರಂಭಿಸಿದ್ರು. ಇಂದು ಈ ಭಾರತ್ ಜೋಡೋ ಯಾತ್ರೆ 22 ನೇ ದಿನಕ್ಕೆ ಕಾಲಿಟ್ಟಿದೆ. ತಮಿಳುನಾಡು ಮುಗಿಸಿ ಕೇರಳದಲ್ಲಿ ಯಾತ್ರೆ ಮಾಡಿದ್ದ ರಾಹುಲ್ ಗಾಂಧಿ ನಾಳೆ ಗುಂಡ್ಲುಪೇಟೆಯಿಂದ ಕರ್ನಾಟಕಕ್ಕೆ ಕಾಲಿಡಲಿದ್ದಾರೆ.
ರಾಜ್ಯದಲ್ಲಿ 21 ದಿನ ಯಾತ್ರೆ : ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವೈನಾಡುವಿನಿಂದ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪುವ ಭಾರತ್ ಜೋಡೋ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ಕೈಪಡೆ ಪಾದಯಾತ್ರೆ ನಡೆಸಲಿದೆ. ಚಾಮರಾಜ ನಗರ, ಮೈಸೂರು ನಗರ, ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಭಾರತ್ ಜೋಡೋ ಯಾತ್ರೆ ಕ್ರಮಿಸಲಿದೆ. ರಾಹುಲ್ ಗಾಂಧಿಯಾತ್ರೆ ಭಾರತ್ ಜೋಡೋ ಯಾತ್ರೆ ಅಂತಾ ಹೆಸರಿದ್ರೂ, ಕರ್ನಾಟಕದಲ್ಲಿ ಕನ್ನಡಕ್ಕೆ ಅನುಗುಣವಾಗಿ ಇದನ್ನ ಭಾರತದ ಐಕ್ಯತಾ ಯಾತ್ರೆ ಅಂತಾ ಹೆಸರಿಟ್ಟುಕೊಳ್ಳಲಾಗಿದೆ.
ನಾಳೆ ಗುಂಡ್ಲುಪೇಟೆಯಲ್ಲಿ ಆರಂಭವಾಗುವ ಯಾತ್ರೆ ಮಧ್ಯಾಹ್ನದ ಊಟಕ್ಕೂ ಮುನ್ನ ಬೆಂಡಗಳ್ಳಿಯಲ್ಲಿ ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್ ನಡೆಸಲಿದ್ದಾರೆ. ಇದಾದ ನಂತರ ಬೇಗೂರು ಸಮೀಪ ಮೊದಲ ದಿನ ವಾಸ್ತವ್ಯ ಹೂಡಲಿದ್ದು, ಸಂಜೆ ಹೊತ್ತಿಗೆ ವಕೀಲರು, ವಿದ್ಯಾರ್ಥಿಗಳು, ಚಿಂತಕರು, ಕಲಾವಿದರೊಟ್ಟಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇರುವ ಹಿನ್ನೆಲೆ ನಂಜನಗೂಡು ತಾಲೂಕಿನ ಬದನವಾಳುವಿಗೆ ರಾಹುಲ್ ಗಾಂಧಿ ಭೇಟಿ ಕೊಡಲಿದ್ದಾರೆ. ಮಹಾತ್ಮ ಗಾಂಧೀಜಿ ಬದನವಾಳುವಿಗೆ ಬಂದು ಖಾದಿ ಉದ್ಯಮವನ್ನು ಉತ್ತೇಜಿಸಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದ್ದರು.
ಜೋಡೋ ಯಾತ್ರೆ ರಾಜ್ಯದಲ್ಲಿ ಆರಂಭವಾಗುವ ಗುಂಡ್ಲುಪೇಟೆ ತಾಲೂಕಿನ ಹಾದಿಯನ್ನು 4-5 ಬಾರಿ ಕೈ ನಾಯಕರು ಪರಿಶೀಲನೆ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್, ಸಲೀಂ ಅಹಮ್ಮದ್ ಹಾಗೂ ಹರಿಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. 20 ಸಾವಿರ ಕಾರ್ಯಕರ್ತರು ರಾಗಾ ಜೊತೆ ಹೆಜ್ಜೆ ಹಾಕುವ ನಿರೀಕ್ಷೆ ಇದೆ. ಇನ್ನು, ಆಯುಧ ಪೂಜೆ ಮತ್ತು ವಿಜಯದಶಮಿ ದಿನದಂದು ಯಾತ್ರೆಗೆ ವಿರಾಮ ಇರಲಿದೆ.
ಯಾತ್ರೆಯ ರೂಟ್ ಮ್ಯಾಪ್ : ಒಟ್ಟು ಮೂರು ಹಂತದಲ್ಲಿ ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಯಲಿದೆ. ತಮಿಳುನಾಡು ರಾಜ್ಯದಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಸಂಚಾರ ಮಾಡಲಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಲಾಗುತ್ತದೆ. ರಂಗನಾಥಪುರದಿಂದ ತುಮಕೂರಿನ ತುರುವೇಕೆರೆ ನಂತರ ಇಲ್ಲಿಂದ ಚಿಕ್ಕನಾಯಕನಹಳ್ಳಿ ಹುಳಿಯಾರ್ ಮೂಲಕ ಚಿತ್ರದುರ್ಗ ಹಿರಿಯೂರುಗೆ ಪಾದಯಾತ್ರೆ ತೆರಳಲಿದೆ. ಹಿರಿಯೂರಿನಿಂದ ಚಳ್ಳಕೇರೆಗೆ, ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ತೆರಳಲಿದ್ದು, ಅಲ್ಲಿಂದ ಆಂಧ್ರ ಪ್ರವೇಶವನ್ನು ಪಾದಯಾತ್ರೆ ಪ್ರವೇಶಿಸಲಿದೆ. ಹೀರೆಹಾಳ್ ನಿಂದ ಓಬಾಳಪುರ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಲಾಗುತ್ತದೆ. ಹಲಕುಂಡಿ, ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ಆರಂಭಗೊಂಡು ಅಲ್ಲಿಂದ ಅಲುರ್ ಮೂಲಕ ಆಂಧ್ರ ಪ್ರವೇಶ ಮಾಡಲಿದೆ. ಮಾಧವರಂ ಮೂಲಕ ರಾಯಚೂರಿನ ಗಿಲ್ಲೆಸೂಗೂರು ಮೂಲಕ ಪಾದಯಾತ್ರೆ ತಂಡ ಪ್ರವೇಶ ಮಾಡಲಿದೆ. ಗಿಲ್ಲೆಸೂಗೂರು ನಿಂದ ಯರೇಗಾರಕ್ಕೆ ಪಾದಯಾತ್ರೆ ಸಂಚರಿಸಲಿದೆ. ಯರೇಗಾರ ಮೂಲಕ ರಾಯಚೂರು, ರಾಯಚೂರಿನಿಂದ ದೇವಸೂಗೂರುಗೆ ಭಾರತ್ ಜೋಡೋ ಯಾತ್ರೆ ತೆರಳಲಿದೆ. ದೇವಸೂಗೂರಿನಿಂದ ವಿಕಾರಬಾದ್ ಮೂಲಕ ತೆಲಂಗಾಣಕ್ಕೆ ಪ್ರವೇಶ ಮಾಡಲಿದೆ.
ಇದನ್ನೂ ಓದಿ: NEW CDS : ಮೂರು ಸೇನೆಗಳ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ
ಇದನ್ನೂ ಓದಿ: Ponniyin Selvan : ಸಿನಿಮಾ ರಿಲೀಸ್ ಆದ್ರೆ ದಾಳಿ ಖಚಿತ: ಪೊನ್ನಿಯಿನ್ ಸೆಲ್ವನ್ ಗೆ ಬೆದರಿಕೆ ಮೇಲ್
BHARAT JODO YATRE Rahul Gandhi yatre entry Karnataka by tomorrow