ಸೋಮವಾರ, ಏಪ್ರಿಲ್ 28, 2025
Homekarnatakaಹೆಣ್ಣು ಶಿಶು ಜನನ ಪ್ರಮಾಣ ಕ್ಷೀಣ : ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆತಂಕ

ಹೆಣ್ಣು ಶಿಶು ಜನನ ಪ್ರಮಾಣ ಕ್ಷೀಣ : ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆತಂಕ

- Advertisement -

Baby Girl Birth rate Low : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಣ್ಣು ಶಿಶು ಜನನ ಪ್ರಮಾಣದಲ್ಲಿ ಕ್ಷೀಣವಾಗುತ್ತಿರುವ ಕುರಿತು ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಿಎನ್‌ ಮೀನಾ ನಾಗರಾಜ್‌ (DC Meena Nagaraj) ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿಲ್ಲೆಯಲ್ಲಿನ ಎಲ್ಲಾ ವೈದ್ಯರು ಗಂಭೀರವಾಗಿ ಚಿಂತಿಸಿ ಆತ್ಮ ಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಚಿಕ್ಕಮಗಳೂರು ನಗರ ಭಾರತೀಯ ವೈದ್ಯಕೀಯ ಸಂಘದ ಕಟ್ಟಡದಲ್ಲಿ ಏರ್ಪಡಿಸಿದ್ದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಹಾಗೂ ಕೆ.ಪಿ.ಎಂ.ಇ ಕಾಯಿದೆಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Chikkamagaluru Baby Girl Birth rate Low  DC Meena Nagaraj is worried
Image Credit to Original Source

ಕಳೆದ 10 ವರ್ಷಗಳ ಸರಾಸರಿ ಜನನ ಪ್ರಮಾಣವನ್ನು ಗಮನಿಸಿದರೆ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಜನನ ಪ್ರಮಾಣದ ಅನುಪಾತದಲ್ಲಿ ಹೆಣ್ಣು ಮಕ್ಕಳ ಜನನ ಕಡಿಮೆಯಾಗುತ್ತಿದೆ. ಈ ಬಗ್ಗೆ ಆತಂಕ ಪಡುವಂತಾಗಿದೆ. ಸ್ವಾಭಾವಿಕವಾಗಿ ಗಂಡು ಮಕ್ಕಳ ಜನನ ಪ್ರಮಾಣ ಹೆಚ್ಚಾದರೂ ಚಿಂತೆ ಇಲ್ಲ ಆದರೆ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದಿದ್ದಾರೆ.

ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳಲ್ಲಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂತಹ ಪ್ರಕರಣಗಳು ನಡೆದಿಲ್ಲವಾದರೂ ಕಳಸ, ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಸರಾಸರಿ 10 ವರ್ಷದ ಅವಧಿಯಲ್ಲಿ ಹೆಣ್ಣು ಶಿಶುಗಳ ಜನನ ಪ್ರಮಾಣ ಕಡಿಮೆ ಇದೆ. ಇದರ ಕಾರಣ ಹುಡುಕಬೇಕಾಗಿದೆ. ವೈದ್ಯರು ಪ್ರತ್ಯಕ್ಷವಾದ ದೇವರು ಎಂಬ ಭಾವನೆ ಇದ್ದು, ಲಿಂಗ ತಾರತಮ್ಯಕ್ಕೆ ಅವಕಾಶ ನೀಡದಂತೆ ಮನಸಾಕ್ಷಿಯಿಂದ ಕಾರ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಇದನ್ನೂ ಓದಿ : ಯುವನಿಧಿ ಯೋಜನೆ : ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗಲ್ಲ ಯುವನಿಧಿ ಹಣ, ಇಲ್ಲಿದೆ ಯುವನಿಧಿ ಅರ್ಹತಾ ಪಟ್ಟಿ

ಲಿಂಗ ಪತ್ತೆಯ ಬಗ್ಗೆ ಅಪರಾಧ ಕಾನೂನು ಜಾರಿಯಲ್ಲಿದೆ. ಇದರ ಅನುಷ್ಠಾನ ಕಟ್ಟುನಿಟ್ಟಾಗಿ ಪಾಲನೆಯಾಗಬೇಕಾಗಿದೆ. ಸರ್ಕಾರಿ ಆಸ್ಪತ್ರೆ ವೈದ್ಯರುಗಳು ಈ ನಿಯಮವನ್ನು ಪಾಲಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳವರು ಸಹ ಸರ್ಕಾರಿ ವೈದ್ಯರೊಂದಿಗೆ ಸಹಕರಿಸುವ ಮೂಲಕ ಲಿಂಗ ತಾರತಮ್ಯಕ್ಕೆ ಅವಕಾಶವಾಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಎಲ್ಲಾ ಕ್ಷೇತ್ರಗಳಲ್ಲೂ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆಯಾದರೂ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಆತಂಕಕ್ಕೀಡುಮಾಡಿರುವ ವಿಷಯವಾಗಿದೆ. ಇದಕ್ಕೆ ಕಾರಣ ಹುಡುಕುವ ಜೊತೆಗೆ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ನಿಗಾ ವಹಿಸಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ : ಶಕ್ತಿ ಯೋಜನೆ ವಿಸ್ತರಣೆ, ಖಾಸಗಿ ಬಸ್‌ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ

ಕಾರ್ಯಾಗಾರದಲ್ಲಿ ಲಿಂಗಪತ್ತೆ ಮತ್ತು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಕಾನೂನು ಹಾಗೂ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ | ಅಶ್ವಥ್‌ಬಾಬು ಮಾತನಾಡಿ ಪ್ರತೀ 3 ವರ್ಷಕ್ಕೊಮ್ಮೆ ಸರ್ಕಾರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಮತ್ತು ತಪಾಸಣಾ ಹಾಗೂ ಮೇಲ್ವಿಚಾರಣ ಎಂಬ 3ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಭ್ರೂಣ ಮತ್ತು ಲಿಂಗಪತ್ತೆ ಕುರಿತಂತೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿದೆ ಎಂದು ವಿವರಿಸಿದರು.

Chikkamagaluru Baby Girl Birth rate Low  DC Meena Nagaraj is worried
Image Credit to Original Source

ಜಿಲ್ಲೆಯಲ್ಲಿ ಡಾ|| ಸಂತೋಷ್ ನೇತಾ ಹಾಗೂ ಡಾ|| ಅನುರಾಧ ಪ್ಯಾಟ್ರಿಕ್ ನೇತೃತ್ವದಲ್ಲಿ ವಕೀಲರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳ ಗೊಂಡಂತೆ ಜಿಲ್ಲಾ ಸಲಹಾ ಸಮಿತಿಯನ್ನು ರಚಿಸಿದ್ದು, ಈ ಸಮಿತಿ ಆಗಿಂದಾಗ್ಗೆ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡುತ್ತದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ ಜಿಲ್ಲಾ ಮಟ್ಟದ ತಪಾಸಣಾ ಮತ್ತು ನಿರ್ವಹಣಾ ಸಮಿತಿಗೆ ಡಾ| ವಿಜಯಲಕ್ಷ್ಮಿ ನೇತೃತ್ವದಲ್ಲಿ ಖಾಸಗಿ ವೈದ್ಯರು ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲೀಕರು, ಕಾನೂನು ಸಲಹೆಗಾರರನ್ನೊಳಗೊಂಡಂತೆ ಸಮಿತಿ ರಚಿಸಿದ್ದು ಈ ಸಮಿತಿ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ತಪಾಸಣೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಆಯುಷ್ಮಾನ್ ಭಾರತ್ ಕಾರ್ಡ್ 2024 : ನಿಮ್ಮ ಮೊಬೈಲ್‌ನಿಂದಲೇ ಡೌನ್‌ಲೋಡ್ ಮಾಡಿ

ಲಿಂಗಪತ್ತೆ ಅಪರಾಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರವಿದ್ದು ಅಪರಾಧ ಎಸಗುವ ಸ್ಕ್ಯಾನಿಂಗ್ ಸೆಂಟರ್ ಅಥವಾ ಸಂಬಂಧಿಸಿದ ವೈದ್ಯರ ಮೇಲೆ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ತಿಳಿಸಿದರು.

ಜಿಲ್ಲಾ ಸಲಹಾ ಸಮಿತಿ ಪದಾಧಿಕಾರಿಗಳಾಗಿ ಡಾ| ಸಂತೋಷ್ ನೇತಾ, ಡಾ| ಅನುರಾಧ ಪ್ಯಾಟ್ರಿಕ್, ಡಾ| ವಿನಯ್, ವಕೀಲ ಪ್ರಕಾಶ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ. ಮಂಜೇಗೌಡ ಸರ್ಕಾರೇತರ ಸಂಸ್ಥೆಗಳಿಂದ ಪ್ರವೀಣ್ ಬಿ.ಎಲ್, ರೋಟರಿ ರಘುನಂದನ್ ಎಂ.ಎಲ್, ಮಹಿಳಾ ಪ್ರತಿನಿಧಿಯಾಗಿ ಕಾವ್ಯ ಸಂತೋಷ್ ನೇಮಕಗೊಂಡಿದ್ದಾರೆಂದು ಹೇಳಿದರು.

Chikkamagaluru Baby Girl Birth rate Low DC Meena Nagaraj is worried

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular