ಚಿಕ್ಕಮಗಳೂರು : ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ವಾಹನಗಳ ಸಂಚಾರ ಬಂದ್ ಮಾಜಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಮರಗಳು ಉರುಳಿ ಬೀಳುತ್ತಿವೆ. ಅದ್ರಲ್ಲೂ ರಾತ್ರಿಯ ಹೊತ್ತಲ್ಲಿ ದಟ್ಟ ಮಂಜಿನಿಂದಾಗಿ ಅಪಘಾತಗಳು ಹೆಚ್ಚುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಈ ತೀರ್ಮಾನ ಕೈಗೊಂಡಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾದ ಶಾಲೆಯಲ್ಲಿ ನಡೆಯುತ್ತೆ ಕನ್ನಡ ಪಾಠ

ಆರೋಗ್ಯ ಸೇವೆಯ ಅಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉಳಿದಂತೆ ಬಸ್ ಹಾಗೂ ಇತರ ವಾಹನಗಳು ಬೆಳಗ್ಗ 6 ಗಂಟೆ ಯಿಂದ ಸಂಜೆ 7 ಗಂಟೆಯವರೆಗೆ ಮಾತ್ರವೇ ಸಂಚಾರ ನಡೆಸಬಹುದಾಗಿದೆ.

ಇನ್ನು ಶಿರಾಡಿಘಾಟ್ ರಸ್ತೆ ಬಂದ್ ಆದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿತ್ತು. ಬೆಂಗಳೂರು, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಪ್ರಯಾಣಿಸುವ ವಾಹನಗಳು ಇದೇ ಮಾರ್ಗದಲ್ಲಿಯೇ ಸಂಚಾರ ನಡೆಸುತ್ತಿದ್ದು, ವಾಹನ ದಟ್ಟಣೆ ಹೆಚ್ಚಳವಾಗಿತ್ತು.