ಬೆಂಗಳೂರು : CM Basavaraja Bommai : ಹಿಂದೂ ಕಾರ್ಯಕರ್ತ, ಭಜರಂಗ ದಳ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಸಂಪೂರ್ಣ ಕರ್ನಾಟಕದಲ್ಲಿ ಸೂತಕದ ಛಾಯೆ ಆವರಿಸಿದೆ. ಇಂದು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ಒಂದು ವರ್ಷದ ಸಂಭ್ರಮವನ್ನು ಆಚರಿಸಬೇಕಿತ್ತು. ಆದರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಜನೋತ್ಸವ ಕಾರ್ಯಕ್ರಮವನ್ನೇ ಸಿಎಂ ಬೊಮ್ಮಾಯಿ ರದ್ದುಗೊಳಿಸಿದ್ದಾರೆ.
ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳಲಿದ್ದಾರೆ. ಇಲ್ಲಿಂದ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹತ್ಯೆಯಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಿಎಂ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಂಗಳವಾರ ರಾತ್ರಿ ದುಷ್ಕರ್ಮಿಗಳ ಭೀಕರ ಅಟ್ಟಹಾಸಕ್ಕೆ ಪ್ರವೀಣ್ ನೆಟ್ಟಾರು ಬಲಿಯಾಗಿದ್ದಾರೆ. ಕೇರಳದ ನಂಬರ್ ಪ್ಲೇಟ್ ಹೊಂದಿರುವ ಬೈಕ್ನಲ್ಲಿ ಬಂದಿದ್ದ ಮೂವರು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಚಿಕನ್ ಅಂಗಡಿ ಬಂದ್ ಮಾಡಿ ಮನೆಗೆ ತೆರಳಬೇಕಿದ್ದ ಪ್ರವೀಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಕೊಲೆಗೈದಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಇಂದು ಬಿಜೆಪಿ ಸರ್ಕಾರವು ಜನೋತ್ಸವ ಕಾರ್ಯಕ್ರಮವನ್ನು ನಡೆಸಬೇಕಿತ್ತು. ಅಲ್ಲದೇ ವಿಧಾನಸೌಧದಲ್ಲಿ ಸಾಧನಾ ಸಮಾವೇಶ ಕೂಡ ನಡೆಯುವುದಿತ್ತು. ಆದರೆ ಜಿಲ್ಲಾ ಬಿಜೆಪಿ ಯುವ ಮೋರ್ಛಾದ ಸದಸ್ಯ ಪ್ರವೀಣ್ ನೆಟ್ಟಾರೆ ಸಾವಿನ ಬಳಿಕ ಸಿಎಂ ಬೊಮ್ಮಾಯಿ ಈ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಶೋಕಾಚರಣೆ ನಡೆಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಸುಮ್ಮನೇ ಬಿಡುವುದಿಲ್ಲ. ಹರ್ಷ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದಂತೆ ಆದಷ್ಟು ಬೇಗ ಪ್ರವೀಣ್ ಕೊಲೆಗೆ ಕಾರಣರಾದ ಪ್ರತಿಯೊಬ್ಬರನ್ನೂ ಬಂಧಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : CM Bommai : ಅಗತ್ಯ ಎನಿಸಿದಲ್ಲಿ ಉತ್ತರ ಪ್ರದೇಶ ಮಾಡೆಲ್ ಕರ್ನಾಟಕದಲ್ಲಿ : ಎಚ್ಚರಿಕೆ ನೀಡಿದ ಸಿಎಂ ಬೊಮ್ಮಾಯಿ
CM Basavaraja Bommai will visit Praveen Nettaru’s residence today